Advertisement

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು

02:13 AM Jun 11, 2022 | Team Udayavani |

ಶಿರ್ವ: ಮಲೆಯಾಳಂ ಮತ್ತು ತಮಿಳಿನಲ್ಲಿ ಮಾತನಾಡುತ್ತಿದ್ದ ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಕೃಪಾ ಜುವೆಲರ್ಗೆ ಬಂದು 1.49 ಲ.ರೂ. ಮೌಲ್ಯದ ನೆಕ್ಲೇಸ್‌ ಕಳವು ಮಾಡಿದ್ದಾರೆ.

Advertisement

ಶಿರ್ವ ಕುತ್ಯಾರು ರಸ್ತೆ ಬಳಿಯಿರುವ ಕೃಪಾ ಜುವೆಲರ್ನಲ್ಲಿ ಜೂ. 9ರಂದು 1.49 ಲ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಲೇಸ್‌ ಕಾಣೆಯಾಗಿತ್ತು. ಮಾಲಕರು ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಜೂ. 6ರಂದು ಮಧ್ಯಾಹ್ನ ಜುವೆಲರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರು ಕೆಲಸದವರಿಗೆ ತಿಳಿಯದಂತೆ ಚಿನ್ನದ ನೆಕ್ಲೇಸ್‌ ಅನ್ನು ಕಳ್ಳತನ ಮಾಡುವ ಕೃತ್ಯ ಸೆರೆಯಾಗಿದೆ.

ಕೆ. ವಿವೇಕಾನಂದ ಆಚಾರ್ಯ ಅವರು ನೀಡಿದ ದೂರಿನಂತೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ, ಅತ್ತೆಯ ಕಿರುಕುಳ: ದೂರು
ಕಾಪು: ಪತಿ ಮತ್ತು ಅತ್ತೆಯ ಕಿರುಕುಳದಿಂದ ಮೂರು ಬಾರಿ ಗರ್ಭಪಾತಕ್ಕೊಳಗಾಗಿದ್ದೇನೆ ಎಂದು ಕಟಪಾಡಿ ಪೊಸಾರು ನಿವಾಸಿ ಸುನೀತಾ ಮಡಿವಾಳ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತಿ ಶಿವಾನಂದ ಮಡಿವಾಳ ಮತ್ತು ಅತ್ತೆ ಸಾವಿತ್ರಿ ಆರೋಪಿಗಳು.

2018ರ ಮೇ 6ರಂದು ನಮಗೆ ವಿವಾಹವಾಗಿತ್ತು. ಮದುವೆಯ ಬಳಿಕ 2 ವರ್ಷ ಪತಿ ಮನೆಯಾದ ಹಿರೇರೂಗಿಯಲ್ಲಿ ವಾಸವಿದ್ದೆ. ಮದುವೆಯಾದ ಬಳಿಕ ಮೂರು ಸಲ ಗರ್ಭಿಣಿಯಾಗಿದ್ದು, ಮನೆಯಲ್ಲಿ ವಿಪರೀತ ಮನೆ ಕೆಲಸವಿದ್ದುದರಿಂದ ರಕ್ತಸ್ರಾವವಾಗಿ ಮೂರು ಬಾರಿಯೂ ಗರ್ಭಪಾತವಾಗಿತ್ತು. ಅನಂತರ ತಾಯಿ ಮನೆಯಲ್ಲಿದ್ದೆ. ಅಲ್ಲಿಗೂ ಬಂದು ಪತಿ ಶಿವಾನಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಬೆಳ್ಳೆ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ದೂರು
ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಮೂಡುಬೆಳ್ಳೆಯ ನೆಲ್ಲಿಕಟ್ಟೆ ಬಳಿ ಮಹಿಳೆಯೋರ್ವರಿಗೆ ಸೇರಿದ ಜಾಗದ ಎದುರು ಪಾರ್ಶ್ವದಲ್ಲಿದ್ದ ಕಲ್ಲು ಕೋರೆಯ ಗುಂಡಿಗೆ ಪ್ಲಾಸ್ಟಿಕ್‌ ತ್ಯಾಜ್ಯ ಸುರಿದು ಮಣ್ಣು ಮುಚ್ಚಿದ್ದು, ತೆರವುಗೊಳಿಸಲು ಗ್ರಾ.ಪಂ.ಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ವಿಚಾರಿಸಲು ಹೋದ ಲಕೀÒ$¾ (54) ಅವರಿಗೆ ಬೆದರಿಕೆಯೊಡ್ಡಿದ ಬಗ್ಗೆ ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ ಅವರ ವಿರುದ್ಧ ಮಹಿಳೆ ಶಿರ್ವ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಟಿಪ್ಪರ್‌ ಢಿಕ್ಕಿ: ಗಾಯ
ಪಡುಬಿದ್ರಿ: ಕೋಟೆ ಹೌಸ್‌ ಕರ್ನಿರೆಯಲ್ಲಿ ಶುಕ್ರವಾರ ಬೆಳಗ್ಗೆ ಕರ್ನಿರೆ ಕಡೆಯಿಂದ ಬಂದ ಟಿಪ್ಪರ್‌ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಕರ್ನಿರೆ ನಿವಾಸಿ ನಿಶಿತ್‌ ಶೆಟ್ಟಿ ತೀವ್ರತರವಾಗಿ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಟಿಪ್ಪರ್‌ ಚಾಲಕ, ಪ್ರಕರಣದ ಆರೋಪಿ ರೋಣಪ್ಪ ಗದಗ ತಾನು ಕಾರೊಂದನ್ನು ಓವರ್‌ಟೇಕ್‌ ಮಾಡುವ ಭರಾಟೆಯಲ್ಲಿ ಬೈಕ್‌ನ ಮುಂಭಾಗಕ್ಕೆ ಢಿಕ್ಕಿ ಹೊಡೆಸಿದ್ದ. ರಸ್ತೆಗೆ ಅಪ್ಪಳಿಸಲ್ಪಟ್ಟ ನಿಶಿತ್‌ ಅವರ ಹಣೆಗೆ ಗಾಯ ಹಾಗೂ ಎಡಗಾಲು ಮೂಳೆ ಮುರಿತವಾಗಿದೆ. ಟಿಪ್ಪರ್‌ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಅಂಗಡಿ ಮಾಲಕ ಆತ್ಮಹತ್ಯೆ
ಪುತ್ತೂರು: ಕುರಿಯ ಗ್ರಾಮದ ವಿಷ್ಣುನಗರ ಅಜಲಾಡಿಯಲ್ಲಿ ಅಂಗಡಿ ಹೊಂದಿದ್ದ ರಮೇಶ್‌ ರೈ (55) ಜೂ. 9ರಂದು ರಾತ್ರಿ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಕುಡಿದ ಬಳಿಕ ನೀರು ಕುಡಿಯಲು ಸಮೀಪದ ಕೆರೆಗೆ ಇಳಿದಿದ್ದು, ಅಸ್ವಸ್ಥಗೊಂಡು ಅಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಮನೆಮಂದಿ ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗುವ ದಾರಿಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಸಾವು
ಸಿದ್ದಾಪುರ: ಬೆಳ್ವೆ ಗ್ರಾಮದ ಗುಮ್ಮೊàಲ ಸೂರ್‌ಜೆಡ್ಡು ಕರಿಯ ಪೂಜಾರಿ ಅವರು ಮನೆಯ ಸ್ವಲ್ಪ ದೂರದಲ್ಲಿರುವ ಹಾಡಿಯಲ್ಲಿ ಅಂಗಾತವಾಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಹಾಗೂ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪುತ್ರ ಸಂತೋಷ್‌ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ವಿದ್ಯಾರ್ಥಿಗೆ ಹಲ್ಲೆ
ಪುತ್ತೂರು: ನೆಹರೂನಗರ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಾಲೇಜಿನ ಅಂತಿಮ ಡಿಪ್ಲೊಮಾ ವಿದ್ಯಾರ್ಥಿ ಮೊಹಮ್ಮದ್‌ ಪಝೈಲ್‌ ಉಮ್ಮರ್‌ ಹಲ್ಲೆಗೊಳಗಾದವರು. ಕಾರಿನಲ್ಲಿ ಸಹಪಾಠಿ ಜತೆ ಹೋಗುತ್ತಿದ್ದ ಸಂದರ್ಭ ನೆಹರೂ ನಗರ ಜಂಕ್ಷನ್‌ನಲ್ಲಿ ಅಪರಿಚಿತ 8 ಮಂದಿ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next