ಕಲಬುರಗಿ: ಶಹಬಾದ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯನನ್ನು ಸ್ಥಳ ಮಹಜರು ಮಾಡಲು ಹೋದಾಗ ಆತ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಫೈರಿಂಗ್ ಮಾಡಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಈ ವೇಳೆ ಆರೋಪಿಯ ಕಾಲು ಮತ್ತು ತಲೆಗೆ ಗಾಯವಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಹಬಾದ್ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಪಿಎಸ್ಐ ಸುವರ್ಣಾ ಮಲಶೆಟ್ಟಿ ಅವರಿಗೆ ಗಾಯಗಳಾಗಿವೆ. ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಜುಲೈ 11ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ವಿಜಯನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಬಿಸಾಡಿದ್ದ ಸ್ಥಳದ ಮಹಜರು ನಡೆಸಲು ಶನಿವಾರ ಬೆಳಗ್ಗೆ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ:ಸರ್ಕಾರಿ ನೌಕರ 2ನೇ ವಿವಾಹವಾಗಲು ಅನುಮತಿ ಕಡ್ಡಾಯ: ಬಿಹಾರ ಸರ್ಕಾರದ ಅಧಿಸೂಚನೆಯಲ್ಲೇನಿದೆ?
ತನಿಖಾಧಿಕಾರಿ ಪ್ರಕಾಶ ಯಾತನೂರ ಮತ್ತು ಪಿಎಸ್ಐ ಸುವರ್ಣಾ ಅವರಿಗೆ ತಾನು ಬಿಸಾಡಿದ ಮಚ್ಚು ತೋರಿಸಿದ ಆರೋಪಿ, ಅದೇ ಮಚ್ಚಿನಿಂದ ಪಿಎಸ್ಐ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನಿಖಾಧಿಕಾರಿ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ. ಈ ವೇಳೆ ಆರೋಪಿಯ ಬಲಗಾಲಿಗೆ ಒಂದು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿಜಯ ಮತ್ತುಗಾಯಾಳು ಪಿಎಸ್ ಐ ಸುವರ್ಣ
ಆರೋಪಿ ವಿಜಯನ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.