ಬೆಂಗಳೂರು: “ಮತ್ತೂಮ್ಮೆ ನನಗೆ ಕರೆ ಮಾಡಬೇಡ, ತನ್ನೊಂದಿಗೆ ಮಾತನಾಡಬೇಡ’ ಎಂದ ಪರಿಚಯಸ್ಥ ಮಹಿಳೆಯನ್ನು ಭೀಕರವಾಗಿ ಕೊಲೆಗೈದ ಕ್ಯಾಬ್ ಚಾಲಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಣಸಮಾರನಹಳ್ಳಿ ನಿವಾಸಿ ಭೀಮರಾವ್ (23) ಬಂಧಿತ.
ಆರೋಪಿ ಫೆ.27ರಂದು ಇಂದಿರಾ ನಗರ ನಿವಾಸಿ ದೀಪಾ (48) ಎಂಬಾಕೆಯನ್ನು ಕಬ್ಬಿಣ ರಾಡ್‌ನಿಂದ ಹೊಡೆದು ಕೊಲೆಗೈದಿದ್ದ. ಬಳಿಕ ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ತಮಿಳುನಾಡು ಮೂಲದ ದೀಪಾ ಅವಿವಾಹಿತವಾಗಿದ್ದು, ತಂದೆ-ತಾಯಿ ಇಲ್ಲ. ಅವರ ಮಾವ ಕೃಷ್ಣಮೂರ್ತಿ ಎಂಬುವವರೇ ಕೇರ್ ಟೇಕರ್ ಆಗಿದ್ದರು. ಇಂದಿರಾನಗರದ ಅಪಾರ್ಟ್‌ಮೆಂಟ್ ವೊಂದರಲ್ಲಿ ಒಬ್ಬರೇ ವಾಸವಾಗಿದ್ದ ದೀಪಾ, ಹೊಸಕೋಟೆ ಸಮೀಪದ ಕಂಪನಿಯಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಆರೋಪಿ ಭೀಮರಾವ್ ಕಲಬುರಗಿ ಮೂಲದವನಾಗಿದ್ದು, ಹುಣಸಮಾರನಹಳ್ಳಿಯಲ್ಲಿ ಸೋದರ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ. ದೀಪಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಬ್ ಚಾಲಕನಾಗಿದ್ದ. ನಿತ್ಯ ಈತನ ಕ್ಯಾಬ್‌ನಲ್ಲೇ ದೀಪಾ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಹೀಗಾಗಿ ಇಬ್ಬರು ಆತ್ಮೀಯತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಹೊರಗಡೆ ಹೋಗುತ್ತಿದ್ದರು. ಈ ಮಧ್ಯೆ ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗಿದೆ.
ಜಾಕ್ ರಾಡ್‌ನಲ್ಲಿ ಹೊಡೆದು ಕೊಲೆ: ಫೆ.27ರಂದು ಸಂಜೆ 8 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನಲ್ಲಿದ್ದ ದೀಪಾಳನ್ನು ತನ್ನ ಕ್ಯಾಬ್‌ನಲ್ಲಿ ಕರೆದೊಯ್ದ ಆರೋಪಿ ಮಾರ್ಗ ಮಧ್ಯೆದಲ್ಲೇ ಆಕೆ ಜತೆ ಜಗಳ ತೆಗೆದಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿ ಹಲಸೂರು ಠಾಣೆ ವ್ಯಾಪ್ತಿಯ ಕೇಂಬ್ರಿಡ್ಜ್ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಕ್ಯಾಬ್‌ನಿಂದ ಇಳಿದ ದೀಪಾ, “ನನಗೆ ಮತ್ತೂಮ್ಮೆ ಕರೆ, ಸಂದೇಶ ಕಳುಹಿಸಬೇಡ. ತನ್ನೊಂದಿಗೆ ಮಾತನಾಡಬೇಡ. ನಿನ್ನ ನಂಬರ್ ಬ್ಲಾಕ್ ಲಿಸ್ಟ್‌ಗೆ ಹಾಕುತ್ತೇನೆ’ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿ, ಕ್ಯಾಬ್‌ನಲ್ಲಿದ್ದ ಜಾಕ್‌ರಾಡ್‌ನಿಂದ ಮುಖಕ್ಕೆ ಹೊಡೆದಿದ್ದಾನೆ. ಆಗ ಜೋರಾಗಿ ಕೂಗಿಕೊಂಡ ಆಕೆಯನ್ನು ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡ ಆರೋಪಿ, ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗಾರ ಸಿಕ್ಕಿಬಿದ್ದಿದ್ದು ಹೇಗೆ? : ದೀಪಾಳನ್ನು ಕೊಲೆಗೈದು ನಿರ್ಜನ ಪ್ರದೇಶದಲ್ಲಿ ಶವವನ್ನು ಬಿಸಾಡಿದ್ದನು. ಮರುದಿನ ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಮತ್ತೂಂದೆಡೆ ವೈದ್ಯರ ವರದಿಯಲ್ಲಿ ಹಲ್ಲೆ ನಡೆಸಿ, ಕುತ್ತಿಗೆ ಬಿಗಿದು ಕೊಲೆಗೈಯಲಾಗಿದೆ ಎಂದು ದೃಢಪಡಿಸಲಾಗಿತ್ತು. ತನಿಖೆ ವೇಳೆ ಇಂದಿರಾನಗರ ಠಾಣೆಯಲ್ಲಿ ದೀಪಾ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಕೆ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸುವಾಗ ಮಾವ ಕೃಷ್ಣಮೂರ್ತಿ ಅವರು ಭೀಮರಾವ್ ಬಗ್ಗೆ ಸುಳಿವು ನೀಡಿದ್ದರು. ಈ ಹಿಂದೆ ಒಂದೆರಡು ಸಲ ಭೀಮರಾವ್ ಮನೆಗೆ ಬಂದಿದ್ದು, ನಂದಿಬೆಟ್ಟಕ್ಕೆ ಹೋಗೋಣ ಎಂದು ದೀಪಾಳನ್ನು ಕರೆಯುತ್ತಿದ್ದ. ಆಗ “ನಾನೇ ದೀಪಾಗೆ ಬೇಡ. ಭೀಮರಾವ್‌ನ ವರ್ತನೆ ಸರಿಯಿಲ್ಲ’ ಎಂದು ಹೇಳಿದ್ದೆ. ಆತನ ಬಗ್ಗೆ ಅನುಮಾನ ಇರುವುದಾಗಿ ಹೇಳಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಖಾಸಗಿ ಕಂಪನಿ ಉದ್ಯೋಗಿ ದೀಪಾ ಕೊಲೆ ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಭೀಮರಾವ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣ ಎಂದು ಹೇಳಲಾಗಿದೆ. ಆರೋಪಿಯ ವಿಚಾರಣೆ ಬಳಿಕ ಸ್ಪಷ್ಟತೆ ಸಿಗಲಿದೆ.
– ಲಕ್ಷ್ಮೀಪ್ರಸಾದ್, ಡಿಸಿಪಿ, ಈಶಾನ್ಯ ವಿಭಾಗ