Advertisement

ನಡು ರಸ್ತೆಯಲ್ಲೇ ಟೈಲ್ಸ್‌ ಕಾರ್ಮಿಕನ ಕೊಲೆ : ಎರಡನೇ ಪತ್ನಿಯಿಂದ ಸುಪಾರಿ?

09:08 PM Jul 03, 2021 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಟೈಲ್ಸ್‌ ಕಾರ್ಮಿಕನನ್ನು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆಗೈದಿರುವ ಘಟನೆ ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ) ಠಾಣಾ ವ್ಯಾಪ್ತಿಯ ಕಾವಲ್‌ ಬೈರಸಂದ್ರದ ಅಂಬೇಡ್ಕರ್‌ ಕಾಲೇಜು ಮುಂಭಾಗ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಕಾವಲ್‌ಬೈರಸಂದ್ರ ನಿವಾಸಿ ಕೃಷ್ಣಮೂರ್ತಿ (35) ಹತ್ಯೆಯಾದ ಕಾರ್ಮಿಕ. ಘಟನೆ ಸಂಬಂಧ ಕೃಷ್ಣಮೂರ್ತಿ ಎರಡನೇ ಪತ್ನಿ ವಿರುದ್ಧ ಮೃತನ ಸಹೋದರ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೇರಂ ಆಡಲು ಮನೆಯ ಹತ್ತಿರದಲ್ಲಿರುವ ಸ್ನೇಹಿತರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಕೃಷ್ಣಮೂರ್ತಿಯನ್ನು ಇದೇ ವೇಳೆ ಬೈಕ್‌ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೃಷ್ಣಮೂರ್ತಿಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಿ.ಜೆ.ಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ :ಅಮೀರ್-ಕಿರಣ್ ವಿಚ್ಛೇದನಕ್ಕೆ ಕಾರಣವಾಯ್ತಾ ಆಕೆಯ ನೆರಳು…ಅಷ್ಟಕ್ಕೂ ಯಾರವಳು ?

2ನೇ ಪತ್ನಿ ಮೇಲೆ ಶಂಕೆ?
ಸುಮಾರು ವರ್ಷಗಳಿಂದ ಟೈಲ್ಸ್‌ ಕೆಲಸ ಮಾಡಿಕೊಂಡಿದ್ದ ಕೃಷ್ಣಮೂರ್ತಿ ಕೆಲ ವರ್ಷಗಳ ಹಿಂದೆ ಮೊದಲ ಪತ್ನಿ ಬಿಟ್ಟು ಹೋದ ಬಳಿಕ ಕೆ.ಜಿ.ಹಳ್ಳಿಯ ಸಮಾಧಾನ ನಗರ ನಿವಾಸಿ ರುತು ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಪತ್ನಿ ಒಂದು ಮಗುವನ್ನು ತನ್ನೊಂದಿಗೆ ತವರು ಮನೆಗೆ ಕರೆದೊಯ್ಯಿದ್ದಳು. ಮತ್ತೂಂದು ಮಗು ಕೃಷ್ಣಮೂರ್ತಿ ಬಳಿಯೇ ಇತ್ತು. ಈ ನಡುವೆ ಕೃಷ್ಣಮೂರ್ತಿ ಮದ್ಯ ಸೇವಿಸಿ ಆಕೆಯ ತವರು ಮನೆಗೆ ಹೋಗಿ ಗಲಾಟೆ ಮಾಡಿದಲ್ಲದೆ, ಮನೆಯೊಳಗೆ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಅನಂತರವೂ ಪದೇ ಪದೇ ಹೋಗಿ ತನ್ನ ಮಗುವನ್ನು ತನಗೆ ಕೊಡುವಂತೆ ಪತ್ನಿಗೆ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ಎರಡನೇ ಪತ್ನಿಯೇ ಕೊಲೆ ಮಾಡಿಸಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೂಂದೆಡೆ ರುತು ಮತ್ತು ಆಕೆಯ ಮನೆಯವರು ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next