ಹುಣಸೂರು : ಕುಡುಕ ತಂದೆಯ ಬೈಗುಳ ತಪ್ಪಿಸಿಕೊಳ್ಳಲು ಅಡುಗೆ ಮನೆಯಲ್ಲಿದ್ದ ದೊಣ್ಣೆ ತಂದು ಬೆದರಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದ ತಂದೆ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಹರವೆರಾಮೇನಹಳ್ಳಿ ಬಳಿಯ ಸೀಗರಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವರಾಜ್(55) ಮೃತಪಟ್ಟಾತ, ಇವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.
ಆಗಿರೋದಿಷ್ಟು: ದೇವರಾಜ್‌ರಿಗೆ ಮೂವರು ಹೆಣ್ಣು ಮಕ್ಕಳಿದ್ದು ಇಬ್ಬರನ್ನು ಮದುವೆ ಮಾಡಿಕೊಡಲಾಗಿತ್ತು, ಕಿರಿಯ ಮಗಳು ಅನಿತ ಬಾಣಂತನಕ್ಕಾಗಿ ತಂದೆ ಮನೆಗೆ ವರ್ಷದ ಹಿಂದೆ ಬಂದಿದ್ದಳು, ಈ ವೇಳೆ ತಂದೆ ದೇವರಾಜು ಮಗಳ ಮಾಂಗಲ್ಯದ ಚೈನ್‌ನ್ನು ಜಮೀನಿನ ಖರ್ಚಿಗಾಗಿ ಗಿರವಿ ಇಟ್ಟುಕೊಂಡಿದ್ದು, ಇನ್ನೂ ಸಹ ಬಿಡಿಸಿಕೊಟ್ಟಿರುವುದಿಲ್ಲ. ಗಂಡನ ಮನೆಗೆ ವಾಪಸ್ ತೆರಳಲು ಮಾಂಗಲ್ಯದ ಚೈನ್ ಬಿಡಿಸಿಕೊಡು ಎಂದು ಅನಿತಾ ಕೇಳುತ್ತಿದ್ದರಿಂದ ಆಗಾಗ್ಗೆ ತಂದೆ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು, ಮಾ 25ರಂದು ಸಹ ತಂದೆ ಮಕ್ಕಳ ನಡುವೆ ಜಗಳ ನಡೆದಿತ್ತು. ಈ ವೇಳೆ ಪಕ್ಕದಲ್ಲೇ ವಾಸವಿರುವ ಮೃತ ದೇವರಾಜ್ ಸಹೋದರ ಸ್ವಾಮಿಗೌಡ ಜಗಳ ಬಿಡಿಸಿದ್ದರು.
ಆದರೆ ಜಗಳ ಮುಂದುವರೆದಿತ್ತು. ಈ ವೇಳೆ ಕುಡುಕ ತಂದೆ ಅಕ್ಕನ ಮೇಲಿನ ಗಲಾಟೆಯಿಂದ ಕೋಪಗೊಂಡ ಕಿರಿಯ ಪುತ್ರಿ ಸುನಿತಾ ಅಡುಗೆ ಮನೆಯಲ್ಲಿದ್ದ ಸೌದೆಯನ್ನು ತಂದು ಬೆದರಿಸಿದ ವೇಳೆ ಎಳೆದಾಟ ನಡೆದಿದೆ. ಈ ವೇಳೆ ದೇವರಾಜ್ ಆಕಸ್ಮಿಕವಾಗಿ ಮಂಚದ ಬಳಿ ಇದ್ದ ಟಿ.ವಿ. ಸ್ಟಾಂಡ್ ಮೇಲೆ ಬಿದ್ದಿದ್ದಾನೆ, ಆತನ ತಲೆಗೆ ತೀವ್ರ ಪೆಟ್ಟಾಗಿತ್ತು. ಕೆಳಗೆ ಬಿದ್ದ ತಂದೆ ಏಳಲು ಸಮಯವಾಗಲಿದೆ ಎಂದು ಇಬ್ಬರು ಒಳಗೆ ಹೋಗಿ ಮಲಗಿದ್ದಾರೆ. ಮಾ. 26ರ ಬೆಳಗ್ಗೆ ಎದ್ದು ನೋಡಿದ ವೇಳೆ ತಂದೆ ದೇವರಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಗಾಬರಿಗೊಂಡು ಪಕ್ಕದಲ್ಲೇ ಇದ್ದ ದೊಡ್ಡಪ್ಪ ಸ್ವಾಮಿಗೌಡರನ್ನು ಕರೆತಂದು ನೋಡುವ ವೇಳೆಗೆ ದೇವರಾಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇದನ್ನೂ ಓದಿ : ಸಿದ್ದರಾಮಯ್ಯ ಹೇಳಿಕೆ ತಿರುಚಿ, ಮಠಾಧೀಶರಿಗೆ ಬಿಜೆಪಿಯಿಂದಲೇ ಅವಮಾನ : ಆಂಜನೇಯ ಆರೋಪ
ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದರಾದರೂ, ಗ್ರಾಮ ಠಾಣಾ ವ್ಯಾಪ್ತಿ ಹುಣಸೂರು ಗ್ರಾಮಾಂತರ ಠಾಣೆಗೆ ಬರುವುದೆಂಬ ಪೊಲೀಸರ ಮಾಹಿತಿಯಿಂದ ಮಧ್ಯಾಹ್ನ ವೇಳೆ ಗ್ರಾಮಾಂತರ ಠಾಣೆಯಲ್ಲಿ ಸ್ವಾಮಿಗೌಡ ನನ್ನ ತಮ್ಮನ ಮಗಳು ಸುನಿತಾಳೇ ತಂದೆಯನ್ನು ಹೊಡೆದು ಸಾಯಿಸಿದ್ದಾಳೆಂದು ದೂರು ದಾಖಲಿಸಿದ ಮೇರೆಗೆ ಶವವನ್ನು ಶನಿವಾರ ಸಂಜೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸಸುದಾರರಿಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಮೃತದೇವರಾಜ್ ಪುತ್ರಿ ಸುನಿತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.