ಬೆಂಗಳೂರು: ಹಳೇ ದ್ವೇಷದಿಂದ ಫಿಜಿಯೋಥೆರಪಿಸ್ಟ್‌ಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟ ಪ್ರಕರಣದಲ್ಲಿ ಸೋಲ ದೇವನಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಮೂಲದ ಯಲಹಂಕ ನಿವಾಸಿ ವೀರ ಆಂಜನೇಯಲು (38), ಗೋವರ್ಧನ್ (23) ಹಾಗೂ ಬುಡ್ಡಪ್ಪ (46) ಬಂಧಿತರು. ಯಲಹಂಕದ ನಿವಾಸಿ ಶ್ರೀಧರ್ (32) ಕೊಲೆಯಾಗಿದ್ದ ಫಿಸಿಯೋಥೆರಪಿಸ್ಟ್.
ಇವರು ಇತ್ತೀಚೆಗೆ ಪತ್ನಿಯನ್ನು ತೊರೆದು ಫಿಸಿಯೋಥೆರಪಿಸ್ಟ್ ಕೆಲಸವನ್ನು ಬಿಟ್ಟಿದ್ದರು. ಮದ್ಯಪಾನಕ್ಕೆ ಹೋಗುತ್ತಿದ್ದ ಬಾರ್‌ನಲ್ಲಿ ಆರೋಪಿ ವೀರಾಂಜನೇಯಲು ಪರಿಚಯವಾಗಿತ್ತು. ಇತ್ತೀಚೆಗೆ ಇಬ್ಬರೂ ಜತೆಯಾಗಿ ಮದ್ಯಪಾನ ಮಾಡಿದ್ದರು. ಕುಡಿದ ಅಮಲಿನಲ್ಲಿ ಶ್ರೀಧರ್ ಆರೋಪಿ ವೀರ ಆಂಜನೇಯುಲುಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಆಕ್ರೋಶಗೊಂಡಿದ್ದ ವೀರ ಆಂಜನೇಯುಲು ಈ ಬಗ್ಗೆ ಜಗಳ ತೆಗೆದಿದ್ದ. ಜಗಳ ತಾರಕಕ್ಕೇರಿ ಕೊಲೆ ಮಾಡುವುದಾಗಿ ವೀರಾಂಜನೇಯಲುಗೆ ಶ್ರೀಧರ್ ಬೆದರಿಸಿದ್ದ.
ಫೆ.4ರಂದು ಶ್ರೀಧರ್‌ಗೆ ಕರೆ ಮಾಡಿದ ವೀರ ಆಂಜನೇಯಲು ಹಾಗೂ ಮತ್ತೂಬ್ಬ ಆರೋಪಿ ಗೋವರ್ಧನ್ ಆಟೋದಲ್ಲಿ ಕೆಂಪಾಪುರದ ಬಾಡಿಗೆ ಮನೆಗೆ ಮದ್ಯಪಾನ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮೂವರು ಆರೋಪಿಗಳೂ ಜತೆಯಾಗಿ ಮಾರಕಾಸ್ತ್ರದಿಂದ ಶ್ರೀಧರ್ ತಲೆಗೆ ಹಲ್ಲೆ ನಡೆಸಿದ್ದರು. ಬಳಿಕ ಚೂರಿಯಿಂದ ಕತ್ತು ಕುಯ್ದು ಕೊಲೆ ಮಾಡಿದ್ದರು. ಅದೇ ದಿನ ರಾತ್ರಿ ಮೃತದೇಹವನ್ನು ಆಟೋದಲ್ಲಿ ಗಾಣಿಗರಹಳ್ಳಿಯ ಜಮೀನೊಂದಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಶವ ಗುರುತಿಸಿದ್ದ ಸಹೋದರ: ಶ್ರೀಧರ್ ಇತ್ತ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಆತನ ಸಹೋದರ ಹಾಗೂ ತಾಯಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದ್ದರು. ಈ ನಡುವೆ ಫೆ.7ರಂದು ಸುಟ್ಟ ಸ್ಥಿತಿಯಲ್ಲಿದ್ದ ಶ್ರೀಧರ್ ಶವ ಕಂಡ ಜಮೀನಿನ ಮಾಲೀಕ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇತರ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದರು. ಅಪರಿಚಿತ ಶವ ಪತ್ತೆಯಾದ ಬಗ್ಗೆ ಪೊಲೀಸರು ಶ್ರೀಧರ್ ಸಹೋದರನಿಗೂ ಮಾಹಿತಿ ನೀಡಿ ನಾಪತ್ತೆಯಾಗಿರುವ ಶ್ರೀಧರ್ ಶವ ಇರಬಹುದೇ ಎಂಬುದನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ಅದರಂತೆ ಫೆ.9ರಂದು ಶ್ರೀಧರ್ ದೇಹ ಸುಟ್ಟು ಹೋಗಿದ್ದರೂ ಅವರ ಕಿವಿಯಲ್ಲಿದ್ದ ಓಲೆ, ಮೈ ಮೇಲೆ ಸುಟ್ಟ ಸ್ಥಿತಿಯಲ್ಲಿದ್ದ ಬಟ್ಟೆಯನ್ನು ಸಹೋದರ ಗುರುತಿಸಿದ್ದ. ಆಗ ಇದು ಶ್ರೀಧರ್ ಮೃತದೇಹ ಎಂಬುದು ಪತ್ತೆಯಾಗಿತ್ತು.