ಮೆಲ್ಬರ್ನ್: “ಕ್ರಿಕೆಟ್ ನನ್ನ ಜೀವನದ ಒಂದು ಭಾಗವಷ್ಟೇ, ಅದು ಜೀವನಕ್ಕಿಂತ ದೊಡ್ಡದ್ದೇನಲ್ಲ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
“ಕಳೆದ ಎಂಟು ವರ್ಷಗಳಿಂದ ನನ್ನ ಬಗ್ಗೆ ಹಾಗೂ ಕುಟುಂಬದ ಬಗ್ಗೆ ನಾನು ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದೇನೆ.
ವಿರಾಮದ ಸಮಯದಲ್ಲೆಲ್ಲ ಸಾಧ್ಯವಾದಷ್ಟು ಕುಟುಂಬ ಸದಸ್ಯರ ಜತೆಗಿರಲು ಶ್ರಮಿಸುತ್ತೇನೆ. ಈಗಲೂ ರಜೆ ಸಿಕ್ಕಿದಾಗಲೆಲ್ಲ ಅನುಷ್ಕಾ ಹಾಗೂ ಕುಟುಂಬದ ಸದಸ್ಯರ ಜತೆಯೇ ಹೆಚ್ಚು ಕಾಲ ಕಳೆಯುತ್ತೇನೆ. ಕುಟುಂಬದ ಬಗ್ಗೆ ಹೆಚ್ಚು ಗಮನ ನೀಡಬೇಕು ಎನ್ನುವುದು ನನ್ನ ತತ್ವ. ಅದನ್ನು ಪಾಲಿಸುತ್ತಿದ್ದೇನೆ. ಅದಕ್ಕಿಂತ ದೊಡ್ಡದು ಜೀವನದಲ್ಲಿ ಮತ್ತೂಂದಿಲ್ಲ’ ಎಂಬುದಾಗಿ ಕೊಹ್ಲಿ ಹೇಳಿದರು.
“ಜನ ಜೀವನವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿರುತ್ತಾರೆ. ಎಷ್ಟೆಂದರೆ, ಕೆಲವರು ಕ್ರಿಕೆಟ್ ಅನ್ನೇ ಸರ್ವಸ್ವವಾಗಿ ತೆಗೆದುಕೊಂಡಿರುತ್ತಾರೆ. ಬದ್ಧತೆಯಿಂದ ಕೆಲಸ ಮಾಡುತ್ತಿರುತ್ತಾರೆ. ನನ್ನ ಪ್ರಕಾರ ಕ್ರಿಕೆಟ್ ಅನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದಿದ್ದರೆ ಬದ್ಧವಾಗಬೇಕಾದ ಪ್ರಮೇಯವೇ ಬರುವುದಿಲ್ಲ. ಇದರಲ್ಲೆಲ್ಲ ನನಗೆ ನಂಬಿಕೆ ಇಲ್ಲ. ಏನೇ ಮಾಡಿದರೂ ಕೊನೆಗೆ ಬರುವುದು ಕುಟುಂಬ. ಮನೆಗೆ ಬರಲೇಬೇಕು, ಕುಟುಂಬ ಸದಸ್ಯರ ಜತೆಗೆ ಇರಲೇಬೇಕು. ಹೀಗಾಗಿಯೇ ನಾನು ಕುಟುಂಬಕ್ಕೆ ಮೊದಲ ಆದ್ಯತೆ ನೀಡುವುದು. ಆದರೆ ಕ್ರಿಕೆಟಿಗೆ ನನ್ನ ಜೀವನದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದೇನೆ. ಹಾಗಂತ ಅದು ನನ್ನ ಜೀವನದ ಮಹತ್ವದ ವಿಚಾರವಲ್ಲ ಎನ್ನುವುದನ್ನು ನಾನು ನಡೆದು ಬಂದ ಹಾದಿ ನೋಡಿ ಅರ್ಥ ಮಾಡಿಕೊಂಡಿದ್ದೇನೆ’ ಎಂದು ಕೊಹ್ಲಿ ಹೇಳಿದರು.