Advertisement

ಕರಾವಳಿ ಅಪರಾಧ ಸುದ್ದಿಗಳು

12:34 PM May 03, 2019 | keerthan |

ಅಕ್ರಮ ಮರಳು ಸಾಗಾಟ: ಲಾರಿ, ಚಾಲಕ ಪೊಲೀಸ್‌ ವಶಕ್ಕೆ
ಕಾಪು: ಮಂಗಳೂರಿನಿಂದ ಉಡುಪಿ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾಪು ಪೊಲೀಸರು ತಡೆದು ನಿಲ್ಲಿಸಿ, ಲಾರಿ ಹಾಗೂ ಚಾಲಕನ ಸಹಿತ 20 ಸಾ.ರೂ. ಮೌಲ್ಯದ 17 ಟನ್‌ ತೂಕದಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮೈಸೂರು ಜಿಲ್ಲೆ ಬೆಳವಡಿ ಗ್ರಾಮದ ಮಂಜು ಬುಧವಾರ ಮಧ್ಯರಾತ್ರಿ ಮಂಗಳೂರು ಕಡೆಯಿಂದ ಲಾರಿಯಲ್ಲಿ ಮರಳು ಸಾಗಿಸುತ್ತಿದ್ದ ಮಾಹಿತಿ ಪಡೆ ದ ಕಾಪು ಠಾಣಾಧಿಕಾರಿ ನವೀನ್‌ ನಾಯ್ಕ ನೇತೃತ್ವದ ಪೊಲೀಸರು ರಾ. ಹೆ. 66ರ ಕಾಪುನಲ್ಲಿ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಮಂಜು ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲೆತ್ನಿಸಿದ್ದ. ಪೊಲೀಸರು ಜೀಪಿನಲ್ಲಿ ಬೆನ್ನಟ್ಟಿ ಆರೋಪಿಯನ್ನು ಲಾರಿ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ತಾನು ಶಮಿತ್‌ ಮಣಿಪಾಲ ಎಂಬಾತನ ಸೂಚನೆಯಂತೆ ಫ‌ರಂಗಿಪೇಟೆಯಿಂದ ಮರಳು ತುಂಬಿಸಿಕೊಂಡು ಉಡುಪಿ ಕಡೆಗೆ ಹೊರಟಿದ್ದಾಗಿ ಬಂಧಿತ ಮಂಜು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಢಿಕ್ಕಿ: ಕರ್ತವ್ಯ ನಿರತ ಟ್ರಾಫಿಕ್‌ ಹೆಡ್‌ ಕಾನ್‌ಸ್ಟೆಬಲ್‌ಗೆ ಗಂಭೀರ ಗಾಯ
ಮಂಗಳೂರು: ನಗರದ ಕಂಕನಾಡಿ ಕರಾವಳಿ ಸರ್ಕಲ್‌ ಬಳಿ ಗುರುವಾರ ಮಧ್ಯಾಹ್ನ ಸಂಚಾರ ನಿರ್ವಹಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಪೂರ್ವ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಅಮೃತ ಉಚ್ಚಿಲ್‌ (58) ಅವರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.  ಕಾಂಕ್ರೀಟ್‌ ರಸ್ತೆಗೆ ಬಿದ್ದ ಕಾರಣ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಾಫಿಕ್‌ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುತ್ತೀರ್ಣ: ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಸೋಮವಾರಪೇಟೆ: ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿ, ತೋಳೂರುಶೆಟ್ಟಳ್ಳಿ ಲಲಿತಾದ್ರಿ ಕಾಫಿ ತೋಟದಲ್ಲಿ ರೈಟರ್‌ ಆಗಿರುವ ಅರ್ಜುನ್‌ ಅವರ ಪುತ್ರ ಭುವನ್‌ (16) ಗುರುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಾಫಿ ತೋಟದ ತನ್ನ ಮನೆಯ ಅಟ್ಟದಲ್ಲಿ ನೇಣು ಬಿಗಿದುಕೊಂಡಿದ್ದ. ಪಟ್ಟಣದ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಈತ ಅನುತ್ತೀರ್ಣನಾಗಿದ್ದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್‌ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಟತಟ್ಟು: ಅಸ್ಸಾಂ ಯುವಕ ಆತ್ಮಹತ್ಯೆ
ಕೋಟ: ಕೋಟತಟ್ಟು ಪಡುಕೆರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸ್ಸಾಂ ರಾಜ್ಯದ ಜಯಕಾಂತ್‌ ಕಲಿತಾ (28) ಮೇ 1ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಂಡಿಮಠದಲ್ಲಿ ಹಲ್ಲೆ: ಆರೋಪ
ಬ್ರಹ್ಮಾವರ: ಹನೆಹಳ್ಳಿ ಗ್ರಾಮದ ಬಂಡಿಮಠದಲ್ಲಿ ಬಾವಿ ತೋಡಲು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿರುವುದಾಗಿ ಕಾಂತಿಮತಿ ಆರೋಪಿಸಿದ್ದಾರೆ. ಪ್ರವೀಣ ಆಚಾರ್ಯ ಅವರು ಬಾವಿ ತೋಡುವ ಬಗ್ಗೆ ಮನೆಯವರಾದ ಯೋಗೀಶ ಶೆಟ್ಟಿ, ಗಂಗಾಧರ ಶೆಟ್ಟಿ ಹಾಗೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಬುಧವಾರ ಜೆಸಿಬಿ ಮೂಲಕ ಬಾವಿ ಕೆಲಸ ನಡೆಯುತ್ತಿದ್ದ ಸಂದರ್ಭ ಜಯಲಕ್ಷ್ಮೀ ಕೆದ್ಲಾಯ, ಪ್ರಸಾದ ಆಚಾರ್ಯ, ಪ್ರಸನ್ನ ಆಚಾರ್ಯ ಹಾಗೂ ವಾಸುದೇವ ಆಚಾರ್ಯ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next