Advertisement

ಡೆಬಿಟ್‌ ಕಾರ್ಡ್‌ಗೆ ಕ್ರೆಡಿಟ್‌ ಸೌಲಭ್ಯ 

07:18 AM Mar 15, 2019 | |

ಶಾಪಿಂಗ್‌ ಕ್ರೇಝ್ ಅನ್ನು ಹೆಚ್ಚಿಸಿರುವ ಆನ್‌ಲೈನ್‌ ಶಾಪಿಂಗ್‌ ನಲ್ಲಿ ಈಗ ಇಎಂಐ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದರ ಲಾಭ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.

Advertisement

ಎಟಿಎಂ ಕಾರ್ಡ್‌ ಇದ್ದರೆ ಸಾಕು ಇಎಂಐ ಲಾಭ ಪಡೆಯಬಹುದು.

ಶಾಪಿಂಗ್‌ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ದೊಡ್ಡ ಪರದೆಯ ಟಿ.ವಿ., ದುಬಾರಿ ಬೆಲೆಯ ಮೊಬೈಲ್‌, ಮನೆಯ ಅಂದ ಹೆಚ್ಚಿಸುವ ಇಂಟೀರಿಯರ್‌, ಸೌಂದರ್ಯ ವೃದ್ಧಿಸುವ ವಸ್ತುಗಳನ್ನು, ಹೀಗೆ ಇನ್ನೇನೇನೋ.. ಖರೀದಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ವಸ್ತುಗಳ ಬೆಲೆ ಗಮನಿಸಿದಾಗ, ಅವುಗಳು ನಮ್ಮ ಕೈಗೆಟಕುವಂತಹುದಲ್ಲ ಎಂಬ ನಿರ್ಧಾರಕ್ಕೆ ಅನೇಕರು ಬರುತ್ತಾರೆ. ಆದರೆ ಇದೀಗ ಶಾಪಿಂಗ್‌ ವೇಳೆ ಇಎಂಐ ಸೌಲಭ್ಯ ಪಡೆಯಲು ಕ್ರೆಡಿಟ್‌ ಕಾರ್ಡ್‌ ಹೊಂದಿರಲೇ ಬೇಕು ಎಂದೇನೂ ಇಲ್ಲ. ಎಟಿಎಂ ಕಾರ್ಡ್‌ (ಡೆಬಿಟ್‌ ಕಾರ್ಡ್‌) ಇದ್ದರೂ ಇಎಂಐ ಲಾಭ ಪಡೆಯಬಹುದು. ಶಾಪಿಂಗ್‌ ವೇಳೆ ಇಎಂಐ ಸೌಲಭ್ಯ ನೀಡಲು ವಿವಿಧ ಬ್ಯಾಂಕ್‌ಗಳು ಮುಂದೆ ಬರುತ್ತಿವೆ.  ಇಎಂಐ ಸೌಲಭ್ಯಕ್ಕೆಂದು ಎಲೆಕ್ಟ್ರಾನಿಕ್‌ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಸಹಿತ ಇನ್ನಿತರ ಬ್ರ್ಯಾಂಡ್‌ಗಳು ಈಗಾಗಲೇ ವಿವಿಧ ಬ್ಯಾಂಕ್‌ಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನಿಗದಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಮೊಬೈಲ್‌, ಬಟ್ಟೆ ಖರೀದಿಗೆ ಹೆಚ್ಚಿನ ಉಡುಗೊರೆಗಳಿದ್ದು, ಶೇ. 0 ಬಡ್ಡಿದರದ ಆಫರ್‌ಗಳನ್ನೂ ನೀಡಲಾಗುತ್ತಿದೆ. ಉಳಿದಂತೆ ಬೇರೆ ಬೇರೆ ಬ್ಯಾಂಕ್‌ ಗಳು ಖರೀದಿಗೆ ತಕ್ಕಂತೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಇಎಂಐ ಸೌಲಭ್ಯ ನೀಡಲು ಮುಂದೆ ಬರುತ್ತಿವೆ.

ಇಎಂಐ ಲಾಭಗಳೇನು?
ಶಾಪಿಂಗ್‌ ವೇಳೆ ಕೈಯಲ್ಲಿ ನಗದು ಹಣ ಇದ್ದರೂ, ಇಎಂಇ ಸೌಲಭ್ಯಕ್ಕೆ ಮೊರೆ ಹೋಗುವ ಅನೇಕ ಮಂದಿ ಇದ್ದಾರೆ. ಏಕೆಂದರೆ ಇಎಂಇಯಿಂದ ಅನೇಕ ಲಾಭಗಳಿಸಬಹುದು. ಇದರಿಂದಾಗಿ ಪ್ರತೀ ತಿಂಗಳು ನೀಡಬೇಕಾದ ಸಾಲದ ಕಂತಿನ ಬಗ್ಗೆ ಸಾಲಗಾರನಿಗೆ ಅರಿವು ಇರುತ್ತದೆ. ಅಲ್ಲದೆ, ವೈಯಕ್ತಿಕವಾಗಿ ಬಜೆಟ್‌ ಕ್ರೋಡೀಕರಣಕ್ಕೂ ಈ ವ್ಯವಸ್ಥೆ ಸಹಕಾರಿಯಾಗುತ್ತದೆ.

ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ನೋಡಿದಾಗ ಖರೀದಿಸಬೇಕು ಎಂಬ ಆಸೆ ಆಗುತ್ತದೆ. ಆದರೆ, ಹಣದ ಮೌಲ್ಯ ತಿಳಿದರೆ ನಮ್ಮ ಬಜೆಟ್‌ಗಿಂತಲೂ ಬೆಲೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ವೇಳೆ ಇಎಂಐ ಸೌಲಭ್ಯವು ಸಹಕಾರಿಯಾಗುತ್ತದೆ. ಬೆಲೆಬಾಳುವ ಸಾವಿರಾರು ರೂಪಾಯಿ ವಸ್ತುಗಳನ್ನು ಸುಲಭ ಕಂತಿನ ಮುಖೇನ ಇಎಂಐ ಮೂಲಕ ಖರೀದಿ ಮಾಡಬಹುದು.

Advertisement

ಇಎಂಐ ಪಡೆಯುವುದು ಹೇಗೆ?
ಕೆಲವೊಂದು ಅಂಗಡಿಗಳಲ್ಲಿ ಖರೀದಿ ಮಾಡುವ ವಸ್ತುಗಳಿಗೆ ಈ ಸೌಲಭ್ಯ ಇದಕ್ಕಾಗಿ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಡೆಬಿಟ್‌ ಕಾರ್ಡ್‌ ಇರಬೇಕು. ದಾಖಲೆಗಳು ಪರಿಶೀಲನೆ ಬಳಿಕ, ಸರಿ ಇದ್ದರೆ, ಖರೀದಿ ಮಾಡುವ ವಸ್ತುವಿನ ದರಕ್ಕೆ ಅನುಗುಣವಾಗಿ ಪ್ರತೀ ತಿಂಗಳು ಎಷ್ಟು ಹಣ ಬ್ಯಾಂಕ್‌ ಖಾತೆಯಿಂದ ಕಡಿತಗೊಳ್ಳುತ್ತದೆ ಎಂದು ನಿಗದಿಯಾಗುತ್ತದೆ. ಸಾಮಾನ್ಯವಾಗಿ 8, 6,12 ತಿಂಗಳುಗಳ ಇಎಂಐ ಸೌಲಭ್ಯ ಇರುತ್ತದೆ. ಅದಕ್ಕೆ ತಕ್ಕಂತೆ ಡೌನ್‌ಪೇಮೆಂಟ್‌ ಮಾಡಬೇಕು. ಬ್ಯಾಂಕ್‌ಗಳು ಶೇಕಡಾವಾರು ಬಡ್ಡಿದರ ವಿಧಿಸುತ್ತಾರೆ. ಕೆಲವೊಂದು ಬ್ಯಾಂಕ್‌ ಶೇ.0 ಬಡ್ಡಿ ದರವನ್ನೂ ನಿಗದಿ ಮಾಡಿರುತ್ತದೆ.

ಡೆಬಿಟ್‌ ಇಎಂಐ ಯಾರಿಗೆ?
ಡೆಬಿಟ್‌ ಇಎಂಐ ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲಿ, ಎಲ್ಲರಿಗೂ ಬಳಕೆಗೆ ಸಿಗದು. ನಿರ್ದಿಷ್ಟ ಅಂತರ್ಜಾಲ ತಾಣಗಳಲ್ಲಿ ಇದಕ್ಕೆ ಅವಕಾಶವಿದೆ. ಕೆಲವು ಶಾಪ್‌ಗ್ಳಲ್ಲೂ ಇರಬಹುದು. ಆದರೆ ಬ್ಯಾಂಕ್‌ಗಳು ಎಲ್ಲ ಕಾರ್ಡ್‌ದಾರರಿಗೆ ಡೆಬಿಟ್‌ ಇಎಂಐ ಸೌಲಭ್ಯ ಕೊಡುವುದಿಲ್ಲ. ಗ್ರಾಹಕರ ಹಣಕಾಸು ನಿರ್ವಹಣೆ, ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಗಮನಿಸಿ ನಿರ್ದಿಷ್ಟ ಮೊತ್ತ (ಉದಾ: 20 ಸಾವಿರ ಹೀಗೆ)ಕ್ಕೆ ಇಎಂಐ ಸೌಲಭ್ಯ ನೀಡುತ್ತದೆ. ಯಾರಿಗೆ ಇಎಂಐ ಸೌಲಭ್ಯವಿದೆ ಎಂಬುದನ್ನು ಗ್ರಾಹಕರು ಖುದ್ದು ಬ್ಯಾಂಕ್‌ಗೆ ಕೇಳಿ ತಿಳಿದುಕೊಳ್ಳಬಹುದು. ಕೆಲವು ಖಾಸಗಿ ಬ್ಯಾಂಕ್‌ ಗಳಲ್ಲಿ ಮೆಸೇಜ್‌ ಮಾಡಿ ತಿಳಿದುಕೊಳ್ಳುವ ಸೌಲಭ್ಯವಿದೆ. 

ಆನ್‌ಲೈನ್‌ ವಹಿವಾಟು ಹೆಚ್ಚಳ
ಫ್ಲಿಪ್‌ಕಾರ್ಟ್‌, ಅಮೇಜಾನ್‌, ಸ್ನಾಪ್‌ ಡೀಲ್‌, ಮಿಂತ್ರ ಸೇರಿದಂತೆ ಇನ್ನಿತರ ಶಾಪಿಂಗ್‌ ಅಂತರ್ಜಾಲ ತಾಣಗಳಲ್ಲಿ ಖರೀದಿ ಮಾಡುವ ಅನೇಕ ವಸ್ತುಗಳಿಗೆ ಇಎಂಐ ಸೌಲಭ್ಯ ನೀಡಲಾಗುತ್ತದೆ. ನಿಮಗೆ ಇಷ್ಟವಾದ ಜೊತೆಗೆ ನಿಮ್ಮ ಖಾತೆ ಇರುವ ಎಕೌಂಟ್‌ ಮುಖೇನ ಇಎಂಐ ಸೌಲಭ್ಯ ಪಡೆದುಕೊಳ್ಳಬಹುದು.

ಮಧ್ಯಮ ವರ್ಗಕ್ಕೆ ಸಹಕಾರಿ
ಎಲೆಕ್ಟ್ರಾನಿಕ್‌, ಫರ್ನಿಚರ್‌ ಸೇರಿದಂತೆ ಬಟ್ಟೆ ಖರೀದಿ ಮಾಡುವವರು ಇಎಂಇ ಸೌಲಭ್ಯ ಪಡೆಯಲು ಇಷ್ಟಪಡುತ್ತಾರೆ. ಮಧ್ಯಮ ವರ್ಗದ ಕುಟುಂಬಗಳು ದುಬಾರಿ ವಸ್ತುಗಳ ಖರೀದಿಗೆ ಇಎಂಇ ಸೌಲಭ್ಯ ಉಪಯೋಗಿಯಾಗಿದೆ.
 – ಅಣ್ಣಪ್ಪ ಪೂಜಾರಿ,
   ಉದ್ಯಮಿ

ಬಹು ಉಪಯೋಗ
ಇತ್ತೀಚಿನ ದಿನಗಳಲ್ಲಿ ಶಾಪಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಕೆಲವೊಬ್ಬರು ಮಧ್ಯಮ ವರ್ಗದ ಮಂದಿಯ ಬಳಿ ಅದಕ್ಕೆ ತಕ್ಕಂತೆ ಹಣದ ಕೊರತೆ ಇರುತ್ತದೆ. ಈ ವೇಳೆ ಇಎಂಇ ಸೌಲಭ್ಯಉಪಯೋಗವಾಗುತ್ತದೆ. 
– ಉಮೇಶ್‌, ಉದ್ಯೋಗಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next