ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಮಂದಿಯಿಂದ ಕೋಟ್ಯಂತರ ರೂ. ವಂಚಿಸಿದ ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸುರು ಬಂಧಿಸಿದ್ದಾರೆ.
ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್ ಬಿಲ್ಲಾ ನಾಯಕ್ (45) ಹಾಗೂ ಆತನ ಸ್ನೇಹಿತ ಅನಿಲ್ (41) ಬಂಧಿತರು. ಆರೋಪಿಗಳು ಸುಮಾರು 500ಕ್ಕೂ ಅಧಿಕ ಮಂದಿಗೆ ಸುಮಾರು 15-18 ಕೋಟಿ ರೂ. ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ, ಆತನ ಖಾತೆ ಪರಿಶೀಲಿಸಿದಾಗ ಸುಮಾರು 2.5 ಕೋಟಿ ರೂ. ಹಣ ಇರುವುದು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಮಂಜುನಾಥ್ ಬಿಲ್ಲಾ ನಾಯಕ್ ಕೆಎಸ್‌ಆರ್‌ಟಿಸಿ ಚಾಲಕನಾಗಿದ್ದು, ತನ್ನ ಸ್ನೇಹಿತರನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ದಂಧೆ ನಡೆಸುತ್ತಿದ್ದ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ವಿ.ಎಸ್.ಅರಗಿಶೆಟ್ಟಿ ಎಂಬವರಿಗೆ ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ 11 ಲಕ್ಷರೂ. ವಂಚಿಸಿದ್ದರು. ಬೆಂಗಳೂರಿನಲ್ಲಿ ಬಿಡೂÉéಎಸ್‌ಎಸ್‌ಬಿಯಲ್ಲಿ ಎಸ್‌ಡಿಎ ಆಗಿರುವ ಅವರ ಸಹೋದರ ವೀರೇಶ್ ಮನೆಗೆ ಹೋಗಿ ವಾಪಸ್ ಹೋಗುವಾವ ಆರೋಪಿ ಮಂಜುನಾಥ್ ಪರಿಚಯವಾಗಿದೆ. ಈ ವೇಳೆ ಆರೋಪಿ ತನಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಪರಿಚಯವಿದ್ದಾರೆ ಎಂದು ಹೇಳಿ, ಟ್ರಾಫಿಕ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾನೆ. ನಂತರ 2018ರಲ್ಲಿ ಬೆಂಗಳೂರಿನ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು 2019ರವರೆಗೆ ವಿವಿಧ ಹಂತದಲ್ಲಿ 11 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾನೆ. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮಂಜುನಾಥ್ ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾನೆ. ಅದಕ್ಕಾಗಿ ಕಾರೊಂದನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸರ್ಕಾರದ ನಾಮಫಲಕ ಹಾಕಿಕೊಂಡು ಉತ್ತರ ಕರ್ನಾಟಕದಲ್ಲಿ ತನ್ನ ಸ್ನೇಹಿತರ ಸುತ್ತಾಡುತ್ತಿದ್ದ. ಈ ವೇಳೆ ಪರಿಚಯವಾಗುವ ಮತ್ತು ಕರ್ತವ್ಯದ ವೇಳೆಯಲ್ಲಿ ಪರಿಚಯವಾಗುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಕೆಎಸ್‌ಆರ್‌ಟಿಸಿಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಇದುವರೆಗೂ ಸುಮಾರು 500 ಮಂದಿಗೆ ಇದೇ ರೀತಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 15ರಿಂದ 18 ಕೋಟಿ ರೂ. ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ :ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ
ಮಧ್ಯವರ್ತಿಗಳಿಂದ ವಸೂಲಿ
ಹಣ ವಸೂಲಿಗೆಂದೇ ಆರೋಪಿ ಸುಮಾರು 30 ಮಂದಿ ಸ್ನೇಹಿತರನ್ನು ಮಧ್ಯವರ್ತಿಗಳನ್ನಾಗಿ ನೇಮಿಸಿಕೊಂಡಿದ್ದಾನೆ. ಸರ್ಕಾರ ಮತ್ತು ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು, ರಾಜಕೀಯ ಮುಖಂಡರು ಪರಿಚಯವಿದ್ದಾರೆ ಎಂದು ನಂಬಿಸುತ್ತಿದ್ದ. ನಂಬಿದ ಸಾರ್ವಜನಿಕರಿಂದ ಹಣ ವಸೂಲಿಗೆ ಮಧ್ಯವರ್ತಿಗಳನ್ನು ಕಳುಹಿಸುತ್ತಿದ್ದ. ನಂತರ ಸ್ನೇಹಿತರಿಗೆ ಇಂತಿಷ್ಟು ಹಣ ಕೊಡುತ್ತಿದ್ದ. ಆದರೆ, ಆರೋಪಿ ಬಳಿ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮೋಜು-ಮಸ್ತಿ ಮಾಡಿ ಕಳೆದಿದ್ದಾನೆ ಎಂದು ಪೊಲೀಸರು ಹೇಳಿದರು.