ಬೆಂಗಳೂರು : ವಿದೇಶದಿಂದ ಬೆಂಗಳೂರಿಗೆ ಸೌಂದರ್ಯ ವರ್ಧಕಗಳ ಪಾರ್ಸೆಲ್ ಗಳಲ್ಲಿ ಡ್ರಗ್ಸ್ ತರಿಸಿಕೊಂಡಿದ್ದ ಯುವತಿಯನ್ನು ಕೇಂದ್ರ ಮಾದಕ ನಿಯಂತ್ರಣ ದಳ (ಎನ್ ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಯೋಗಿತಾ ಬಂಧಿತೆ. ಆಕೆಯಿಂದ 40 ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಜರ್ಮನಿಯಿಂದ ಅಂತಾರಾಷ್ಟ್ರೀಯ ಅಂಚೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ಬಂದಿತ್ತು. ಸೌಂದರ್ಯ ವರ್ಧಕಗಳು ಇರುವ ಪಾರ್ಸೆಲ್ ಎಂದು ಉಲ್ಲೇಖೀಸಲಾಗಿತ್ತು. ಆದರೆ, ಪಾರ್ಸೆಲ್‌ನಲ್ಲಿ ಮಾದಕ ವಸ್ತು ಎಂಡಿಎಂಎ ಬಂದಿರುವ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿದ್ದ ಎನ್‌ಸಿಬಿ ಅಧಿಕಾರಿಗಳು, ಯುವತಿ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುತ್ತಿದ್ದಂತೆ ಆಕೆಯನ್ನು ವಶಕ್ಕೆ ಪಡೆದುಕೊಂಡು, ಸೌಂದರ್ಯ ವರ್ಧಕಗಳಿದ್ದ ಬಾಕ್ಸ್‌ಗಳನ್ನು ತೆರೆದು ಪರಿಶೀಲನೆ ನಡೆಸಿತು.
ಇದನ್ನೂ ಓದಿ :ಉತ್ತರ ಪ್ರದೇಶದಲ್ಲಿ ವೈರಲ್ ಫಿವರ್ ಭೀತಿ : ಜನರ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ
ಈ ವೇಳೆ ಖಾಕಿ ಬಣ್ಣದ ರಟ್ಟಿನ ಬಾಕ್ಸ್ ಒಂದು ಭಾಗದಲ್ಲಿ ಹೆಚ್ಚುವರಿ ರಟ್ಟು ಹಾಕಿ ಮಧ್ಯೆ ಭಾಗದಲ್ಲಿ ಕವರ್‌ನಲ್ಲಿ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಸೌಂದರ್ಯ ವರ್ಧಕಗಳಲ್ಲಿ ಎಂಡಿಎಂಎ ಡ್ರಗ್ಸ್ ಹರಳುಗಳನ್ನು ಬಚ್ಚಿಟ್ಟು ಪಾರ್ಸೆಲ್ ಸಿದ್ಧಪಡಿಸಲಾಗಿತ್ತು. ಆಫ್ರಿಕಾ ಪ್ರಜೆಗಳ ಜತೆ ನಂಟು ಹೊಂದಿದ್ದ ಆರೋಪಿ ಯೋಗಿತಾ, ಪಾರ್ಸೆಲ್‌ನಲ್ಲಿ ಡ್ರಗ್ಸ್ ತರಿಸಿ ನಗರದ ಹಲವರಿಗೆ ಮಾರಾಟ ಮಾಡುತ್ತಿದ್ದರು. ಮೂರು ವರ್ಷಗಳಿಂದ ಆರೋಪಿ ಯುವತಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.