ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದ ಉತ್ತರ ಕರ್ನಾಟಕ ಮೂಲದ ಕಾರ್ಮಿಕನೊಬ್ಬನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರಿನ ದೇವದುರ್ಗ ಮೂಲದ ತಾಯಪ್ಪ (20) ಚಾಕು ಇರಿತಕ್ಕೊಳಗಾದ ಗಾರೆ ಕಾರ್ಮಿಕ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಚಂದ್ರಾಲೇಔಟ್‌ನ ಐಟಿಐ ಲೇಔಟ್‌ನಲ್ಲಿ ನಿರ್ಮಾಣಹಂತದ ಕಟ್ಟವೊಂದು ಇದ್ದು, ಅದರಲ್ಲಿ ತಾಯಪ್ಪ ಗಾರೆ ಕೆಲಸ ಮಾಡುತ್ತಿದ್ದ.ಕೆಲಸ ಮುಗಿದ ಬಳಿಕ ಅದೇ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಮಲಗಿಕೊಳ್ಳುತ್ತಿದ್ದ. ಸೋಮವಾರ ಕೂಡ ತಾಯಪ್ಪ ನಾಲ್ಕನೇ ಮಹಡಿಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆ ಸುಮಾರಿಗೆ ದುಷ್ಕರ್ಮಿ ಕಟ್ಟಡದೊಳಗೆ ಪ್ರವೇಶಿಸಿದ್ದಾನೆ. ಬಳಿಕ ನಿದ್ರೆಮಂಪರಿನಲ್ಲಿದ್ದ ತಾಯಪ್ಪನಿಗೆ ಚಾಕುವಿನಿಂದ ಇರಿದಿದ್ದು, ತಾಯಪ್ಪ ಜೋರಾಗಿ ಕೂಗಿಕೊಂಡಿದ್ದಾನೆ. ಅದರಿಂದ ಅಕ್ಕಪಕ್ಕದ ಗುಡಿಸಲುಗಳಲ್ಲಿ ಮಲಗಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಪ್ಪನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.