ಮೈಸೂರು: ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ಟಿಬೆಟಿಯನ್ ಮೂಲದ ಯುವಕನ್ನು ಡ್ರ್ಯಾಗರ್‌ನಿಂದ ಇರಿದು ಕೊಲೆಗೆ ಯತ್ನಿಸಿ, ತಲೆಮರೆಸಿಕೊಂಡಿದ್ದ ಮೂವರನ್ನು ಎಂಟು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಎಂಟು ವರ್ಷಗಳ ಹಿಂದಿನ ಕೊಲೆ ಯತ್ನ ನಡೆಸಿ, ಬೆಂಗಳೂರು ಸೇರಿದಂತೆ ದುಬೈನಲ್ಲಿ ತಲೆ ಮರೆಸಿಕೊಂಡಿದ್ದ ಮೂವರನ್ನು ಬಂಧಿಸುವಲ್ಲಿ ದೇವರಾಜ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ನಗರದ ಗಾಂಧಿನಗರದ ಸಲೀಂ ಪಾಷ(28) ಎನ್.ಆರ್. ಮೊಹಲ್ಲಾದ ಸಲ್ಮಾನ್ ಪಾಷ(29), ಲಷ್ಕರ್ ಮೊಹಲ್ಲಾದ ಮಹಮ್ಮದ್ ಸೇಠ್ ಬ್ಲಾಕಿನ ಇಸ್ಮಾಯಿಲ್ ಖಾನ್(32) ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬುಧವಾರ ದೇವರಾಜ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಎನ್. ಪ್ರಕಾಶ್‌ಗೌಡ ತಿಳಿಸಿದರು.
ಆರೋಪಿಗಳು ಪತ್ತೆಯಾಗದೇ ಪ್ರಕರಣ ಮುಕ್ತಾಯ: ಈ ಮೂವರು ಎಂಟು ವರ್ಷಗಳ ಹಿಂದೆ 2012 ಆಗಸ್ಟ್ 14 ರಂದು ಸಂಜೆ 7 ಗಂಟೆ ಸಮಯದಲ್ಲಿ ನಗರದ ದುರ್ಗಮ್ಮನ ಗುಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಟಿಬೆಟಿಯನ್ ವ್ಯಕ್ತಿ ತನ್‌ಜಿನ್ ದರ್‌ಗ್ಯಾಲ್ ಎಂಬ 23 ವರ್ಷದ ಯುವಕನಿಗೆ ಹಿಂದಿನಿಂದ ಬೈಕಿನಲ್ಲಿ ಬಂದು ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಿದ್ದರು. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು, ಸಿಸಿಬಿ ಘಟಕಕ್ಕೆ ವರ್ಗಾಯಿಸಿದ್ದರು. ಬಳಿಕ ಸಿಸಿಬಿಯವರು ಎಲ್ಲಾ ಪ್ರಯತ್ನ ನಡೆಸಿ, ಆರೋಪಿಗಳು ಪತ್ತೆಯಾಗದೇ ಇದ್ದುದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.
ಐದು ಪ್ರಕರಣ ದಾಖಲು: ಘಟನೆ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಬೆಂಗಳೂರು ಮತ್ತು ದುಬೈನಲ್ಲಿ ಕೆಲ ವರ್ಷಗಳ ಕೆಲಸ ಮಾಡಿಕೊಂಡು ವಿಷಯ ತಣ್ಣಗಾದ ಬಳಿಕ ಮೈಸೂರಿಗೆ ಹಿಂದಿರುಗಿದ್ದರು. ಈ ಖಚಿತ ಮಾಹಿತಿ ಪಡೆದ ದೇವರಾಜ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಸಲೀಂ ಪಾಷ ರೌಡಿ ಶೀಟರ್ ಆಗಿದ್ದು, ಕೊಲೆ ಯತ್ನ, ಅಪಹರಣ, ಗಲಾಟೆ ಸೇರಿದಂತೆ ಐದು ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್, ಎಸ್‌ಐ ಎಸ್.ರಾಜು, ಮಹಿಳಾ ಎಸ್‌ಐ ಎಂ.ಆರ್. ಲಾವತಿ, ಎಎಸ್‌ಐ ಉದಯ್ ಕುಮಾರ, ಸಿಬ್ಬಂದಿಗಳಾದ ಸೋಮಶೆಟ್ಟಿ, ವೇಣು ಗೋಪಾಲ, ಸುರೇಶ್, ಆರ್. ನಂದೀಶ್, ಪ್ರದೀಪ್, ವಿರೇಶ್ ಬಾಗೇವಾಡಿ, ಮಂಚ ನಾಯಕ, ನಾಗರಾಜು, ಚಂದ್ರು , ಶಂಕಗಗೌಡ ಪಾಟೀಲ್, ಚಾಲಕರಾದ ವಸಂತ ಕುಮಾರ್ ಇದ್ದರು.
ಮಾದಕ ವಸ್ತು ಜಾಲ: ಬೆಂಗಳೂರಿನಲ್ಲಿ ಪತ್ತೆಯಾಗಿರುವ ಮಾದಕ ವಸ್ತು ಜಾಲದಲ್ಲಿ ಬಂಧಿತರಾಗಿವವರು ಮೈಸೂರಿನ ಮೂಲದವರಾಗಿದ್ದು, ಅವರಿಗೆ ಮೈಸೂರಿನೊಂದಿಗೆ ಒಡನಾಟ ಇರುವುದು ಕಂಡು ಬಂದಿಲ್ಲ ಎಂದು ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ತಿಳಿಸಿದ್ದಾರೆ.