ಕೊರಟಗೆರೆ: ಅಂಗಡಿ ಮೇಲೆ ಅಬಕಾರಿ ಅಧಿಕಾರಿಗಳ ತಂಡವೊಂದು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಂಗಡಿಯಲ್ಲಿದ್ದ 500 ಗ್ರಾಂ ಗಾಂಜಾವನ್ನು ವಶ ಪಡಿಸಿ ಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೋಳಾಲ ಹೋಬಳಿಯ ಡಿ. ನಾಗೇನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊರಟಗೆರೆ ಅಬಕಾರಿ ನಿರೀಕ್ಷಕಿ ಶ್ರೀ ಲತಾ ನೇತೃತ್ವದ ಅಬಕಾರಿ ಪೋಲೀಸರ ತಂಡ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿ ಆರೋಪಿಯಿಂದ 500ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಡಿ.ನಾಗೇನಹಳ್ಳಿ ಗ್ರಾಮದ ಆಡವೀಶಪ್ಪ ಬಿನ್ ಲೇಟ್ ವೀರಭದ್ರಪ್ಪ ಇವರಿಗೆ ಸೇರಿದ ಮನೆ ಅಂಗಡಿ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ 500ಗ್ರಾಂ ನಷ್ಟು ಎಲೆ,ಹೂವು,ಬೀಜ ಹಾಗೂ ತೆನೆ ಮಿಶ್ರಿತ ಹಸಿ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಹೊಂದಿ ದಾಸ್ತಾನು ಮಾಡಿರುವುದು ಕಂಡು ಬಂದಿರುತ್ತದೆ. ಸದರಿ ಆರೋಪಿಯನ್ನು ವಶಕ್ಕೆ ಪಡೆದು , ಇವರನ್ನು ದಸ್ತಗಿರಿ ಮಾಡಿ ಹಾಗೂ 500 ಗ್ರಾಂ ಗಾಂಜಾ ಸೊಪ್ಪನ್ನು ಜಪ್ತುಪಡಿಸಿಕೊಂಡು ಇದರ (ಅಂದಾಜು ಮೌಲ್ಯ 25,000 ರೂ) ಎನ್ ಡಿಪಿಎಸ್ ಕಾಯ್ದೆಯಡಿ ಘೋರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ
ಈ ದಾಳಿ ಸಂಧರ್ಭದಲ್ಲಿ ಅಬಕಾರಿ ನಿರೀಕ್ಷಕಿಯಾದ ಶ್ರೀ ಲತಾ, ಉಪ ನಿರೀಕ್ಷಕಿ ಯಾದ ವೈಷ್ಣವಿ ಕುಲಕರ್ಣಿ,ಸಿಬ್ಬಂದಿಗಳಾದ ಮುಖ್ಯ ಪೇದೆ ದಾದಾಪೀರ್, ರಂಗಧಾಮಯ್ಯ,ಮಲ್ಲಿಕಾರ್ಜುನ್, ಮಂಜುಳಾ, ಹಮೀದ್ ಬುಡಕಿ ಹಾಗೂ ಮಧುರವರು ಹಾಜರಿದ್ದರು.