ವಿಟ್ಲ: ಅಪ್ರಾಪ್ತ ವಯಸ್ಕ ಯುವತಿ ಸಹಿತ ಇಬ್ಬರು ಯುವತಿಯರ ಮೇಲೆ ತಪ್ಪು ಗ್ರಹಿಕೆಯಿಂದ ಅದೇ ಸಮುದಾಯದ ಯುವಕರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಓರ್ವ ಆರೋಪಿಯ ಮೇಲೆ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ರಾತ್ರಿಯೇ ಓರ್ವನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಹಲ್ಲೆಗೊಳಗಾದ ಯುವತಿಯರು ವಿಟ್ಲ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಈ ಬಗ್ಗೆ ಎರಡು ಕಡೆಯವರು ರಾಜಿ ಮಾತುಕತೆ ಮೂಲಕ ಇತ್ಯರ್ಥಗೊಳಿಸಿದ್ದರು. ಇದೀಗ ಪೊಲೀಸರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ವಿಚಾರದಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿಕೊಂಡು ಆರೋಪಿ ಕರೈ ನಿವಾಸಿ ಮಹಮ್ಮದ್ ಆರೀಫ್‌ನನ್ನು ವಶಪಡಿಸಿ, ಬಿಡುಗಡೆಗೊಳಿಸಿದ್ದಾರೆ.
ಸಾಲೆತ್ತೂರು ನಿವಾಸಿ ಆಟೋ ಚಾಲಕನ ಪುತ್ರಿ ತನ್ನ ಸ್ನೇಹಿತೆಯ ಜತೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಬಿಟ್ಟು ತೆರಳಿದ್ದರು. ಈ ಬಗ್ಗೆ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ವಿಟ್ಲದಲ್ಲಿ ಕೆಲವರು ಹುಡುಕಾಡುತ್ತಿದ್ದಾಗ ಕುದ್ದುಪದವು ಮೂಲದ ಇಬ್ಬರು ಯುವತಿಯರು ಕಾಣಿಸಿದ್ದು, ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಬುರ್ಖಾ ತೆಗೆದಾಗ ಅವರು ಬೇರೆಯವರು ಎಂದು ತಿಳಿದು ಪೇಚಿಗೆ ಸಿಲುಕಿದ್ದಾರೆ. ಬಳಿಕ ಸಾರ್ವಜನಿಕರು ಹಲ್ಲೆ ನಡೆಸಿದವರನ್ನು ಪೊಲೀಸರಿಗೆ ಒಪ್ಪಿಸಿದ್ದರು.
ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರನ್ನು ವಿಟ್ಲ ಠಾಣೆಗೆ ಕರೆತಂದು, ಬುದ್ಧಿವಾದ ಹೇಳಿ ಮನೆಯವರ ಜತೆ ಕಳುಹಿಸಿಕೊಡಲಾಗಿತ್ತು. ಹಲ್ಲೆಗೊಳಗಾದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಪೊಲೀಸರಿಗೆ ದೂರು ನೀಡಲು ತಯಾರಾಗಿದ್ದರು. ಅನಂತರ ರಾಜಿ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.