ಬೆಂಗಳೂರು: ಕುಖ್ಯಾತ ರೌಡಿಶೀಟರ್ ಚೇತನ್ ಕುಮಾರ್ ಅಲಿಯಾಸ್ ಚಿಕ್ಕ ಚೇತುನನ್ನು ಬಾಗಲಗುಂಟೆ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ನಾಗರಬಾವಿಯ ಐಟಿಐ ಬಡಾವಣೆ ನಿವಾಸಿ ಚೇತನ್ ಕುಮಾರ್ ಬಾಗಲಗುಂಟೆ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ.
2012ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಶ್ರೀರಾಮಪುರ, ಮಾಗಡಿ, ಪೀಣ್ಯ, ವಿಜಯನಗರ, ಚಂದ್ರಾಲೇಔಟ್, ಮಾದನಾಯಕನಹಳ್ಳಿ, ಬಾಗಲಗುಂಟೆ, ಅನ್ನಪೂರ್ಣೇಶ್ವರಿನಗರ, ಸೋಲದೇವನಹಳ್ಳಿ ಠಾಣೆಗಳಲ್ಲಿ ಕೊಲೆ, ಸುಲಿಗೆ, ಡಕಾಯತಿ, ದರೋಡೆ, ಕೊಲೆ ಬೆದರಿಕೆ, ಹಲ್ಲೆ ಸೇರಿ 10 ಪ್ರಕರಣಗಳು ದಾಖಲಾಗಿವೆ.
2022ರಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ, ಜಾಮೀನು ಪಡೆದು ಹೊರಬಂದ ಬಳಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪ್ರವೃತ್ತಿ ಮುಂದುವರಿಸಿದ್ದಾನೆ.
ಈತ ಹಲವು ಪ್ರಕರಣಗಳಲ್ಲಿ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾನೆ. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದಾನೆ.
ಹೀಗಾಗಿ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧಿಸಲು ಬಾಗಲಗುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಬಿ.ಸುನೀಲ್ ಅವರು ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಈ ವರದಿಗೆ ಪೊಲೀಸ್ ಆಯಕ್ತರು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.