ಬದಿಯಡ್ಕ: 80 ಲಕ್ಷ ರೂ. ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ತರ್ಕದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿ ಬದಿಯಡ್ಕ ಗೋಳಿಯಡ್ಕದ ಮೊದೀನ್ ಕುಂಞಿ (49) ಅವರನ್ನು ಬದಿಯಡ್ಕ ಪೇಟೆಯಿಂದ ಹಾಡಹಗಲೇ ತಂಡವೊಂದು ಅಪಹರಿಸಿದ ಘಟನೆ ನಡೆದಿದೆ.
ವಿಷಯ ತಿಳಿದು ತತ್‌ಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಮಿಷಗಳೊಳಗೆ ಅಪಹರಣ ಮಾಡಿದ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೆಂಗಳ ನಾಲ್ಕನೇ ಮೈಲು ನಿವಾಸಿಗಳಾದ ಶರೀಫ್, ಅಬ್ದುಲ್ ಹಕೀಂ, ಚಟ್ಟಂಚಾಲ್ ನಿವಾಸಿ ನಿಜಾಮುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಬಳಸಿದ ಕಪ್ಪು ಬಣ್ಣದ ಮಾರುತಿ 800 ಕಾರನ್ನು ಪೊಲೀಸರು ವಶಪಡಿಸಿದ್ದಾರೆ.
ಮೇ 27ರಂದು ಸಂಜೆ 4 ಗಂಟೆಗೆ ಸ್ಕೂಟರ್‌ನಲ್ಲಿ ಬದಿಯಡ್ಕ ಪೇಟೆಗೆ ಬಂದು ಹೊಟೇಲೊಂದರಲ್ಲಿ ಚಹಾ ಸೇವಿಸಿ ಹೊರಗೆ ಬರುತ್ತಿದ್ದ ಮೊದೀನ್ ಕುಂಞಿ ಅವರನ್ನು ಹೊರಗೆ ಕಾದು ನಿಂತಿದ್ದ ತಂಡ ಬಲವಂತವಾಗಿ ಹಿಡಿದು ಕಾರಿಗೆ ಹತ್ತಿಸಿ ಅಪಹರಿಸಿದೆ. ಈ ವೇಳೆ ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗೆ ತಲುಪುವಷ್ಟರಲ್ಲಿ ಕಾರು ವೇಗದಲ್ಲಿ ಪರಾರಿಯಾಗಿತ್ತು.
ವಿಷಯ ತಿಳಿದು ಎಸ್‌ಐ ಪಿ.ಕೆ. ವಿನೋದ್ ಕುಮಾರ್, ಪೊಲೀಸರಾದ ಇಸ್ಮಾಯಿಲ್, ಜಯಪ್ರಕಾಶ್, ಮನು ನೇತೃತ್ವದಲ್ಲಿ ತಲುಪಿದ ಪೊಲೀಸರ ತಂಡ ಕಾರನ್ನು ಹಿಂಬಾಲಿಸಿತು. ಮಾನ್ಯ ರಸ್ತೆಗೆ ತಲುಪಿದಾಗ ಪೊಲೀಸ್ ಜೀಪನ್ನು ಕಾರಿಗೆ ಅಡ್ಡಿವಿರಿಸಿ ಅಪಹರಣಕಾರರನ್ನು ಬಂಧಿಸಿದರು.
ಕಾರಿನೊಳಗೆ ಮೊದೀನ್ ಕುಂಞಿ ಅವರಿಗೆ ಚಾಕುನಿಂದ ಬೆರಳುಗಳಿಗೆ ಇರಿದು ತಂಡ ಗಾಯಗೊಳಿಸಿತ್ತು. ಮೊದೀನ್ ಕುಂಞಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಹರಣ ನಡೆಸಿದ ತಂಡದಲ್ಲಿದ್ದ ವ್ಯಕ್ತಿಯೋರ್ವನ ಮಧ್ಯೆ ಸೊತ್ತು ವ್ಯವಹಾರ ನಡೆದಿತ್ತು. ಈ ಸಂಬಂಧ ಮೊದೀನ್ ಕುಂಞಿ 80 ಲಕ್ಷ ರೂ. ನೀಡಲು ಇದೆಯೆಂದು ದೂರಲಾಗಿದೆ.
ಈ ವಿಷಯವಾಗಿ ಹಲವು ಬಾರಿ ಚರ್ಚೆ ನಡೆಸಿದ್ದರೂ ಪರಿಹಾರವುಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೊದೀನ್ ಕುಂಞಿ ಅವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.