Advertisement
ಇಲ್ಲಿನ ಗ್ರಾ.ಪಂ. ಕಚೇರಿ ಪಕ್ಕದಲ್ಲಿರುವ ಮೂರ್ತೆದಾರರ ಬ್ಯಾಂಕ್‌ನ ಮುಂಭಾಗದ ಬಾಗಿಲು ಒಡೆಯಲು ಯತ್ನಿಸಿದ್ದ. ಅದು ವಿಫಲವಾದಾಗ ಸನಿಹದಲ್ಲೆ ನಿಲ್ಲಿಸಿ ಹೋದ ಪಿಕಪ್ ವಾಹನದಲ್ಲಿರುವ ರಾಡ್ ಅನ್ನು ಬಳಸಲು ಯತ್ನಿಸಿದ್ದ. ಪಿಕಪ್ ಬಾಗಿಲು ತೆಗೆಯಲು ಅಸಾಧ್ಯವಾದಾಗ ಮುಂಭಾಗದ ಗಾಜು ಒಡೆದು ರಾಡು ತೆಗೆದು ಬ್ಯಾಂಕ್‌ನ ಬಾಗಿಲು ಒಡೆಯುವುದನ್ನು ಬಿಟ್ಟು ಪಕ್ಕದ ಹೊಟೇಲ್‌ಗೆ ನುಗ್ಗಿದ್ದ. ಅಲ್ಲಿ ಐದು ಸಾವಿರ ರೂ.ಗೂ ಹೆಚ್ಚಿನ ಹಣದೊಂದಿಗೆ ಪರಾರಿಯಾಗಿದ್ದ.
ಅನಂತರ ಆ ಕಳ್ಳ ಪಕ್ಕದ ಕ್ಲಿನಿಕ್‌ನ ಹಿಂಭಾಗದ ಕಿಟಕಿಯ ರಾಡ್ ಮುರಿದು ಒಳನುಗ್ಗಿ ಅಲ್ಲಿಯೂ ಜಾಲಾಡಿ ಸುಮಾರು ಐದು ಸಾವಿರ ರೂ. ಕಳವುಗೈದು ಅಲ್ಲಿಂದ ಹಿಂದಿರುಗುವ ವೇಳೆ ಅಲ್ಲಿದ್ದ ಸಿಸಿ ಕೆಮರಾವನ್ನು ಗಮನಿಸಿದ್ದ. ಇನ್ನು ತನ್ನ ಗುರುತು ಪತ್ತೆಯಾಗಬಹುದು ಎಂದುಕೊಂಡು ಅದರ ಸಂಪರ್ಕವನ್ನು ತುಂಡರಿಸಿ ಬಿಟ್ಟ. ಈ ವೇಳೆ ಆತನ ತಲೆಯ ಭಾಗಕ್ಕೆ ಹಿಂಭಾಗದ ಬಾಗಿಲು ಬಡಿದಿದೆ. ಅದರ ಹೊಡೆತಕ್ಕೆ ತೀವ್ರ ಗಾಯವುಂಟಾಗಿ ರಕ್ತ ಬರತೊಡಗಿದೆ. ಈ ಕಳ್ಳ ದಿಕ್ಕು ತೋಚದೆ ಅಲ್ಲಿಂದ ಪರಾರಿಯಾಗಿದ್ದ. ಈತ ಮರಳಿ ಹೋದಲ್ಲೆಲ್ಲ ರಕ್ತ ಒಸರಿದೆ. ಅಲ್ಲಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ. ಮೆಡಿಕಲ್ ಶಾಪ್ ಮಾಲಕ ಡಾ| ಸಂತೋಷ್, ಪಿಕಪ್ ವಾಹನದ ಚಾಲಕ ಯಶೋಧರ, ಮೂತೇìದಾರರ ಬ್ಯಾಂಕ್‌ನ ವ್ಯವಸ್ಥಾಪಕರು ದೂರು ನೀಡಿದ್ದು, ಪೊಲೀಸರು ಕಳ್ಳನ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
Related Articles
ಮೆಡಿಕಲ್‌ನಲ್ಲಿದ್ದ ಸಿಸಿ ಕೆಮರಾದಲ್ಲಿ ಕಳ್ಳನ ಮುಖದ ಸಂಪೂರ್ಣ ಚಹರೆ ಪತ್ತೆಯಾಗಿದೆ. ಆ ಕಳ್ಳ ಸ್ಥಳೀಯ ವ್ಯಕ್ತಿಯಾಗಿದ್ದು, ಜನಸಾಮಾನ್ಯರಿಗೆ ಚಿರಪರಿಚಿತನಾಗಿದ್ದ. ಈ ನಿಟ್ಟಿನಲ್ಲಿ ತನಿಖೆ ಕೈಗೆತ್ತಿಕೊಂಡ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಆರೋಪಿಯು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿ ಅಬ್ದುಲ್ ಖಾದರ್ ಅವರ ಮಗ ಅಶ್ರಫ್ (37). ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲೂ ಆರೋಪಿ ಯಾಗಿರುತ್ತಾನೆ. ಗುರುವಾಯನಕೆರೆ ಸಮೀಪ ಈತನನ್ನು ಬಂಧಿಸಿದ್ದಾರೆ.
ಕಸ ವಿಲೇವಾರಿಗೆ ಬಂದು ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ
ಬಂಧಿತ ಆರೋಪಿಯು ತಣ್ಣಿರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತ ಕಳವು ಕೃತ್ಯಕ್ಕೆ ಯೋಗ್ಯ ಸ್ಥಳವನ್ನು ಗುರುತಿಸುತ್ತಿದ್ದನೆಂದೂ ತನಿಖೆಯ ವೇಳೆ ತಿಳಿದು ಬಂದಿದೆ. ಕಳವುಗೈದು ದೊರಕಿದ ಹಣದಿಂದ ಮೋಜು ಮಸ್ತಿ ನಡೆಸಿ ಚೀಲ ತುಂಬಾ ಹಣ್ಣು ಖರೀದಿಸಿ ಮನೆಯ ದಾರಿ ಹಿಡಿಯುವ ಯತ್ನದಲ್ಲಿದ್ದಾಗಲೇ ಪೊಲೀಸರ ವಶಕ್ಕೆ ಒಳಗಾದಂತಾಗಿದೆ.