Advertisement

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

12:41 AM Nov 30, 2021 | Team Udayavani |

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದವನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ ಟಿಎಸ್ ಸಿ -1 ನ್ಯಾಯಾಲಯದ ನ್ಯಾಯಾಧೀಶರು 7 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ದೇರಳಕಟ್ಟೆಯ ನಿವಾಸಿ ಇರ್ಫಾನ್‌ (28) ಶಿಕ್ಷೆಗೊಳಗಾದವ. ಈತ 2014ರಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ನಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಅಪರಾಧಿ ಇರ್ಫಾನ್‌ ಸಂತ್ರಸ್ತೆಯ ಪರಿಚಯ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದ. ಪ್ರೀತಿ ಮಾಡುತ್ತಿರುವುದಾಗಿಯೂ, ಮದುವೆಯಾಗಬೇಕು ಎನ್ನುವುದಾಗಿ ಒತ್ತಾಯಿಸುತ್ತಿದ್ದ. 2014ರ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯನ್ನು ನಾಟೆಕಲ್‌ನಲ್ಲಿ ತಡೆದು ನಿಲ್ಲಿಸಿ ಕಾರಿನಲ್ಲಿ ಅಪಹರಣ ಮಾಡಿ ಚಿಕ್ಕಮಗಳೂರಿನ ಲಾಡ್ಜ್ ಗೆ ಕರೆದೊಯ್ದು ಅಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದರು. ಆಗಿನ ಉಳ್ಳಾಲ ಇನ್‌ಸ್ಪೆಕ್ಟರ್‌ ಸವಿತ್ರ ತೇಜ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಸಾವಿತ್ರಿ ವಿ. ಭಟ್‌ ಅವರು ವಿಚಾರಣೆ ನಡೆಸಿ ಪೂರಕ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿಯ ಅಪರಾಧ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ:ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?

Advertisement

ಅಪಹರಣ ಕೃತ್ಯಕ್ಕೆ 3 ವರ್ಷ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 15 ದಿನ ಹೆಚ್ಚುವರಿ ಸಜೆ, ತಡೆದು ನಿಲ್ಲಿಸಿದ ಕೃತ್ಯಕ್ಕೆ 5 ತಿಂಗಳು ಸಜೆ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 15 ದಿನ ಸಜೆ, ಕೊಲೆ ಬೆದರಿಕೆಯೊಡ್ಡಿರುವುದಕ್ಕೆ 1 ವರ್ಷ ಸಜೆ ಮತ್ತು 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಸಜೆ, ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರಕ್ಕೆ ಪೋಕ್ಸೋ ಕಾಯ್ದೆಯಡಿ 7 ವರ್ಷ ಸಜೆ ಮತ್ತು 15,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸಜೆ ವಿಧಿಸಿ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್‌ ಪರ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣಸ್ವಾಮಿ ಸಿ. ವಾದಿಸಿದ್ದರು.

ಸಂತ್ರಸ್ತೆ ಮತ್ತು ಆಕೆಯ ಮನೆಯವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಆದರೆ ತನಿಖಾಧಿಕಾರಿಗಳು, ಸಾಂದರ್ಭಿಕ ಸಾಕ್ಷಿ ಮತ್ತು ವೈದ್ಯರ ಸಾಕ್ಷಿ ಪರಿಗಣಿಸಿ ಅಪರಾಧ ಸಾಬೀತುಪಡಿಸಲಾಗಿದೆ. 15 ಮಂದಿ ಸಾಕ್ಷಿದಾರರ ಸಾಕ್ಷ್ಯ ಮತ್ತು 22 ದಾಖಲೆಗಳ ಸಾಕ್ಷ್ಯವನ್ನು ದಾಖಲು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next