Advertisement

ಕ್ರಿಕೆಟಿಗರ ಪೊಲಿಟಿಕಲ್‌ ಟೆಸ್ಟ್‌ !

12:30 AM Mar 23, 2019 | |

ಮೈದಾನದಲ್ಲಿ ಮಾತ್ರವಲ್ಲ ; ರಾಜಕೀಯದಲ್ಲೂ ಬ್ಯಾಟ್‌ ಬೀಸಲು ಹೋದವರು ಹಲವರು. ರಾಜಕೀಯ ಪಕ್ಷಗಳೂ ಸೆಲೆಬ್ರಿಟಿ (ಸಿನಿಮಾ ನಟರು, ಕ್ರಿಕೆಟ್‌ ಪಟುಗಳು ಇತ್ಯಾದಿ) ಗಳ ಮುಖಬೆಲೆಯ ಮೇಲೆ ಬಂಡವಾಳ ಹೂಡುವುದೇನೂ ಹೊಸದಲ್ಲ. ಭಾರತೀಯ ಕ್ರಿಕೆಟ್‌ ತಂಡದ ಓಪನರ್‌ ಆಗಿದ್ದ ಗೌತಮ್‌ ಗಂಭೀರ್‌ ತಮ್ಮ ರಾಜಕೀಯ ಇನ್ನಿಂಗ್ಸ್‌ ಅನ್ನು ಶುಕ್ರವಾರವಷ್ಟೇ ಆರಂಭಿಸಿದ್ದಾರೆ ಬಿಜೆಪಿಯನ್ನು ಸೇರುವ ಮೂಲಕ. ಹಾಗೆಂದು ಬ್ಯಾಟಿಂಗ್‌ಗೆ ಇಳಿದವರೆಲ್ಲಾ ಕೈ ತುಂಬಾ ರನ್‌ ಗಳಿಸುತ್ತಾರೆಂದೇನೂ ಇಲ್ಲ. ಹಾಗೆಯೇ ರಾಜಕೀಯದಲ್ಲೂ ಇದೆ. ಗಂಭೀರ್‌ ತಮ್ಮ ಪೊಲಿಟಿಕಲ್‌ ಟೆಸ್ಟ್‌ ಗೆ ಸಿದ್ಧವಾಗಿರುವ ಹೊತ್ತಿನಲ್ಲೇ ಇದುವರೆಗೆ ಇಂಥದೊಂದು ಪರೀಕ್ಷೆ ಬರೆದವರ ಬಗ್ಗೆ ಅವಲೋಕನ ಇಂದಿನ ಮತದ ಮಾತು.

Advertisement

ನವಜೋತ್‌ ಸಿಂಗ್‌ ಸಿಧು
ಸಿಧು ಮೊದಲು ಬಿಜೆಪಿ ಪರ ಬ್ಯಾಟ್‌ ಬೀಸಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಮೃತ ಸರದಿಂದ ಸ್ಪರ್ಧಿಸಿ ಗೆಲುವಿನ ರುಚಿಯನ್ನೂ ಸವಿದರು. 2016ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಹೊಂದಿಯೂ, ಬಿಜೆಪಿಯಿಂದ ಹೊರಬಂದು 2017ರಲ್ಲಿ ಕಾಂಗ್ರೆಸ್‌ ಸೇರಿದರು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದಾರೆ.

ವಿನೋದ್‌ ಕಾಂಬ್ಳಿ
 ಭಾರತೀಯ ಕ್ರಿಕೆಟ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್‌. ಇವರು ಹೆಚ್ಚು ಅವಕಾಶ ಪಡೆದವರಲ್ಲ. ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ವರು. ಬಳಿಕ ಲೋಕ್‌ ಭಾರತಿ ಪಕ್ಷದ ಮೂಲಕ ರಾಜಕೀಯ ಗ್ರೌಂಡ್‌ಗೆ ಇಳಿದರೂ ಪಕ್ಷದ ಉಪಾಧ್ಯಕ್ಷ ಪಟ್ಟಕ್ಕೇ ಸೀಮಿತಗೊಂಡರು. ದೊಡ್ಡ ಗೆಲುವಿನ ರುಚಿ ಕಂಡವರಲ್ಲ.

ಮನ್ಸೂರ್‌ ಅಲಿಖಾನ್‌ ಪಟೌಡಿ
ಭಾರತೀಯ ಕ್ರಿಕೆಟ್‌ ಕಂಡ ಅತ್ಯುನ್ನತ‌ ಕಪ್ತಾನನಾಗಿದ್ದ ಮನ್ಸೂರ್‌ 1991ರಲ್ಲಿ ಬೋಪಾಲ್‌ನಲ್ಲಿ ಕಾಂಗ್ರೆಸ್‌ ಚಿಹ್ನೆಯಡಿ ಸ್ಪರ್ಧಿಸಿ ಸೋಲುಂಡವರು. “ಕೈ’ ಬಿಟ್ಟು ಹರಿಯಾಣದ ವಿಶಾಲ್‌ ಹರಿಯಾಣ ಪಕ್ಷದಿಂದ ಸ್ಪರ್ಧಿಸಿದ್ದರೂ ಗೆಲುವಿನತ್ತ ಮುಖ ಮಾಡಲಾಗಲಿಲ್ಲ. 

ಅಜರುದ್ದೀನ್‌
ಮಧ್ಯಮ ಕ್ರಮಾಂಕದ ದಾಂಡಿಗನಾಗಿದ್ದ ಅಜರುದ್ದೀನ್‌ ಮ್ಯಾಚ್‌ಫಿಕ್ಸಿಂಗ್‌ ಆರೋಪವೊಂದರಲ್ಲಿ ನಿಷೇಧಕ್ಕೆ ಗುರಿಯಾದರು. ಸೀಮಿತ ಒವರ್‌ಗಳ ಪಂದ್ಯಾಟದಿಂದ ನಿಷೇಧವಾದರೂ 24ಗಿ7 ರಾಜಕೀಯದ ಬಾಗಿಲು ತೆರೆದಿತ್ತು. 2009ರಲ್ಲಿ ಕಾಂಗ್ರೆಸ್‌ ಸೇರಿ, 2009ರಲ್ಲಿ ಉತ್ತರ ಪ್ರದೇಶದಿಂದ ಸಂಸದನಾಗಿಯೂ ಆಯ್ಕೆಯಾದರು. 

Advertisement

ಕೀರ್ತಿ ಅಜಾದ್‌
 ವಿಶ್ವಕಪ್‌ ವಿಜೇತ ತಂಡದಲ್ಲಿದ್ದು, ರಾಜಕೀಯಕ್ಕೆ ಬಂದವರು. ಇವರು ಬಿಜೆಪಿ ಹಾಗೂ ಕಾಂಗ್ರೆಸ್‌ನ ನೀರು ಕುಡಿದವರೇ. ತಂದೆ ಭಾಗವತ್‌ ಝಾ ಅಜಾದ್‌ ಕಾಂಗ್ರೆಸ್‌ ನಿಂದ ಗುಜರಾತ್‌ ಸಿಎಂ ಆಗಿದ್ದಾಗ ಇವರು ಬಿಜೆಪಿ ಸೇರಿದ್ದರು. ಸಂಸದನಾಗಿದ್ದಾಗ ಹಗರಣ ಗಳು ಇವರನ್ನು ಬಿಡಲಿಲ್ಲ. ಮುಖ್ಯವಾಗಿ ಅರುಣ್‌ ಜೇಟ್ಲಿ ಇವರ ವಿರುದ್ಧ ಗುಡುಗಿದಾಗ ಅನಿವಾರ್ಯವಾಗಿ ಬಿಜೆಪಿ ತೊರೆದು “ಕೈ’ ಹಿಡಿದರು.

ಅರ್ಜುನ್‌ ರಣತುಂಗ
ಶ್ರೀಲಂಕಾದ ಅರ್ಜುನ್‌ ರಣತುಂಗ ನಿವೃತ್ತಿ ಘೋಷಿಸಿದ ಬಳಿಕ ಧುಮುಕಿದ್ದು ರಾಜಕೀಯಕ್ಕೆ. ಶ್ರೀ ಲಂಕಾ ಫ್ರೀಡಂ ಪಾರ್ಟಿಯ ಮೂಲಕ 2001ರಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿ ಭರ್ಜರಿ ಗೆಲುವಿನ ಸಿಕ್ಸರ್‌ ಅನ್ನೇ ಬಾರಿಸಿದ್ದು ಇತಿಹಾಸ. 

ಸನತ್‌ ಜಯಸೂರ್ಯ
ಏಕದಿನ ಕ್ರಿಕೆಟ್‌ನ ಪ್ರತಿಭಾವಂತ ಆಟಗಾರ. ಪ್ರಯೋಗಶೀಲನಂತೆ ರಾಜಕೀಯ ಕ್ಷೇತ್ರಕ್ಕೂ ಇಳಿದು ಯಶಸ್ಸು ಕಂಡರು. 2010ರಲ್ಲಿ ಅಧಿಕಾರವನ್ನು ಅನುಭವಿಸಿದ್ದರು. ಮಹೇಂದ್ರ ರಾಜಪಕ್ಸೆ ಸರಕಾರದಲ್ಲಿ ಉಪ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದು ವಿಶೇಷ.

ಇಮ್ರಾನ್‌ ಖಾನ್‌ 
ಕ್ರಿಕೆಟ್‌ನಲ್ಲಿ ಈ ಯಶಸ್ಸು ಕಂಡದ್ದು ಇಮ್ರಾನ್‌ ಖಾನ್‌ ಒಬ್ಬರೇ. ಪಾಕಿಸ್ಥಾನದ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಮ್ರಾನ್‌ ಚೆಂಡು-ದಾಂಡಿನ ಆಟದಿಂದ ನಿವೃತ್ತಿ ಪಡೆದು ರಾಜಕೀಯದತ್ತ ಹೊರಟರು . 1992ರ ವಿಶ್ವಕಪ್‌ ಅನ್ನು ಪಾಕಿಸ್ಥಾನ ಇವರ ನಾಯಕತ್ವದಲ್ಲಿ ಮುಡಿಗೇರಿಸಿಕೊಂಡಿತ್ತು. ಬಳಿಕ 1996ರಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತೀವ್ರವಾದ ಹಿನ್ನಡೆ, ಅವಮಾನವನ್ನು ಎದುರಿಸಿದ್ದರು. ಆದರೀಗ 22 ವರ್ಷಗಳ ಬಳಿಕ 2018ರಲ್ಲಿ ಪ್ರಧಾನಿ ಪಟ್ಟವನ್ನು ಏರಿದರು. ಹನ್ನೊಂದು ಮಂದಿಯ ತಂಡವನ್ನು ಮುನ್ನಡೆಸುತ್ತಿದ್ದವ ಇಂದು ದೇಶವನ್ನು ಮುನ್ನಡೆಸುತ್ತಿರುವ ಕಪ್ತಾನ.

ಉದಯವಾಣಿ  ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next