ಹೈದರಾಬಾದ್: ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಮೃತಪಟ್ಟ ಆಘಾತಕಾರಿ ಘಟನೆಯ ಸಾಲಿಗೆ ಮತ್ತೊಂದು ಘಟನೆ ಸೇರಿದೆ. ತೆಲಂಗಾಣದ ಹುಸ್ನಾಬಾದ್ ಪಟ್ಟಣದಲ್ಲಿ ಕ್ರಿಕೆಟ್ ಆಡುವಾಗ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಕರೀಂನಗರ ಜಿಲ್ಲೆಯ ಚಿಗುರುಮಾಮಿಡಿ ಮಂಡಲದ ಸುಂದಗಿರಿ ಗ್ರಾಮದ ಶನಿಗಾರಂ ಆಂಜನೇಯುಲು (37) ಮೃತ ವ್ಯಕ್ತಿ.
ಸ್ಥಳೀಯ ಕೆಎಂಆರ್ ಕ್ರಿಕೆಟ್ ಟೂರ್ನಿಯ ವೇಳೆ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದ ವೇಳೆ ಶನಿಗಾರಂ ಆಂಜನೇಯುಲು ಹೃದಯ ಸ್ತಂಭನವಾಗಿ (cardiac arrest) ಕುಸಿದು ಬಿದ್ದಿದ್ದಾರೆ. ಕೂಡಲೇ ಸಹ ಆಟಗಾರರು ಆಂಜನೇಯುಲು ಅವರಿಗೆ ಸಿಪಿಆರ್ ನೀಡಿ, ಆ್ಯಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಸ್ಪತ್ರೆಗೆ ಅವರನ್ನು ಸಾಗಿಸಿದ್ದಾರೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇತ್ತೀಚೆಗೆ ಕ್ರಿಕೆಟ್ ಆಡುವಾಗ ಹೃದಯಾಘಾತವಾಗಿ ಮೃತಪಡುವ ಘಟನೆ ಹೆಚ್ಚು ನಡೆಯುತ್ತಿದೆ. ಗುಜರಾತ್‌ನ ರಾಜ್‌ಕೋಟ್ ನಿವಾಸಿಯಾಗಿರುವ ಮಯೂರ್ (45), ಗುಜರಾತಿನ ಅಹಮದಾಬಾದ್ ನಲ್ಲಿ ವಸಂತ ರಾಥೋಡ್ (34) ಎಂಬ ಆಟಗಾರ, ರಾಜ್ ಕೋಟ್ ನಿವಾಸಿ ಪ್ರಶಾಂತ್ ಭರೋಲಿಯಾ (27), ಸೂರತ್ ಮೂಲದ ಜಿಗ್ನೇಶ್ ಚೌಹಾಣ್ (31) ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು.