Advertisement

ಸಾಲ-ಸೌಲಭ್ಯ ರೈತರ ಖಾತೆಗೆ ಜಮಾ

11:14 AM Sep 25, 2018 | |

ಕಲಬುರಗಿ: ಶೋಷಣೆ ತಪ್ಪಿಸಲು ನೂರಕ್ಕೆ ನೂರು ಪ್ರತಿಶತ ಎಲ್ಲ ಸಾಲ ಸೌಲಭ್ಯವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಬಸವರಾಜ ಎಸ್‌. ವಾಲಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹೇಳಿದರು.

Advertisement

ನಗರದಲ್ಲಿ ಸೋಮವಾರ ನಡೆದ ಬ್ಯಾಂಕ್‌ನ 92ನೇ ವಾರ್ಷಿಕ ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ಮಹಾಸಭೆ ನಡಾವಳಿ ಅಂಗೀಕರಿಸಲಾಯಿತು. ಅಲ್ಲದೇ ಪ್ರಸಕ್ತ 2018-19ನೇ ಸಾಲಿನ ಅಂದಾಜು ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. ಅಧ್ಯಕ್ಷ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ವಾಲಿ ಮಾತನಾಡಿ, ರೈತರ ಖಾತೆಗೆ ನೇರವಾಗಿ ಸಾಲ ಸೌಲಭ್ಯ ಜಮಾ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಯಾವೊಬ್ಬ ರೈತರು ಖಾತೆ ಮೂಲಕವೇ ವ್ಯವಹಾರ ಮಾಡಬೇಕು. ಕಾರ್ಯದರ್ಶಿಗಳ ಯಾವುದೇ ಒತ್ತಡಕ್ಕೆ ಒಳಗಾಗದೇ ಖಾತೆಯಿಂದಲೇ ಎಲ್ಲವನ್ನು ನಿಭಾಯಿಸಬೇಕು. ಒಂದು ವೇಳೆ ಕಾರ್ಯದರ್ಶಿ ಸಾಲ ವಿತರಣೆ ಲೋಪ ಎಸಗಿದ್ದರೆ ಸೂಕ್ತ ದಾಖಲಾತಿಗಳೊಂದಿಗೆ ಸಹಕಾರಿ ಸಂಘಗಳ ಉಪನಿಬಂಧಕರಿಗೆ ದೂರು ನೀಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಸದ್ಯಕ್ಕಿಲ್ಲ ಹೊಸ ಸಾಲ: ಕಳೆದ ವರ್ಷದ ಅಂದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ 50 ಸಾವಿರ ರೂ. ಮನ್ನಾದ ಹಣ ಇನ್ನೂ ಬರಬೇಕಾಗಿದೆ. ಅದಲ್ಲದೇ ಪ್ರಸ್ತುತ ಸರ್ಕಾರದಲ್ಲಿ ಘೋಷಣೆಯಾಗಿರುವ 2 ಲಕ್ಷ ರೂ. ಸಾಲ ಮನ್ನಾ ಕುರಿತು ಸ್ಪಷ್ಟ ಹಾಗೂ ಅಂತಿಮ ಆದೇಶ ಬಂದಿಲ್ಲ. ಹೀಗಾಗಿ ಹೊಸ ಬೆಳೆ ಸಾಲ ವಿತರಣೆ ಸದ್ಯಕ್ಕಿಲ್ಲ ಎಂದು ಪ್ರಕಟಿಸಿದರು.

ಕೆಲವು ಸಂಕಷ್ಟಗಳ ನಡುವೆ ಬ್ಯಾಂಕ್‌ ಆಡಳಿತ ನಿಭಾಯಿಸಿ ಕಳೆದ ಮಾರ್ಚ್‌ 31ಕ್ಕೆ ಕೇವಲ 79 ಲಕ್ಷ ಕೋಟಿ ರೂ. ಲಾಭ ತರಲಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ, ಎಸ್‌ಎಂಎಸ್‌ ಸೇವೆ ಮತ್ತಷ್ಟು ಬಲಪಡಿಸಿ ಗ್ರಾಹಕರಿಗೆ ಎನ್‌ಇಎಫ್‌ಟಿ, ಆರ್‌ಟಿಜಿಎಸ್‌ ಸೇವೆ ಕೂಡ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ವಿವರಣೆ ನೀಡಿದರು.
 
ಸಾಲ ವಿತರಣೆ ಗುರಿ: ಕಳೆದ ಸಾಲಿನಲ್ಲಿ ವಿತರಿಸಲಾದ 332 ಕೋಟಿ ರೂ. ಬೆಳೆಸಾಲವನ್ನು ಪ್ರಸಕ್ತ ಸಾಲಿನಲ್ಲಿ ಶೇ. 3ರಷ್ಟು ಹೆಚ್ಚಿಸಲು ಉದ್ದೇಶಿಸಿ 2018-19ನೇ ಸಾಲಿನಲ್ಲಿ 400 ಕೋಟಿ ರೂ. ಹೆಚ್ಚಿಸುವುದು, ಆಡಳಿತದಲ್ಲಿ ದಕ್ಷತೆ ತರುವುದು, ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಹೊಸ ಶಾಖೆ ತೆರೆಯುವುದು ಸೇರಿದಂತೆ ಇತರ ವಿಷಯಗಳು ಚರ್ಚೆಗೆ ಬಂದವು.

ರೈತರ ಪ್ರಶ್ನೆ: ರೈತರ ಬ್ಯಾಂಕ್‌ ಎಂದು ಹೇಳುತ್ತೀರಿ. ಆದರೆ ನಿರ್ದೇಶಕರ ಬೆಂಬಲಿಗರು ಹಾಗೂ ಹಿಂಬಾಲಕರಿಗೆ ಸಾಲ-ಸೌಲಭ್ಯ ನೀಡುವಲ್ಲಿ ಮಣೆ ಹಾಕುತ್ತೀರಿ. ಸಾಲ ಮರುಪಾವತಿ ಮಾಡಿದರೆ ಹೆಚ್ಚಿಗೆ ಸಾಲ ನೀಡುವುದಿಲ್ಲ. ಹೊಂದಾಣಿಕೆ ಮಾಡಿಕೊಂಡವರಿಗೆ ಬೇಗ ಹೆಚ್ಚಿನ ಸಾಲ ನೀಡುತ್ತೀರಿ.  ಅವ್ಯವಹಾರ ಅದರಲ್ಲೂ ಗಂಭೀರ ಅಪರಾಧ ಪ್ರಕರಣ ಎಸಗಿರುವ ಕಾರ್ಯದರ್ಶಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಏಕೆ ಎಂದು ರೈತರು ಖಾರವಾಗಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣವೇ ನಿರ್ಮಾಣಗೊಂಡಿತು. ತದನಂತರ ಆಧ್ಯಕ್ಷರು-ನಿರ್ದೇಶಕರು ಸಮಾಧಾನದಿಂದ ಉತ್ತರ ನೀಡಿದರು.

Advertisement

ಬ್ಯಾಂಕ್‌ ಉಪಾಧ್ಯಕ್ಷ ಶರಣಗೌಡ ಮಾಲಿಪಾಟೀಲ, ನಿರ್ದೇಶಕರಾದ ಕೇದಾರಲಿಂಗಯ್ಯ ಹಿರೇಮಠ, ಸೋಮಶೇಖರ ಗೋನಾಯಕ, ಮಲ್ಲಿಕಾರ್ಜುನ ರೆಡ್ಡಿ ಕೌಳುರ, ಶರಣಬಸಪ್ಪ ಪಾಟೀಲ ಅಷ್ಠಗಿ, ವಿಠ್ಠಲ ಯಾದವ, ಅಶೋಕ ಸಾವಳೇಶ್ವರ, ಶಂಭುರೆಡ್ಡಿ ನರಸಬೋಳ, ಗೌತಮ ವೈಜನಾಥ ಪಾಟೀಲ, ಬಾಪುಗೌಡ ಡಿ. ಪಾಟೀಲ, ಬ್ಯಾಂಕ್‌ ಸಿಇಒ ಗೋಪಾಲ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next