ಉಳ್ಳಾಲ: ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆ ಸಂಚರಿಸುತ್ತಿದ್ದ ಕಾರನ್ನು ಸಂಚಾರಿ ಪೊಲೀಸರು ತಪಾಸಣೆಗೆ ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆ ಕಾರು ಚಾಲಕ ವೇಗವಾಗಿ ಸಂಚರಿಸಿ ಪೊಲೀಸ್ ಸಿಬಂದಿಗೆ ಢಿಕ್ಕಿ ಹೊಡೆದ ಘಟನೆ ತೊಕ್ಕೊಟ್ಟು ಉಳ್ಳಾಲಬೈಲು ಬಳಿ ರವಿವಾರ ನಡೆದಿದ್ದು, ಗಾಯಾಳು ಪೊಲೀಸ್ ಸಿಬಂದಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಸಿಬಂದಿ ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಗೊಂಡವರು.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪಟ್ರೋಲ್ ವಾಹನದಲ್ಲಿ ಚಾಲಕರಾಗಿದ್ದ ಅವರು ಉಳ್ಳಾಲಬೈಲ್ ಬಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಉಳ್ಳಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ಕಾರನ್ನು ನಿಲ್ಲಿಸದೆ ಢಿಕ್ಕಿ ಹೊಡೆದಿದ್ದು, ರಸ್ತೆಗೆ ಬಿದ್ದ ಲೋಕೇಶ್ ಅವರ ತಲೆ ವಿಭಾಜಕಕ್ಕೆ ಬಡಿದು ಗಾಯಗೊಂಡಿದ್ದಾರೆ. ಹಿಟ್ ಆ್ಯಂಡ್ ರನ್ ಮಾಡಿರುವ ಕಾರಿಗೆ ಶೋಧ ಕಾರ್ಯ ನಡೆಯುತ್ತಿದೆ.
ಗುದ್ದಿದ ಬಸ್
ಮಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಸಿಬಂದಿಗೆ ಬಸ್ ಢಿಕ್ಕಿ ಹೊಡೆದ ಘಟನೆ ನಂತೂರಿನಲ್ಲಿ ಸಂಭವಿಸಿದೆ. ಮಂಗಳೂರು ಪೂರ್ವ ಸಂಚಾರಿ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವಿನೋದ್ ಗಾಯಗೊಂಡವರು. ಅವರು ಶನಿವಾರ ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಪಿಟಿ ಕಡೆಯಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ.
ಪರಿಣಾಮ ವಿನೋದ್ ಅವರು ರಸ್ತೆಗೆ ಎಸೆಯಲ್ಪಟ್ಟು ಅವರ ಮುಂಗೈ, ಎದೆ, ಸೊಂಟಕ್ಕೆ ಗಾಯವಾಗಿದೆ. ವಾಚ್, ಮೊಬೈಲ್‌ಗೆ ಹಾನಿಯಾಗಿದೆ. ಬಸ್ ಚಾಲಕನ ವಿರುದ್ಧ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.