Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

02:03 AM Jul 20, 2019 | Sriram |
ಗೋವಿನ ಅವಶೇಷ ನದಿಯಲ್ಲಿ ಪತ್ತೆ: ದೂರು ದಾಖಲು
ಗಂಗೊಳ್ಳಿ: ಇಲ್ಲಿನ ಕಳುವಿನಬಾಗಿಲು ಸಮೀಪದ ಪಂಚಗಂಗಾವಳಿ ನದಿಯಲ್ಲಿ ಗೋಣಿ ಚೀಲದಲ್ಲಿ ಗೋವಿನ ತಲೆ, ಚರ್ಮ, ಕಾಲು ಪತ್ತೆಯಾಗಿರುವ ಬಗ್ಗೆ ರತ್ನಾಕರ ಗಾಣಿಗ ಅವರು ನೀಡಿರುವ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವನ್ನು ಮಾಂಸ ಮಾಡಿ, ತ್ಯಾಜ್ಯವನ್ನು ಚೀಲದಲ್ಲಿ ಎಸೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

ಅಂಗಳಕ್ಕೆ ಚಿಪ್ಪು ಎಸೆತ: ದೂರು ದಾಖಲು
ಗಂಗೊಳ್ಳಿ:
ಗುಜ್ಜಾಡಿ ಗ್ರಾಮದ ಕಂಚುಗೋಡಿನ ತನ್ನ ಮನೆಯ ಅಂಗಳದಲ್ಲಿ ಬೆಳಗ್ಗಿನ ಜಾವ ಉದಯ ಮೇಸ್ತ ಮತ್ತು ಶ್ಯಾಮಲಾ ಅವರು ಕಳುವಿನ ಚಿಪ್ಪು ರಾಶಿ ಹಾಕಿದ್ದು, ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ನಾಗರತ್ನಾ ಅವರು ದೂರು ನೀಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ: ಯುವಕ ಆಸ್ಪತ್ರೆಗೆ
ಪಡುಬಿದ್ರಿ: ಉಚ್ಚಿಲ ಭಾಸ್ಕರ ನಗರದ ಸಂಬಂಧಿಕರ ಮನೆಗೆ ಜು. 18ರಂದು ಬಂದಿದ್ದ ಮಣಿಪಾಲದ ಆತ್ರಾಡಿಯ ನಿವಾಸಿ ಫಯಾಜ್‌ (26)ಗೆ ಮೂಡುಬಿದಿರೆ ನಿವಾಸಿ ಸಲ್ಮಾನ್‌ (22) ಕೈಯಿಂದ ಹೊಡೆದು ಘಾಸಿಗೊಳಿಸಿದ್ದಾನೆ. ಬಳಿಕ ಕಬ್ಬಿಣದ ರಾಡ್‌ ತೆಗೆದು ಹಲ್ಲೆಗೆ ಮುಂದಾದಾಗ ಇತರರು ತಡೆದು ನಿಲ್ಲಿಸಿದ್ದಾರೆ ಎಂದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಫ‌ಯಾಜ್‌ ಅವರು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋಟ ಜೋಡಿ ಕೊಲೆ ಪ್ರಕರಣ: ರಾಘವೇಂದ್ರ ಕಾಂಚನ್‌ ಬಿಡುಗಡೆ
ಕುಂದಾಪುರ: ಕೋಟ ಸಮೀಪದ ಮಣೂರಿನಲ್ಲಿ ಜ. 26ರಂದು ನಡೆದಿದ್ದ ಯತೀಶ್‌ ಕಾಂಚನ್‌ ಹಾಗೂ ಭರತ್‌ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಜಿ. ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ಅವರು ಹೈಕೋರ್ಟ್‌ ನೀಡಿದ ಷರತ್ತು ಬದ್ಧ ಜಾಮೀನಿನ ಮೇಲೆ ಶುಕ್ರವಾರ ಹಿರಿಯಡಕ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಜು. 16ರಂದು ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಕಾನೂನು ಪ್ರಕ್ರಿಯೆ ಮುಗಿಸಿ ಆದೇಶ ಪ್ರತಿ ಸಿಕ್ಕಿದ ಬಳಿಕ ಬಿಡುಗಡೆಗೊಳಿಸಲಾಗಿದೆ. ಇವರನ್ನು ಫೆ. 8ರಂದು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ರಾಘವೇಂದ್ರ ಕಾಂಚನ್‌ಗೆ ಮಾತ್ರ ಜಾಮೀನು ಸಿಕ್ಕಿದೆ.

ಬ್ಯಾಂಕ್‌ ಖಾತೆಯಿಂದ 20 ಸಾ. ರೂ. ಲೂಟಿ
ಮಂಗಳೂರು: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ 20,000 ರೂ. ಹಣ ಡ್ರಾ ಮಾಡಿರುವ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ವ್ಯಕ್ತಿಯೊಬ್ಬರು ಕಟೀಲು ಬಳಿಯಿರುವ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದಾರೆ. ಆ ಬಳಿಕ ಅಪರಿಚಿತರು ಅವರ ಗಮನಕ್ಕೆ ಬಾರದೇ ಅವರ ಖಾತೆಯಿಂದ 20,000 ರೂ. ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ರಮ ಮರಳು ಸಾಗಾಟ: ಇಬ್ಬರ ಸೆರೆ, ಲಾರಿ ವಶ
ಕುಂದಾಪುರ:
ಖಾರ್ವಿಕೇರಿ ರಸ್ತೆಯ ಎ. ಕೆ. ಮಂಜಿಲ್ ಬಳಿ ಹೊಸ ಬಸ್‌ ನಿಲ್ದಾಣ ಕಡೆಯಿಂದ ಪರವಾನಿಗೆ ರಹಿತವಾಗಿ ಚೀಲಗಳಲ್ಲಿ ಮರಳು ಸಾಗಿಸುತ್ತಿದ್ದ ಟಾಟಾ ಏಸ್‌ ವಾಹನವನ್ನು ಎಸ್‌ಐ ಹರೀಶ್‌ ನೇತೃತ್ವದ ಪೊಲೀಸರ ತಂಡ ತಡೆದು ಚಾಲಕ ರಘುರಾಮ ಶೇಟ್ ಹಾಗೂ ಸಂತೋಷ ಖಾರ್ವಿ ಎಂಬವರನ್ನು ಬಂಧಿಸಿದೆ.

ಲಾರಿಯಲ್ಲಿ ಸುಮಾರು 40 ಗೋಣಿ ಚೀಲಗಳಲ್ಲಿ ಮರಳು ಸಾಗಿಸಲಾಗುತ್ತಿತ್ತು. ಸುಮಾರು 2 ಲ.ರೂ. ಮೌಲ್ಯದ ಲಾರಿಯನ್ನು ಕೂಡ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕುಂದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ: ಓರ್ವ ಸೆರೆ
ಕುಂದಾಪುರ
: ಮೂಡು ಗೋಪಾಡಿ 2ನೇ ಕ್ರಾಸ್‌ ಬಳಿ ಗಾಂಜಾ ಸೇವಿಸಿದ್ದ ಆರೋಪದಲ್ಲಿ ಕುಂಭಾಶಿ ಗ್ರಾಮದ ಮಹಮ್ಮದ್‌ ಮುಜಾಮಿಲ್ (24)ನನ್ನು ಬಂಧಿಸಲಾಗಿದೆ.

ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಈತ ಗಾಂಜಾ ಸೇವಿಸಿರುವುದನ್ನು ಮಣಿಪಾಲದ ಕೆಎಂಸಿಯ ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗದಲ್ಲಿ ಖಚಿತ ಮಾಡಿಕೊಳ್ಳಲಾಗಿದೆ.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ: ದಾಳಿ
ಮಂಗಳೂರು: ನಗರದ ಹೊರ ವಲಯದ ಅಸೈಗೊಳಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಭಾಸ್ಕರ್‌ನನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈತನಿಂದ 6,000 ರೂ. ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ತತ್‌ಕ್ಷಣ ಕೊಣಾಜೆ ಪೊಲೀಸರಿಗೆ ಕಾರ್ಯಾಚರಣೆ ನಡೆಸುವಂತೆ ಆಯುಕ್ತರು ನೀಡಿದ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಗಾಂಜಾ: ಬಂಧನ
ಶಿರ್ವ: ಶಿರ್ವ ಠಾಣಾ ವ್ಯಾಪ್ತಿಯ ಬೆಳಪುವಿನಲ್ಲಿ ಗಾಂಜಾ ಸೇವಿಸಿ ಕುಳಿತಿದ್ದ ಶೇಖ್‌ ಫರ್ಹಾನ್‌ (23) ಎಂಬಾತನನ್ನು ಜು. 19ರಂದು ಪೊಲೀಸರು ವಶಕ್ಕೆ ಬಂಧಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಆರ್‌ಬಿಐ ಸಿಬಂದಿ ಹೆಸರಲ್ಲಿ 40 ಸಾ.ರೂ. ವಂಚನೆ
ಮಂಗಳೂರು: ಆರ್‌ಬಿಐ ಬ್ಯಾಂಕ್‌ ಸಿಬಂದಿಯೆಂದು ನಂಬಿಸಿ ಕ್ರೆಡಿಟ್ ಕಾರ್ಡ್‌ ನಂಬರ್‌ ಮುಖೇನ 39,999 ರೂ. ಲಪಟಾಯಿಸಿದ ಘಟನೆ ನಡೆದಿದ್ದು, ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರಿಗೆ ಜು.18ರಂದು ಅನಾಮಿಕ ವ್ಯಕ್ತಿಯ ನಂಬರ್‌ನಿಂದ ಕರೆ ಬಂದಿದ್ದು, ತಾನು ಆರ್‌ಬಿಐ ಬ್ಯಾಂಕ್‌ ಸಿಬಂದಿ ಎಂದು ಹೇಳಿ ನಂಬಿಸಿ, ನಿಮಗೆ ಹೊಸ ಕ್ರೆಡಿಟ್ ಕಾರ್ಡ್‌ ನೀಡುತ್ತೇನೆ ಎಂದು ತಿಳಿಸಿದ್ದಾನೆ.

ಬಳಿಕ ಹಳೆ ಕ್ರೆಡಿಟ್ ಕಾರ್ಡ್‌ನ ಎಲ್ಲ ವಿವರ ಕೇಳಿದ್ದು, ಸಿವಿವಿ ನಂಬರ್‌ ಕೂಡ ಪಡೆದುಕೊಂಡಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಕ್ರೆಡಿಟ್ ಕಾರ್ಡ್‌ನಿಂದ 39,999 ರೂ. ಅನ್ನು ಆ ವ್ಯಕ್ತಿ ಲಪಟಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವ್ಯಕ್ತಿ ನಾಪತ್ತೆ
ಮಂಗಳೂರು: ಬಿಕರ್ನಕಟ್ಟೆ ನಿವಾಸಿ ಶ್ರೀಧರ್‌ (31) ಅವರು ಜು.18ರಂದು ಸ್ಕೂಟರ್‌ ಜತೆ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.

ಅವರಿಗೆ ಮದ್ಯಪಾನ ಸೇವಿಸುವ ಅಭ್ಯಾಸ ಇದ್ದು, ಪತ್ನಿ ಜತೆ ಹಣಕ್ಕಾಗಿ ಗಲಾಟೆ ಮಾಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿ, ಮಗು ನಾಪತ್ತೆ
ಮಂಗಳೂರು:
ಬಜಾಲ್ ಚರ್ಚ್‌ ಬಳಿಯ ಬಾಡಿಗೆ ಮನೆ ನಿವಾಸಿ ಸಾಜೀದಾ ಅವರು ಮಗು ಸಹಿತ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಜೀದಾ ವಿವಾಹವು 4 ವರ್ಷ ಹಿಂದೆ ವಳಚ್ಚಿಲ್ನ ರಿಜ್ವಾನ್‌ ಜತೆ ನಡೆದಿದ್ದು, ದಂಪತಿಗೆ 1 ವರ್ಷದ ಗಂಡು ಮಗುವಿದೆ.

ಎ.17ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾಜೀದಾ ಮಗುವಿನ ಜತೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಕ್ತಕೋಡಿ: ಗ್ರಾಹಕರ ಸೋಗಿನಲ್ಲಿ ಅಂಗಡಿಯಿಂದ 1 ಲ.ರೂ. ಕಳವು
ಸವಣೂರು: ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಯುವಕರು ಅಂಗಡಿಯೊಂದರಿಂದ 1 ಲ. ರೂ. ಕಳವು ಮಾಡಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ನಡೆದಿದೆ.

ಭಕ್ತಕೋಡಿಯ ಶೀನಪ್ಪ ಪೂಜಾರಿ ಎಂಬವರ ಅಂಗಡಿಗೆ ಅಪರಿಚಿತ ಯುವಕನೋರ್ವ ಬಂದು ದಿನಸಿ ಸಾಮಗ್ರಿ ಖರೀದಿಸಿ ಹೋಗಿದ್ದ. ಸ್ವಲ್ಪ ಹೊತ್ತಿನ ಬಳಿಕ ಇನ್ನಿಬ್ಬರು ಅಪರಿಚಿತ ಯುವಕರು ಬಂದು ಸಾಮಾನು ಖರೀದಿಸಿ ತೆರಳಿದ್ದರು. ಬಳಿಕ ಪರಿಶೀಲಿಸಿದಾಗ ಅಂಗಡಿಯ ಡ್ರಾಯರ್‌ನಲ್ಲಿದ್ದ 1 ಲ.ರೂ. ಕಳವಾಗಿರುವುದು ಮಾಲಕರ ಗಮನಕ್ಕೆ ಬಂದಿದೆ.

ತತ್‌ಕ್ಷಣವೇ ಅಂಗಡಿಗೆ ಬಂದಿದ್ದ ಅಪರಿಚಿತರನ್ನು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೀನಪ್ಪ ಪೂಜಾರಿ ಅವರು ಅಂಗಡಿಗೆ ಬಂದಿದ್ದ ಅಪರಿಚಿತರ ಮೇಲೆ ಸಂಶಯ ವ್ಯಕ್ತಪಡಿಸಿ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.

ಪುತ್ತಿಗೆ: ಬುದ್ಧಿಮಾಂದ್ಯ ಯುವಕ ನಾಪತ್ತೆ
ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಅಬ್ದುಲ್ ಪಿ.ಕೆ. ಅವರ ಪುತ್ರ, ಬುದ್ಧಿಮಾಂದ್ಯನಾಗಿದ್ದ ಆಸಿಫ್‌ (26) ಜು. 9ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ತನ್ನ ಮನೆಯಿಂದ ಅಂಗಡಿಗೆಂದು ಹೋದವರು ನಾಪತ್ತೆಯಾಗಿದ್ದಾರೆ ಎಂದು ಸಹೋದರ ಮಹಮ್ಮದ್‌ ಶರೀಫ್‌ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇವರ ಕುರಿತು ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಪೊಲೀಸರಿಗೆ ತಿಳಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.

ಕೋಟ: ಅಸಹಾಯಕ ಮಹಿಳೆಯ ರಕ್ಷಣೆ
ಉಡುಪಿ: ಕೋಟದ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ ಮಹಿಳೆ ಯನ್ನು ಸ್ಥಳೀಯ ಯುವಕರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮತ್ತು ಮಹಿಳಾ ಪೊಲೀಸರ ನೆರವಿನಿಂದ ರಕ್ಷಿಸಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದಾರೆ.

ಮಹಿಳೆ ಹಲವು ದಿನಗಳಿಂದ ಸಾರ್ವ ಜನಿಕ ಸ್ಥಳದಲ್ಲಿಯೇ ಮಲಗುತ್ತಿದ್ದರು. ಕನ್ನಡ ಮತ್ತು ಮಲಯಾಳಂ ಮಾತನಾಡುತ್ತಿದ್ದು, ಊರು ಕಣ್ಣೂರು ಎಂದು ಹೇಳಿದ್ದಾರೆ. ಹರ್ತಟ್ಟು ಯುವಕ ಮಂಡಲದ ಕೀರ್ತಿಶ್‌ ಪೂಜಾರಿ, ಜೀವನ್‌ ಮಿತ್ರ ನಾಗರಾಜ್‌, ಸಾಗರ್‌ ಪೂಜಾರಿ, ಪ್ರದೀಪ್‌ ಪಡುಕೆರೆ, ಶ್ರೀನಿವಾಸ್‌ ಪುತ್ರನ್‌ ಅವರು ರಕ್ಷಣೆಗೆ ಸಹಕರಿಸಿದರು.

ಮಹಿಳೆಯ ಸಂಬಂಧಿಕರು ಅಥವಾ ಪರಿಚಯಸ್ಥರು ಇದ್ದರೆ ಉಡುಪಿಯ ಮಹಿಳಾ ಪೊಲೀಸ್‌ ಠಾಣೆ ಅಥವಾ ರಾಜ್ಯ ಮಹಿಳಾ ನಿಲಯವನ್ನು ಸಂಪರ್ಕಿಸಬೇಕು ಎಂದು ವಿಶು ಶೆಟ್ಟಿ ವಿನಂತಿಸಿದ್ದಾರೆ.

ಹೊಸ ವಾಹನಕ್ಕೆ ದಂಡ ಪ್ರಶ್ನಿಸಿ ಮಹಿಳೆ ಟ್ವೀಟ್: ಕಮಿಷನರ್‌ ಸ್ಪಂದನೆ
ಮಂಗಳೂರು: ಆರು ತಿಂಗಳ ಹಿಂದಷ್ಟೇ ಖರೀದಿಸಿದ್ದ ವಾಹನಕ್ಕೆ ಹೊಗೆ ತಪಾಸಣೆ ಮಾಡಲಿಲ್ಲವೆಂದು ಸಂಚಾರ ಪೊಲೀಸರು ದಂಡ ವಿಧಿಸಿರುವುದನ್ನು ಪ್ರಶ್ನಿಸಿ ಮಹಿಳೆಯೋರ್ವರು ಪೊಲೀಸ್‌ ಆಯುಕ್ತರಿಗೆ ಟ್ವೀಟ್ ಮಾಡಿದ್ದು, ಈ ಕುರಿತು ಗಮನಹರಿಸಿ ವಿಚಾರಿಸುವಂತೆ ಆಯುಕ್ತರು ಸಂಚಾರ ಎಸಿಪಿಗೆ ಸೂಚಿಸಿದ್ದಾರೆ.

ಹೊಸ ವಾಹನಗಳಿಗೆ ಸುಮಾರು 1 ವರ್ಷ ತನಕ ಹೊಗೆ ತಪಾಸಣೆ ಅಗತ್ಯವಿರುವುದಿಲ್ಲ. ಹಾಗಾಗಿ ಕಾರು ಮಾಲಕರು ಹೊಗೆ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಆದರೆ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ನಿಧಿ ಎಂಬವರು ಟ್ವಿಟರ್‌ ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಆಯುಕ್ತ ಸಂದೀಪ್‌ ಪಾಟೀಲ್ ಅವರು, ದಂಡ ವಿಧಿಸಿರುವ ಸ್ಥಳ ಮತ್ತು ಸಮಯವನ್ನು ತಿಳಿಸಬೇಕು ಮತ್ತು ಸಂಚಾರ ಎಸಿಪಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ವಿಚಾರಿಸಲು ಹೇಳಿರುವುದಾಗಿ ಮರು ಟ್ವೀಟ್ ಮಾಡಿದ್ದಾರೆ. ಎಸಿಪಿಯವರ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿ ಅವರಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಹೇಳಿದ್ದಾರೆ.

ದಂಡ ವಾಪಸ್‌
ಬಳಿಕ ಟ್ವೀಟ್ ಮಾಡಿದ ನಿಧಿ ಅವರು, ಹಲವು ಬಾರಿ ಚರ್ಚಿಸಿದ ಬಳಿಕ ದಂಡದ ಹಣವನ್ನು ಸಂಚಾರ ಪೊಲೀಸರು ಹಿಂದಿರುಗಿಸಿದ್ದಾರೆ. ಅವರ ಮೇಲೆ ಯಾವುದೇ ರೀತಿಯ ಕ್ರಮ ವಹಿಸಬೇಕೆಂಬುದು ನನ್ನ ಉದ್ದೇಶ ಅಲ್ಲ; ಜನಸಾಮಾನ್ಯರ ಸ್ನೇಹಿಯಾಗಿ ಪೊಲೀಸರು ಇರಬೇಕೆಂದು ಅವರಿಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಟ್ವೀಟ್ ಮಾಡಿರು ವುದಾಗಿ ಹೇಳಿ ಸ್ಪಂದಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮಾಹಿತಿ ನೀಡಿದರೆ ವಿಚಾರಣೆ
ಈ ಬಗ್ಗೆ ಸಂಚಾರ ಎಸಿಪಿ ಮಂಜುನಾಥ ಶೆಟ್ಟಿ ಅವರು ‘ಉದಯವಾಣಿ’ ಜತೆ ಮಾತನಾಡಿ, ಆರು ತಿಂಗಳ ಹಿಂದಷ್ಟೇ ಖರೀದಿಸಿದ ವಾಹನಕ್ಕೆ ದಂಡ ವಿಧಿಸಿರುವ ಬಗ್ಗೆ ದೂರು ಬಂದಿರುವುದಾಗಿ ಪೊಲೀಸ್‌ ಆಯುಕ್ತರು ಈಗಾಗಲೇ ತಿಳಿಸಿದ್ದಾರೆ. ಈ ಬಗ್ಗೆ ದೂರುದಾರರಿಗೆ ತನ್ನ ದೂರವಾಣಿ ಸಂಖ್ಯೆಯನ್ನೂ ನೀಡಿದ್ದು, ಅವರು ಕರೆ ಮಾಡಿ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಲ್ಲಿ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next