Advertisement

ಸಾಲಿಕೇರಿ: ಆಸ್ತಿ ಅಡವಿಟ್ಟ ಮಕ್ಕಳು ನಾಪತ್ತೆ; ಬೀದಿಗೆ ಬಿದ್ದ ಮಲತಾಯಿ

03:07 AM Dec 25, 2021 | Team Udayavani |

ಉಡುಪಿ: ಆಸ್ತಿ ಅಡವಿಟ್ಟ ಮಕ್ಕಳು ನಾಪತ್ತೆಯಾಗಿದ್ದು, ಬ್ರಹ್ಮಾವರ ಸಾಲಿಕೇರಿ ವಯೋವೃದ್ಧೆ ಗಿರಿಜಾ ಶೆಟ್ಟಿಗಾರ್‌(70) ಎರಡು ಹೊತ್ತಿನ ತುತ್ತಿಗಾಗಿ ಕೂಲಿ ಕೆಲಸಕ್ಕಾಗಿ ಮನೆ ಮನೆ ಅಲೆಯುತ್ತಿದ್ದಾರೆ.

Advertisement

ಮಕ್ಕಳು-ಮೊಮ್ಮಕ್ಕಳಿಂದಲೂ ದೂರವಾಗಿ ಸಂಕಷ್ಟದ ದಿನಗಳಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ಮಾನವ ಹಕ್ಕು ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್‌ ಶ್ಯಾನುಬಾಗ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದಿ| ಪರಮೇಶ್ವರ ಶೆಟ್ಟಿಗಾರ್‌ ಪತ್ನಿಯಾಗಿರುವ ಇವರಿಗೆ ಸ್ವಂತ ಮನೆಯಿಲ್ಲ, ವೃದ್ಧಾಪ್ಯ ಕಾರಣದಿಂದಾಗಿ ಕೆಲಸ ಮಾಡಲು ಆಗುವುದಿಲ್ಲ, ಕಣ್ಣು ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸದ ಸ್ಥಿತಿಯಲ್ಲಿದ್ದಾರೆ. 45 ವರ್ಷಗಳ ಹಿಂದೆ ಸಾಲಿಕೇರಿಯಲ್ಲಿ ಕೈ ಮಗ್ಗದಿಂದ ಸೀರೆ ತಯಾರಿಸುವ ಉದ್ಯಮ ನಡೆಸುತ್ತಿದ್ದ ಪರಮೇಶ್ವರ ಶೆಟ್ಟಿಗಾರ್‌ ತಮ್ಮ ಮೊದಲ ಪತ್ನಿಯ ಮರಣದ ಅನಂತರ ಗಿರಿಜಾ ಅವರನ್ನು ವಿವಾಹವಾಗಿದ್ದರು. ಪರಮೇಶ್ವರ ಶೆಟ್ಟಿಗಾರರಿಗೆ ಮೊದಲ ಪತ್ನಿಯಿಂದ ಐದು ಮಕ್ಕಳು, 3 ಗಂಡು ಹಾಗೂ ಇಬ್ಬರು ಹೆಣ್ಣು. ಎರಡನೆ ಹೆಂಡತಿ ಗಿರಿಜಾ ಅವರಿಗೆ ಮಕ್ಕಳಿರಲಿಲ್ಲ. ಪತಿಯ ಮೊದಲ ಪತ್ನಿಯ ಎಲ್ಲ ಮಕ್ಕಳನ್ನೂ ತಮ್ಮ ಸ್ವಂತ ಮಕ್ಕಳ ಹಾಗೆ ಸಲಹಿದ್ದಾರೆ.

ಪರಮೇಶ್ವರ ಶೆಟ್ಟಿಗಾರ್‌ ಅವರು ಬ್ರಹ್ಮಾವರ ಪರಿಸರದಲ್ಲಿ ಅನೇಕ ಸ್ಥಿರಾಸ್ತಿ ಹೊಂದಿದ್ದು, 2003ರಲ್ಲಿ ವ್ಯವಸ್ಥಾ ಪತ್ರದ ಮೂಲಕ ವಾರಂಬಳ್ಳಿ ಗ್ರಾಮದ 40 ಸೆಂಟ್ಸ್‌ ಜಮೀನು ಹಾಗೂ ಅದರಲ್ಲಿರುವ ಕುಟುಂಬದ ಹಿರಿಯರ ಮನೆಯನ್ನು ತಮ್ಮ ಎರಡನೇ ಮಗ ರವಿರಾಜ ಅವರಿಗೆ ನೀಡಿದ್ದರು.

ಕುಟುಂಬದ ಮನೆಯ ಸ್ವಾಧೀನದ ಹಕ್ಕು ಎರಡನೆ ಮಗ ರವಿರಾಜ ಹೊಂದಿದ್ದರೂ ಅದೇ ದಸ್ತಾವೇಜಿನ ಮೂಲಕ ಪರಮೇಶ್ವರ ಶೆಟ್ಟಿಗಾರ್‌ ಅವರು ಪತ್ನಿ ಗಿರಿಜಾ ಅವರಿಗೆ ಜೀವಿತ ಕಾಲದವರೆಗೆ ವಾಸ್ತವ್ಯದ ಹಕ್ಕು ನೀಡಿದ್ದರು. ದಾಖಲೆಗಳಿಗೆ ಸಹಿ ಹಾಕಬೇಡ ಎಂದಿದ್ದು, ಅದರಂತೆ ಗಿರಿಜಾ ಯಾವ ದಾಖಲೆಗೂ ಸಹಿ ಮಾಡಿರಲಿಲ್ಲ. ಪರಮೇಶ್ವರ ಅವರು 2007ರಲ್ಲಿ ನಿಧನ ಹೊಂದಿದರು. ರವಿರಾಜ ಈ ಮನೆಯನ್ನು ಜಮೀನು ಸಹಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದಿದ್ದು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದರು. ಮನೆಯನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲ ಪಡೆಯುವಾಗ ಮನೆಯ ವಾಸ್ತವ್ಯದ ಹಕ್ಕು ಹೊಂದಿದ್ದ ಗಿರಿಜಾ ಅವರ ಅನುಮತಿ ಕೇಳಿರಲಿಲ್ಲ.

Advertisement

ವಾಸ್ತವ್ಯದ ಹಕ್ಕು ಪರಿಶೀಲಿಸದ ಅಧಿಕಾರಿಗಳು
ಸಾಲ ನೀಡುವ ಮೊದಲು ಬ್ಯಾಂಕ್‌ನವರು ವ್ಯವಸ್ಥಾ ಪತ್ರವನ್ನು ಪರಿಶೀಲಿಸಿ ವಾಸ್ತವ್ಯ ಹಕ್ಕು ಹೊಂದಿದ್ದ ಗಿರಿಜಾ ಅವರ ಗಮನಕ್ಕೆ ತಂದು ಅನುಮತಿ ಕೇಳಬೇಕಾಗಿದ್ದು, ಬ್ಯಾಂಕ್‌ನವರು ಇದನ್ನು ಪರಿಶೀಲಿಸಿಲ್ಲ. ಬ್ಯಾಂಕ್‌ ನೋಟಿಸ್‌ ಬಂದ ಬಳಿಕ ಮನೆ ಅಡವಿಟ್ಟ ವಿಚಾರ ಗಿರಿಜಾ ಅವರಿಗೆ ಗೊತ್ತಾಗಿದೆ. ಬ್ಯಾಂಕ್‌ನವರು 2008ರಲ್ಲಿ ಗಿರಿಜಾ ಅವರನ್ನು ಹೊರಹಾಕಿ ಮನೆ ವಶಪಡಿಸಿಕೊಂಡಿದ್ದಾರೆ. ಗಿರಿಜಾ ಅವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಬ್ಯಾಂಕ್‌ ದಾಖಲೆ ಪರಿಶೀಲಿಸಿ ಬ್ಯಾಂಕ್‌ನ ನಿಯಮದಂತೆ ನಡೆದುಕೊಂಡ ಬಗ್ಗೆ ಹಿಂಬರೆಹ ನೀಡಿದ್ದಾರೆ. ವಯೋವೃದ್ಧೆಗೆ ಜೀವಿತ ಕಾಲದ ವಾಸ್ತವ್ಯ ಹಕ್ಕು ಇದೆ ಎಂಬ ವಿಚಾರ ಪೊಲೀಸರಿಗೂ ತಿಳಿದಿರಲಿಲ್ಲ. ಈಗ ಗಿರಿಜಾ ಆತಂಕಗೊಂಡಿದ್ದು, ಕುಟುಂಬದ ಮನೆ ಯಾರ ಹೆಸರಿನಲ್ಲಿದೆ ಎನ್ನುವ ಮಾಹಿತಿಯೂ ಅನಕ್ಷರಸ್ಥರಾದ ಅವರಿಗೆ ತಿಳಿಯದಾಗಿದೆ.

ಇದನ್ನೂ ಓದಿ:ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ಭರ್ತಿಗೆ ಕ್ರಮ: ಬಿ.ಸಿ.ಪಾಟೀಲ್‌

ಕೈ ಬಿಟ್ಟ ಮೊಮ್ಮಗ
ಪರಮೇಶ್ವರ ಶೆಟ್ಟಿಗಾರ್‌ ಅವರ ಮೊದಲ ಮಗ ತಿಮ್ಮಪ್ಪ ಬೆಂಗಳೂರಿನಲ್ಲಿ ವೈದ್ಯ ವೃತ್ತಿಯಲ್ಲಿದ್ದು. ಮಲತಾಯಿಗೆ ನೆಲೆ ಇಲ್ಲ ಎಂಬುದು ತಿಳಿದು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ಜೂನ್‌ನಲ್ಲಿ ತಿಮ್ಮಪ್ಪ ಅವರು ನಿಧನರಾಗಿದ್ದು, ತಂದೆ ತೀರಿಕೊಂಡ ಬಳಿಕ ಅವರ ಮೊಮ್ಮಗ ವರುಣ್‌, ಗಿರಿಜಾ ಅವರನ್ನು ಊರಿಗೆ ಕರೆ ತಂದು ಬಿಟ್ಟು ಹೋದರು. ಮೂರನೇ ಮಗ ಲಕ್ಷ್ಮಣ ಸ್ವಲ್ಪ ದಿನ ನೋಡಿಕೊಂಡಿದ್ದರೂ ದಿನನಿತ್ಯದ ಖರ್ಚಿಗಾಗಿ ಅಥವಾ ಔಷಧಕ್ಕೆ ಹಣ ನೀಡುತ್ತಿರಲಿಲ್ಲ. ಈಗ ಹಿರಿಯ ನಾಗರಿಕರ ಕಾನೂನು ಅನ್ವಯ ಇವರೆಲ್ಲರನ್ನು ಎದುರುದಾರರನ್ನಾಗಿಸಿ ದಾವೆ ಹೂಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಡಾ| ರವೀಂದ್ರನಾಥ್‌ ತಿಳಿಸಿದರು.

ಮಾನವ ಹಕ್ಕುಗಳ ನ್ಯಾಯಲಯಕ್ಕೆ ಮನವಿ
ಜಿಲ್ಲೆಗೊಂದರಂತೆ ಮಾನವ ಹಕ್ಕುಗಳ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯ ರೂಪಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿ ಹಲವಾರು ವರ್ಷಗಳು ಕಳೆದಿವೆ. ಆದರೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಮಾನವ ಹಕ್ಕುಗಳ ನ್ಯಾಯಾಲಯ ರೂಪುಗೊಂಡಿಲ್ಲ. ಈ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು. ಗಿರಿಜಾ ಅವರಿಗೆ ಯೋಗ್ಯತೆಯ ಬದುಕು, ಆಹಾರ, ವಸತಿ ಒದಗಿಸಲು ಜಿಲ್ಲಾಡಳಿತ ತತ್‌ಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.

ಹಿರಿಯ ನಾಗರಿಕರ ಪೋಷಣೆ ಮಕ್ಕಳು, ಮೊಮ್ಮಕ್ಕಳ ಕರ್ತವ್ಯ
ಹೆತ್ತವರ ಹಾಗೂ ಹಿರಿಯ ನಾಗರಿಕರ ಪೋಷಣೆ ಕಾಯ್ದೆ ಪ್ರಕಾರ ಹಿರಿಯ ನಾಗರಿಕರಿಗೆ ಸೇರಿದ ಸ್ಥಿರಾಸ್ತಿ ಹಾಗೂ ಚರಾಸ್ತಿ ಯಾರ ಬಳಿ ಇದೆಯೋ ಅವರು ಹಿರಿಯರ ಪೋಷಣೆಗೆ ಮಾಸಾಶನ ನೀಡಲು ಬದ್ಧರಾಗಿದ್ದಾರೆ. ಒಂದು ವೇಳೆ ಮಾಸಾಶನ ನೀಡದಿದ್ದಲ್ಲಿ ಆಸ್ತಿಗಳನ್ನು ಹಿರಿಯರಿಗೆ ಪುನರ್‌ವರ್ಗಾಯಿಸಲು ಹಿರಿಯ ನಾಗರಿಕರ ನ್ಯಾಯ ಮಂಡಳಿ ಆದೇಶಿಸಬೇಕು ಎಂದು ಡಾ| ರವೀಂದ್ರನಾಥ ಶ್ಯಾನುಭಾಗ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next