Advertisement

ಸಿದ್ದಾಪುರ: ನಾಪತ್ತೆಯಾಗಿದ್ದ ಗ್ಯಾರೇಜ್‌ ಮಾಲಕ ಶವವಾಗಿ ಪತ್ತೆ

12:15 AM Aug 28, 2022 | Team Udayavani |

ಸಿದ್ದಾಪುರ: ಸಿದ್ದಾಪುರದ ಕೊಳ್ಕೆಬೈಲುವಿನಲ್ಲಿ ಪ್ರಸನ್ನ ಬಾಡಿ ಬಿಲ್ಡರ್‌ ಹೆಸರಿನ ವಾಹನ ಬಾಡಿ ಕಟ್ಟುವ ಗ್ಯಾರೇಜ್‌ ನಡೆಸುತ್ತಿದ್ದ ಯಡಮೊಗೆ ಗ್ರಾಮದ ತೆಂಕಬೈಲು ಸುಬ್ರಾಯ ಆಚಾರ್ಯ (52) ಅವರು ಆ. 24ರಿಂದ ನಾಪತ್ತೆಯಾಗಿದ್ದು, ನಾಲ್ಕು ದಿನದ ಬಳಿಕ ಶನಿವಾರ ಜಪ್ತಿ ಬಳಿ ವಾರಾಹಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಸುಬ್ರಾಯ ಆಚಾರ್ಯ ಅವರು ಆ. 24ರಂದು ಯಡಮೊಗೆ ಗ್ರಾಮದ ತೆಂಕಬೈಲುನಿಂದ ಸಿದ್ದಾಪುರ ಗ್ಯಾರೇಜಿಗೆ ಹೋಗುತ್ತೇನೆ ಎಂದು ಹೊರಟ್ಟಿದ್ದರು. ಹಾಲಾಡಿ ಬಳಿ ವಾರಾಹಿ ನದಿಯ ಸೇತುವೆ ಬಳಿ ತನ್ನ ಬೈಕ್‌ ಬಿಟ್ಟು ನಾಪತ್ತೆಯಾಗಿದ್ದರು. ಬೈಕ್‌ ಬಾಕ್ಸ್‌ನಲ್ಲಿ ತಮ್ಮ ಪರ್ಸ್‌, ದಾಖಲೆಗಳು, ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಇಟ್ಟಿದ್ದರು. ಬೈಕ್‌ ಪಕ್ಕದಲ್ಲಿ ತಾವು ಧರಿಸಿದ ಚಪ್ಪಲಿಯನ್ನು ಬಿಟ್ಟು ನಾಪತ್ತೆಯಾಗಿದ್ದರು.

ಮೊದಲು 2 ದಿನ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ವಾರಾಹಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಅನಂತರ ಈಶ್ವರ ಮಲ್ಪೆ ಅವರ ಸಹಾಯದಿಂದ ಶೋಧ ಕಾರ್ಯ ಮುಂದುವರಿಸಿದ್ದರು. ಶನಿವಾರ ಜಪ್ತಿಯ ಬಳಿ ವಾರಾಹಿ ನದಿಯಲ್ಲಿ ಶವ ತೇಲುವುದನ್ನು ಸ್ಥಳೀಯರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

8 ಕಿ.ಮೀ. ದೂರದಲ್ಲಿ ಪತ್ತೆ
ಹಾಲಾಡಿ ಸೇತುವೆಯ ಬಳಿಯಿಂದ ಸುಮಾರು 8 ಕಿ.ಮೀ. ದೂರದ ಹಳ್ನಾಡು ಗ್ರಾಮದ ಜಪ್ತಿ ಬಳಿ ಸುಬ್ರಾಯ ಆಚಾರ್ಯ ಅವರ ಶವ ಪತ್ತೆಯಾಗಿದೆ.

ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ಸಂಬಂಧಿಕರ ಮನೆಗೆ ಬಂದು ವ್ಯಕ್ತಿ ವಾಪಸ್‌ ಮಂಗಳೂರಿಗೆ ಕೆಲಸಕ್ಕೆಂದು ಹೊರಟವರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿಡುಪೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಬೆಳ್ತಂಗಡಿ ತಾ|ನ ಮಿತ್ತಬಾಗಿಲು ಗ್ರಾಮದ ದಿಡುಪೆಯ ಶ್ರೀಧರ ಗೌಡ ಎಂಬವರ ಮನೆಗೆ ಸಂಬಂಧಿಯಾಗಿರುವ ಮೂಲತಃ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಜಯಂತ ಗೌಡ (45) ಅವರು ಗುರುವಾರ ಬಂದಿದ್ದು, ಶುಕ್ರವಾರ ವಾಪಸ್‌ ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಮನೆಯವರಲ್ಲಿ ಹೇಳಿ ಹೋಗಿದ್ದರು ಆದರೆ ಶನಿವಾರ ಬೆಳಗ್ಗೆ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ದಿಡುಪೆ ಬಸ್‌ ನಿಲ್ದಾಣದ ಸಮೀಪ ಕಂಡುಬಂದಿದೆ.

ಬೆಳಗ್ಗೆ ದಿಡುಪೆ ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರು ಬಂದಾಗ ಬಸ್‌ ನಿಲ್ದಾಣದ ಹಿಂಭಾಗದ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯಂತ್‌ ಗೌಡ ಮಂಗಳೂರಲ್ಲಿ ಮನೆ ಮಾಡಿ ವಾಸವಾಗಿದ್ದು, ಬಸ್‌ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next