Advertisement

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

05:23 PM Sep 25, 2020 | keerthan |

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. ಒಂದು ಪಂದ್ಯ ನಡೆದರೆ ಲಕ್ಷಾಂತರ ಜನ ಕೆಲಸ ಕಾರ್ಯ ಬಿಟ್ಟು ಪಂದ್ಯ ನೋಡುತ್ತಾರೆ. ತಾವೂ ಆಟಗಾರರಾಗಬೇಕು, ತಮ್ಮ ಮಕ್ಕಳನ್ನು ಟೀಂ ಇಂಡಿಯಾ ಆಡಿಸಬೇಕು ಎಂದು ಆಸೆ ಪಡುತ್ತಾರೆ . ಕೆಲವರು ಸ್ವಲ್ಪ ಪ್ರಯತ್ನವೂ ಪಡುತ್ತಾರೆ. ಹಾಗೆಯೇ  ಇಲ್ಲೊಬ್ಬ ತಂದೆ ಪ್ರಯತ್ನ ಮಾಡುತ್ತಾರೆ. ಕ್ರಿಕೆಟ್ ತರಬೇತಿ ನೀಡುವ ಅಕಾಡೆಮಿಗೆ ಸೇರಿಸಲು ಹೋಗುತ್ತಾರೆ . ಆದರೆ ಅಲ್ಲಿ ಅವಕಾಶ ಸಿಗುವುದಿಲ್ಲ. ಯಾಕೆಂದರೆ ಅವರು ಅಲ್ಲಿ ತರಬೇತಿಗೆ ಸೇರಿಸಲು  ಹೋಗಿದ್ದು ತನ್ನ ಮಗನನ್ನು ಅಲ್ಲ ಬದಲಾಗಿ ಮಗಳನ್ನು !

Advertisement

ಇದು ಅಮೀರ್ ಖಾನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ದಂಗಲ್’ ನ ಕಥೆಯಂತಿದೆ. ಆದರೆ ಅಲ್ಲಿ ಕುಸ್ತಿ ಇಲ್ಲಿ ಕ್ರಿಕೆಟ್ ಇದೆ ಅಂತ ನೀವು ಯೋಚನೆ ಮಾಡುತ್ತಿರಬಹುದು. ಹೌದು ಇದು ದಂಗಲ್ ಚಿತ್ರದಂತೆಯೇ ನಡೆದ ಕಥೆ. ಮಗಳಿಗಾಗಿ ಸರ್ವಸ್ವ ಧಾರೆಯೆರೆದ ತಂದೆಯ ಕಥೆ. ತಂದೆಯ ಕನಸನ್ನು ಪೂರ್ಣಗೊಳಿಸಿದ ಸುಂದರಿ ಮಗಳ ಕಥೆ.

ರಾಜಸ್ಥಾನದ ಜೈಪುರದ ಸರ್ವೇ ಡಿಪಾರ್ಟ್‌ಮೆಂಟ್ ನ ಹೆಡ್ ಕ್ಲಾರ್ಕ್ ಆಗಿರುವ ಸುರೇಂದರ್ ಪೂನಿಯಾಗೆ ತನ್ನ ಮಗಳನ್ನು ಕ್ರಿಕೆಟರ್ ಮಾಡಬೇಕೆಂಬ ಆಸೆ. ಮಗಳು ಪ್ರಿಯಾ ಏಳು ವರ್ಷವಿದ್ದಾಗಲೇ ಮನೆಯಲ್ಲಿ ಕ್ರಿಕೆಟ್ ಕಲಿಯಲು ಆರಂಭಿಸಿದಳು. ಒಂದು ದಿನ ತಂದೆ ಸುರೇಂದರ್ ಮಗಳನ್ನು  ಸ್ಥಳೀಯ ಕ್ರಿಕೆಟ್ ಅಕಾಡಮಿಗೆ ಸೇರಿಸಲು ಹೋಗುತ್ತಾರೆ.  ಆಗ ಭಾರತದಲ್ಲಿ ಹೆಣ್ಣು ಮಕ್ಕಳು ಕ್ರಿಕೆಟ್ ಆಡುವುದು ಇನ್ನೂ ಪ್ರಚಲಿತಕ್ಕೆ ಬಂದಿರಲಿಲ್ಲ. ಹೀಗಾಗಿ ಪ್ರಿಯಾ ಪೂನಿಯಾಗೆ ಜೈಪುರ ಅಕಾಡೆಮಿಯಲ್ಲಿ ಹೆಣ್ಣು ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತು.

ಇದರಿಂದ ಬೇಸರಗೊಂಡ ಸುರೇಂದರ್ ಪೂನಿಯಾ ಒಂದು ಗಟ್ಟಿ ನಿರ್ಧಾರ ಮಾಡಿದರು.  ಮಗಳನ್ನು ಅಂತಾರಾಷ್ಟ್ರೀಯ ಕ್ರೀಡಾಪಟುವನ್ನಾಗಿಸುವ ಕನಸು ಆ ಕಣ್ಣುಗಳಲ್ಲಿತ್ತು. ಅದನ್ನು ನನಸು ಮಾಡಲು ಎಂತಹ ಕಷ್ಟವಾದರೂ ಸಹಿಸಲು ಸಿದ್ದರಿದ್ದರು ಅವರು. ಆದರೆ ಕೋಚಿಂಗ್ ಮಾಡಲು ಜಾಗವೇ ಇಲ್ಲ?

Advertisement

ಇದನ್ನೂ ಓದಿ: ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಮಗಳನ್ನೇ ಆಸ್ತಿಯನ್ನಾಗಿಸುವ  ಪಣತೊಟ್ಟ ಸುರೇಂದರ್ ಪೂನಿಯಾ ತನ್ನ ಆಸ್ತಿಯನ್ನು ಮಾರಲು ಸಿದ್ದವಾದರು. ಜೈಪುರದ ತನ್ನ ಆಸ್ತಿ ಮಾರಿ, ಬ್ಯಾಂಕ್ ಲೋನ್ ಮಾಡಿ ನಗರದ ಹೊರವಲಯದಲ್ಲಿ 22 ಲಕ್ಷ ಕೊಟ್ಟು ಎಕರೆಯಷ್ಟು ಜಾಗ ಖರೀದಿಸಿದರು. ಅಲ್ಲಿ ಪಿಚ್ ಸಿದ್ದ ಪಡಿಸಲು ಒಂದು ಲಕ್ಷ ಖರ್ಚಾಗುತ್ತದೆ ಎಂದು ತಿಳಿದು ತಾವೇ ಹಾರೆ ಗುದ್ದಲಿ ಹಿಡಿದು ಪಿಚ್ ಸಿದ್ದ ಮಾಡಿದರು. ಮಗಳಿಗಾಗಿ ತಾವೇ ಒಂದು ಕ್ರಿಕೆಟ್ ಪಿಚ್ ಸಿದ್ದಪಡಿಸಿದರು.

ತಂದೆಯನ್ನೇ ಗುರುವಾಗಿ ಸ್ವೀಕರಿಸಿದ ಪ್ರಿಯಾ ಅವರ ಬಳಿಯೇ ಕ್ರಿಕೆಟ್ ನ ಪ್ರಾಥಮಿಕ ಶಿಕ್ಷಣ ಪಡೆದರು. ತಂದೆ ಸುರೀಂದರ್ ಪೂನಿಯಾ ತನ್ನ ಮಗಳಿಗೆ ತಂದೆ, ಗುರು, ಮಾರ್ಗದರ್ಶಕ, ಸ್ನೇಹಿತ ಎಲ್ಲವೂ ಆಗಿದ್ದರು.

ಜೈಪುರದಿಂದ ದೆಹಲಿಗೆ ಬಂದ ಪ್ರಿಯಾ ಪುನಿಯಾ ಅಲ್ಲಿ ಪ್ರಸಿದ್ಧ ಕ್ರಿಕೆಟ್ ತರಬೇತುದಾರ ರಾಜಕುಮಾರ್ ಅವರ ಗರಡಿಗೆ ಪ್ರವೇಶಿಸಿದರು. ರಾಜಕುಮಾರ್ ಅವರು ಟೀಂ ಇಂಡಿಯಾ ಕೋಚ್ ವಿರಾಟ್ ಕೊಹ್ಲಿ ಅವರ ಕೋಚ್ ಕೂಡಾ ಹೌದು. ರಾಜಕುಮಾರ್ ಅವರ ಬಳಿ ಸುಮಾರು ಏಳು ವರ್ಷ ತರಬೇತಿ ಪಡೆದ ಪ್ರಿಯಾ ಪೂನಿಯಾ ಕ್ರಿಕೆಟ್ ನ ಪಟ್ಟುಗಳನ್ನು ಕಲಿತರು.

2016ರಲ್ಲಿ ಬೆಂಗಳೂರಿನಲ್ಲಿ ನಡೆದ ಹೈದರಾಬಾದ್ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಪ್ರಿಯಾ ಪೂನಿಯಾ ಮೊದಲ ಬಾರಿಗೆ ದೇಶಿಯ ಕ್ರಿಕೆಟ್ ಗೆ ಕಾಲಿಟ್ಟರು. ದೆಹಲಿ ಸೀನಿಯರ್ ತಂಡಕ್ಕೆ ಕಾಲಿಟ್ಟ ಪ್ರಿಯಾ ಏಕದಿನ ಚಾಂಪಿಯನ್ ಶಿಪ್ ಕೂಟದಲ್ಲಿ ಮಿಂಚಿದರು. ಕೇವಲ ಎಂಟು ಪಂದ್ಯಗಳಿಂದ 50ರ ಸರಾಸರಿಯಲ್ಲಿ 407 ರನ್ ಬಾರಿಸಿದ ಪ್ರಿಯಾ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಲಯದಲ್ಲಿ ಸುದ್ದಿಯಾದರು.

ಉತ್ತರ ವಲಯ, ಮಹಿಳಾ ಐಪಿಎಲ್ ನ ಸೂಪರ್ ನೋವಾಸ್, ಇಂಡಿಯಾ ಎ ತಂಡಗಳಲ್ಲಿ ಪ್ರಿಯಾ ಕಾಣಿಸಿಕೊಂಡರು. ಅದರಲ್ಲೂ ಮಹಿಳಾ ಐಪಿಎಲ್ ನಲ್ಲಿ ಸೂಪರ್ ನೋವಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಿಯಾ ಪೂನಿಯಾ ಮಹತ್ವದ್ದಾಗಿತ್ತು. ಆ ಫೈನಲ್ ಪಂದ್ಯದಲ್ಲಿ ಪ್ರಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇಷ್ಟೆಲ್ಲಾ ಪ್ರದರ್ಶನ ನೀಡಿದರು ಪ್ರಿಯಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಒಮ್ಮೆ ಬಿಸಿಸಿಐನ ಹಿರಿಯ ಅಧಿಕಾರಿಯ ಆಪ್ತ ಸಹಾಯಕರೊಬ್ಬರು, ಪ್ರಿಯಾರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಲು ತಾನು ಸಹಾಯ ಮಾಡಬಲ್ಲೇ ಎಂದು ಹೇಳಿದ್ದರಂತೆ. ಆದರೆ ಅವರ ಆ ಶಿಫಾರಸ್ಸನ್ನು ತಿರಸ್ಕರಿಸಿದ ಪ್ರಿಯಾ, “ನಾನು ಇಷ್ಟು ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಈಗ ಯಾರದ್ದೊ ಶಿಫಾರಸ್ಸಿನ ಮೂಲಕ ತಂಡಕ್ಕೆ ಆಯ್ಕೆಯಾದರೆ ಅದರಲ್ಲಿ ತೃಪ್ತಿ ಇರುವುದಿಲ್ಲ ಎಂದು ಉತ್ತರಿಸಿದ್ದರು.

ಕ್ರಿಕೆಟ್ ತರಬೇತಿ ಪಡೆಯುತ್ತಲೇ ತನ್ನ ಶಿಕ್ಷಣವನ್ನೂ ಮುಂದುವರಿಸಿದ ಪ್ರಿಯಾ ದೆಹಲಿಯ ಜೀಸಸ್ ಅ್ಯಾಂಡ್ ಮೇರಿ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಕೂಡ ಪಡೆದಿದ್ದಾರೆ.

ಇದೇ ವರ್ಷ ಕಿವೀಸ್ ವಿರುದ್ಧದ ಟಿ ಟ್ವೆಂಟಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪ್ರಿಯಾ ಪೂನಿಯಾ ಪದಾರ್ಪಣೆ ಮಾಡಿದರು. ಅಪಾರ ನಿರೀಕ್ಷೆ ಹೊತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಪೂನಿಯಾ ಅನುಭವಿಸಿದ್ದು ಮಾತ್ರ ನಿರಾಶೆ. ಮೂರು ಟಿ ಟ್ವೆಂಟಿ ಪಂದ್ಯಗಳಿಂದ ಪ್ರಿಯಾ ಗಳಿಸಿದ್ದು ಕೇವಲ 9 ರನ್ !

ಅಂತಾರಾಷ್ಟ್ರಿಯ ಮಟ್ಟದಲ್ಲಿ ದೊಡ್ಡ ನಿರಾಸೆ ಅನುಭವಿಸಿದ ಪ್ರಿಯಾ ಮತ್ತೆ ಕಠಿಣ ಅಭ್ಯಾಸ ನಡೆಸಿದರು. ತಂದೆಯ ಕನಸನ್ನು ನನಸು ಮಾಡುವ ಅವಕಾಶ ಕೈಚೆಲ್ಲಿದ ಹತಾಶೆ ಪ್ರಿಯಾಳನ್ನು ಕಾಡುತಿತ್ತು. ಛಲ ಬಿಡದ ಪ್ರಿಯಾ ಮತ್ತೆ ಅಂದರೆ ಅಕ್ಟೋಬರ್ 9ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದರು.  ದಕ್ಷಿಣ ಆಫ್ರಿಕಾ ವಿರುದ್ದ ವಡೋದರ ಪಂದ್ಯದಲ್ಲಿ ಏಕದಿನ ಪದಾರ್ಪನೆ ಮಾಡಿದ ಪ್ರಿಯಾ ಭರ್ಜರಿ ಅರ್ಧಶತಕ ಬಾರಿಸಿದರು. ಈ ಮೂಲಕ ಮೊದಲ ಏಕದಿನ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಆಗಮನವನ್ನು ಸಾರಿದರು.

ಮಹಿಳಾ ಕ್ರಿಕೆಟ್ ದಿಗ್ಗಜೆ ಮಿಥಾಲಿ ರಾಜ್ ಅವರ ಬ್ಯಾಟಿಂಗ್ ಉತ್ತರಾಧಿಕಾರಿಯಾಗುವ ಲಕ್ಷಣ ತೋರಿಸಿರುವ ಪ್ರಿಯಾ ಇದೇ ರೀತಿ ಉತ್ತಮ ಪ್ರದರ್ಶನ ಮುಂದುವರಿಸಬೇಕಾಗಿದೆ. ಆಗ ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು.

ಮೊದಲ ಏಕದಿನ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಪ್ರಿಯಾ ರಾತ್ರೋರಾತ್ರಿ ಪ್ರಸಿದ್ದರಾಗಿಬಿಟ್ಟರು. 23ರ ಹರೆಯದ ಚೆಲುವೆ ಪ್ರಿಯಾ ಸದ್ಯ ಭಾರತದ ಹೊಸ ಕ್ರಶ್. ತನ್ನ ಆಟ ಮತ್ತು ಚೆಲುವಿನಿಂದ ಹರೆಯದ ಹುಡುಗರ ನಿದ್ದೆಗೆಡೆಸಿರುವ ಪ್ರಿಯಾ ಜನಪ್ರೀಯತೆ ಯಾವ ಮಟ್ಟಿಗೆ ಏರಿಕೆಯಾಗಿದೆ ಎಂದರೆ ಕೆಲ ದಿನಗಳ ಹಿಂದೆ 30 ಸಾವಿರವಿದ್ದ ಪ್ರಿಯಾ ಇನ್ಸ್ಟಾ ಗ್ರಾಮ್ ಫಾಲೋವರ್ಸ್ ಈಗ ನಾಲ್ಕು ಲಕ್ಷ ಮೀರಿದೆ.

ತಂದೆಯ ಹಠ, ಕನಸು, ತನ್ನ  ಪ್ರತಿಭೆ ಇಂದು ಪ್ರಿಯಾಳನ್ನು ಭಾರತದ ರಾಷ್ಟ್ರೀಯ ತಂಡದಲ್ಲಿ ಜಾಗ ಕಲ್ಪಿಸಿದೆ. ಮಿಥಾಲಿ ರಾಜ್ ಜೊತೆಗೆ ಹೋಲಿಸುವಂತೆ ಮಾಡಿದೆ. ಸುರೀಂದರ್ ಪೂನಿಯಾ ಮಾಡಿದ ತ್ಯಾಗ, ಪಟ್ಟ ಕಷ್ಟ ಇವತ್ತಿಗೆ ಫಲ ನೀಡುತ್ತಿದೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next