Advertisement
ಮಹಿಳೆಯೋರ್ವರು ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಜೈನ್ ಟೆಂಪಲ್ ಹಿಂಬದಿ ಟಿ.ಟಿ. ರಸ್ತೆಯಲ್ಲಿ ತನ್ನ ಮನೆಯಲ್ಲಿರುವಾಗ ಬೆಳಗ್ಗೆ 9.15ರ ಸುಮಾರಿಗೆ ಮನೆಯೊಳಗೆ ಬಂದ ಅಪರಿಚಿತ ವ್ಯಕ್ತಿ 2,000 ರೂ. ತೋರಿಸಿ ಚಿಲ್ಲರೆ ನೀಡುವಂತೆ ಕೇಳಿದ. ಬಳಿಕ ಮಹಿಳೆಯಲ್ಲಿ “ನೀವು ಚಿನ್ನವನ್ನು ಎಲ್ಲಿ ಇಡುತ್ತೀರಿ?’ ಎಂದು ವಿಚಾರಿಸಿದ. ಆಗ ಮಹಿಳೆ ಕಪಾಟಿನಲ್ಲಿ ಚಿನ್ನ ಇಟ್ಟಿದ್ದ ಹ್ಯಾಂಡ್‌ಬ್ಯಾಗ್ ತೋರಿಸಿದರು. ಅಪರಿಚಿತ ವ್ಯಕ್ತಿ ಆ ಬ್ಯಾಗ್ ಅನ್ನು ನೋಡಿ ಕೊಡುವುದಾಗಿ ಹೇಳಿ ಪಡೆದುಕೊಂಡ. ಬಳಿಕ ಅಲ್ಲಿಂದ ಓಡಿ ಹೋದ. ಸುಮಾರು 5-6 ನಿಮಿಷದ ಅನಂತರ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಹ್ಯಾಂಡ್‌ಬ್ಯಾಗ್‌ನಲ್ಲಿ ಒಂದು ಮಂಗಳಸೂತ್ರದ ಸರ, ಒಂದು ದೊಡ್ಡ ಉಂಗುರ, 5 ಚಿಕ್ಕ ಉಂಗುರ ಸೇರಿದಂತೆ 130 ಗ್ರಾಂ ಚಿನ್ನವಿತ್ತು. ಅಪರಿಚಿತ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿದ್ದ. ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೋಡಿ ಮಾಡಿದ !
ಅಪರಿಚಿತ ವ್ಯಕ್ತಿ ಚಿಲ್ಲರೆ ಕೇಳುವ ನೆಪದಲ್ಲಿ ಮಾತನಾಡುತ್ತಾ ಏನೋ ವಶೀಕರಣ ಮಾಡುವ ರೀತಿಯಲ್ಲಿ ಮೋಡಿ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.