Advertisement

ಕಲಬುರಗಿಯ ಕ್ರಿಕೆಟ್‌ ಕಣ್ಮಣಿ ಶ್ರೇಯಾಂಕಾ

11:41 PM Mar 19, 2024 | Team Udayavani |

ಆರ್‌ಸಿಬಿ ತಂಡ ವನಿತಾ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ಆಗಿ ಅಸಂಖ್ಯ ಆಭಿಮಾನಿ ಗಳ ಹಲವು ವರ್ಷಗಳ ಬಹು ದೊಡ್ಡ ಬಯಕೆ ಯೊಂದನ್ನು ಈಡೇರಿಸಿದೆ. ಕನ್ನಡಿಗರ ಈ ನೆಚ್ಚಿನ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸುವಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಪಾತ್ರ ನಿಜಕ್ಕೂ ಅಸಾಮಾನ್ಯ. ಕಲಬುರಗಿ ಜಿಲ್ಲೆಯ ಹುಡುಗಿ ಶ್ರೇಯಾಂಕಾ ಈಗ ಎಲ್ಲರ ಮನೆಮಾತು. ದೇಶದ ಕ್ರಿಕೆಟ್‌ ವಲಯದಲ್ಲೂ ಈ ಬಾಲೆಯ ಹೆಸರೇ ಕೇಳಿಬರುತ್ತಿದೆ. ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಂತೂ ಈಕೆ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ದೇವತೆಯೇ ಆಗಿದ್ದಾರೆ.

Advertisement

ಜೇವರ್ಗಿಯ ಕೋಳಕೂರಿನ ಬಾಲೆ
ಫೈನಲ್‌ ಪಂದ್ಯದಲ್ಲಿ ಮುನ್ನುಗ್ಗಿ ಹೋಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಹಿಡಿದು ನಿಲ್ಲಿಸುವಲ್ಲಿ ಶ್ರೇಯಾಂಕಾ ಪಾಟೀಲ್‌ ತೋರಿದ ಸಾಧನೆ ಅಸಾಮಾನ್ಯ. ಕೇವಲ 12 ರನ್‌ ನೀಡಿ 4 ವಿಕೆಟ್‌ ಉರುಳಿಸಿದ ಸಾಹಸ ಇವರದ್ದು. ಈ ಬಾಲೆ ಸ್ಪಿನ್‌ ಮೋಡಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತರಗಲೆಯಂತೆ ಉದುರಿತು. ಈ ಪಂದ್ಯದ ಬಳಿಕ ಎಲ್ಲೆಡೆ ಈ ಬಾಲೆಯದ್ದೇ ಹೆಸರು ಮತ್ತು ಬೌಲಿಂಗ್‌ ಮೋಡಿಯದ್ದೇ ಚರ್ಚೆ.

ಶ್ರೇಯಾಂಕಾ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದವರು. ಆದರೆ ಈಗ ಇರುವುದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ವಿದ್ಯಾನಿಕೇತನ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಶ್ರೇಯಾಂಕಾ, ಸದ್ಯ ಬಿಶಪ್‌ ಕಾಟನ್‌ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಜತೆಯಲ್ಲೆ ಟೀಮ್‌ ಇಂಡಿಯಾ ಹಾಗೂ ಆರ್‌ಸಿಬಿ ಮಹಿಳಾ ತಂಡದಲ್ಲಿ ತಮ್ಮ ಅತ್ಯುತ್ತಮ ಆಟದಿಂದ ಮಿಂಚು ಹರಿಸುತ್ತಿದ್ದಾರೆ. ಮೊನ್ನೆಯ ಆರ್‌ಸಿಬಿ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಿ ಎಲ್ಲರಿಗೂ ಇನ್ನಷ್ಟು ಆತ್ಮೀಯರಾಗಿ ಕಂಡರು.

21 ವರ್ಷದ ಬಲಗೈ ಆಫ್ಸ್ಪಿನ್ನರ್‌ ಶ್ರೇಯಾಂಕಾ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. 2 ಏಕದಿನ ಪಂದ್ಯಗಳಿಂದ 4 ವಿಕೆಟ್‌, 6 ಟಿ20 ಪಂದ್ಯಗಳಿಂದ 8 ವಿಕೆಟ್‌ ಉರುಳಿಸಿದ್ದಾರೆ.

ಹಸನ್ಮುಖಿ, ಎಲ್ಲರ ಅಚ್ಚುಮೆಚ್ಚು
ಶ್ರೇಯಾಂಕಾ ಅಂದರೆ ಕುಟುಂಬ, ಬಂಧುವರ್ಗಕ್ಕೆ ಅಚ್ಚುಮೆಚ್ಚು. ತಾನೊಬ್ಬ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಟು ಎನ್ನುವ ಅಹಂ ಆಗಲಿ, ದೊಡ್ಡಸ್ತಿಕೆಯಾಗಲಿ ಇಲ್ಲವೇ ಇಲ್ಲ. ಎಲ್ಲರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಸರಳ ಸ್ವಭಾವದ ಹುಡುಗಿ. ಅವಳಿಂದ ನಮ್ಮ ಕುಟುಂಬದಲ್ಲಿ ಬಹಳಷ್ಟು ಸಂತಸದ ವಾತಾವರಣ ಸೃಷ್ಟಿಯಾಗಿದೆ ಎಂದು ಶ್ರೇಯಾಂಕಾ ಅವರ ಅಜ್ಜಿ ಲಕ್ಷ್ಮಿ ಅಮೃತಗೌಡ ಸಂತಸ ಹಂಚಿಕೊಂಡರು.

Advertisement

ಅಪ್ಪ, ತಮ್ಮ ಕೂಡ ಕ್ರಿಕೆಟಿಗರು
ಶ್ರೇಯಾಂಕಾಳ ತಂದೆ ರಾಕೇಶ ಪಾಟೀಲ್‌ ಹಾಗೂ ಸಹೋದರ ಆದರ್ಶ ಪಾಟೀಲ್‌ ಕೂಡ ಕ್ರಿಕೆಟ್‌ ಆಡುತ್ತಾರೆ. ಆದರ್ಶ ಪಾಟೀಲ್‌ ಅಂಡರ್‌-19 ಕ್ರಿಕೆಟ್‌ನಲ್ಲಿ ಪಾಂಡಿಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಇಡೀ ಕುಟುಂಬ ಕಲ್ಯಾಣ ಮತ್ತು ಕರ್ನಾಟಕದ ಹೆಮ್ಮೆ. ಮುಂದೆ ಆದರ್ಶನೂ ತನ್ನ ಪ್ರತಿಭೆಯಿಂದ ರಾಜ್ಯದ ಹೆಸರು ಮಿಂಚಿಸುತ್ತಾನೆ ಎನ್ನುತ್ತಾರೆ ಅಜ್ಜ (ತಂದೆಯ ತಂದೆ) ಅಮೃತಗೌಡ ಪಾಟೀಲ.

-ಸೂರ್ಯಕಾಂತ್‌ ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next