ಮಂಗಳೂರು: ಮೂರು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಿ ಮೂಡಿಗೆರೆಯ ಕನ್ನೆ ಹಳ್ಳಿ ನಿವಾಸಿ ಶಶಿ ಯಾನೆ ಶಶಿ ಕುಮಾರ್ (28) ನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ (ಫಾಸ್ಟ್ ಟ್ರ್ಯಾಕ್ ಸೆಷನ್ಸ್ ಕೋರ್ಟ್- 1) ನ್ಯಾಯಾಲಯವು 10 ವರ್ಷಗಳ ಕಠಿನ ಶಿಕ್ಷೆ ಮತ್ತು 1,10,000 ರೂ. ದಂಡ ವಿಧಿಸಿದೆ.
ಆರೋಪಿಯು ಮೂಡುಬಿದಿರೆಯಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಪ್ರಸ್ತುತ ಮೂಡುಬಿದಿರೆ ತಾ| ಮಾರ್ಪಾಡಿ ಗ್ರಾಮದ ಅಲಂಗಾರ್‌ನಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ.
ಆತ ವಾಸ್ತವ್ಯ ಮಾಡುತ್ತಿದ್ದ ಮನೆಗೆ ಟಿ.ವಿ. ವೀಕ್ಷಣೆಗೆ ನೆರೆಮನೆಯ 14 ವರ್ಷದ ಬಾಲಕಿ ಬರುತ್ತಿದ್ದು, ಆಕೆ ಸಲುಗೆಯಿಂದಿದ್ದಳು. 2017ರ ನವೆಂಬರ್‌ನಲ್ಲಿ ಟಿ.ವಿ. ನೋಡಲು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಬಳಿಕವೂ ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು. 2018 ಜೂನ್‌ನಲ್ಲಿ ಬಾಲಕಿ ಗರ್ಭಿಣಿ ಆಗಿದ್ದಳು.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶೆ ಸಾವಿತ್ರಿ ವೆಂಕಟರಮಣ ಭಟ್ ಅವರು ವಿಚಾರಣೆ ನಡೆಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ :ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಹತ್ಯೆ : ಅನಾಥವಾಗಿ ಅಳುತ್ತಿದ್ದ ನಾಲ್ಕು ವರ್ಷದ ಮಗು
ಶಿಕ್ಷೆಯ ವಿವರ
ಅತ್ಯಾಚಾರ ಆರೋಪಕ್ಕೆ 7 ವರ್ಷ ಜೈಲು ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 6 ತಿಂಗಳು ಜೈಲು, ಪೋಕ್ಸೋ ಕಾಯ್ದೆಯಡಿ 10 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 8 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕು. ಒಟ್ಟು ದಂಡದ ಮೊತ್ತ 1,10,000 ರೂ.ಗಳ ಪೈಕಿ 1 ಲಕ್ಷ ರೂ.ಗಳನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ಕೊಡಬೇಕು. ಇದಲ್ಲದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸರಕಾರದಿಂದ 2 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಬಾಲಕಿಗೆ ದೊರಕಿಸಿ ಕೊಡಬೇಕೆಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ಅವರು ವಾದಿಸಿದ್ದರು.