Advertisement

ಡಿಜಿಟಲ್‌ ಪಾವತಿಗೆ ಇಂಬು: UPIಗೆ ಕ್ರೆಡಿಟ್‌ ಕಾರ್ಡ್‌ ಲಿಂಕ್‌ ಸೌಲಭ್ಯದ ಬಗ್ಗೆ ತಜ್ಞರ ಅಭಿಮತ

12:00 AM Jun 09, 2022 | Team Udayavani |

ಹೊಸದಿಲ್ಲಿ: ರುಪೇ ವತಿಯಿಂದ ನೀಡಲಾಗಿರುವ ಕ್ರೆಡಿಟ್‌ ಕಾರ್ಡ್‌ಗಳನ್ನು ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ವ್ಯವಸ್ಥೆಗೆ ಲಿಂಕ್‌ ಮಾಡುವ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿರುವು ದರಿಂದ ನಗದು ರಹಿತ ವ್ಯವಹಾರಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಕೊಟ್ಟಂತಾಗಿ, ಕ್ಯಾಶ್‌ಲೆಸ್‌ ಪೇಮೆಂಟ್‌ನ ಪ್ರಮಾಣ ದೇಶದಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಪೇಮೆಂಟ್‌ ಆ್ಯಪ್‌ಗ್ಳಿಗೆ ಲಿಂಕ್‌: ಆರ್‌ಬಿಐನ ಈ ಆದೇಶದ ಪ್ರಕಾರ, ರುಪೇ ಕ್ರೆಡಿಟ್‌ ಕಾರ್ಡ್‌ಗಳನ್ನು ಅತೀ ಹೆಚ್ಚು ಜನರು ಬಳಸುವ ಯುಪಿಐ ಮೊಬೈಲ್‌ ಅಪ್ಲಿಕೇಷನ್‌ಗಳಾದ ಗೂಗಲ್‌ ಪೇ, ಪೇಟಿಎಂ, ಫೋನ್‌ ಪೇಯಂಥ ಮತ್ತಿತರ ಆ್ಯಪ್‌ ಗಳಿಗೆ, ಈ ಹಿಂದೆ ಡೆಬಿಟ್‌ ಕಾರ್ಡ್‌ಗಳನ್ನು ಹಾಗೂ ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಿಕೊಂಡ ಹಾಗೆಯೇ ಲಿಂಕ್‌ ಮಾಡಿ ಕೊಳ್ಳಬಹುದು. ಅಧಿಕೃತವಾಗಿ ಲಿಂಕ್‌ ಆದ ಅನಂತರ, ಯುಪಿಐ ಮೂಲಕ ಯಾವುದೇ ಕ್ಯು.ಆರ್‌. ಕೋಡ್‌ಗಳನ್ನು ಸ್ಕ್ಯಾನ್‌ ಮಾಡಿ, ಪೇಮೆಂಟ್‌ ಮಾಡಲು ಅವಕಾಶವಿರುತ್ತದೆ. ಹಣ ವರ್ಗಾವಣೆಗೂ ಅವಕಾಶ ವಿರಲಿದೆ ಎಂಬುದು ತಜ್ಞರ ಅಭಿಮತ.

ದಿನಕ್ಕೆ 26 ಕೋಟಿ ಮಂದಿ ವ್ಯವಹಾರ!: ಸದ್ಯದ ಮಾಹಿತಿ ಪ್ರಕಾರ ಯುಪಿಐ ಮೂಲಕ ದಿನಕ್ಕೆ ಸರಾಸರಿ 26 ಕೋಟಿ ಮಂದಿ ಹಣ ಪಾವತಿ ಮಾಡುತ್ತಿ ದ್ದಾರೆ. 5 ಕೋಟಿ ವ್ಯಾಪಾರಿಗಳು ಇದರಿಂದಲೇ ಹಣ ಸ್ವೀಕರಿಸುತ್ತಿದ್ದಾರೆ. 2022 ಮೇ ತಿಂಗಳೊಂದರಲ್ಲಿ 594 ಕೋಟಿ ಹಣಕಾಸು ವ್ಯವಹಾರಗಳು ಯುಪಿಐ ಮೂಲಕ ಆಗಿವೆ. ಕ್ರೆಡಿಟ್‌ ಕಾರ್ಡ್‌ಗಳನ್ನೂ ಯುಪಿಐಗೆ ಜೋಡಿಸಿದರೆ ಕ್ಯಾಶ್‌ಲೆಸ್‌ ವ್ಯವಹಾರ ಗಳಲ್ಲಿ ಗಣನೀಯ ಪ್ರಗತಿಯಾಗುತ್ತದೆ.

ಶುಲ್ಕವೆಷ್ಟು?: ಡೆಬಿಟ್‌ ಕಾರ್ಡ್‌ ಮೂಲಕ ಯಾವುದೇ ಮಾರ್ಗಗಳಲ್ಲಿ (ಯುಪಿಐ, ಮೊಬೈಲ್‌, ನೆಟ್‌ಬ್ಯಾಂಕಿಂಗ್‌ ಇನ್ನಿತರ) ಹಣ ಸ್ವೀಕರಿಸಿದರೆ, ಅದಕ್ಕೆ ಇಂತಿಷ್ಟು ಅಂತ ಸೇವಾಶುಲ್ಕವನ್ನು ವ್ಯಾಪಾರಿ ಗಳು ತಮ್ಮತಮ್ಮ ಬ್ಯಾಂಕ್‌ಗಳಿಗೆ ಪಾವತಿಸಬೇಕು. ಯುಪಿಐನಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಸ್ವೀಕರಿಸಿದರೆ ಇದಕ್ಕೆಷ್ಟು ಶುಲ್ಕ ಎನ್ನುವುದನ್ನು ಆರ್‌ಬಿಐ ನಿರ್ಧರಿಸಿಲ್ಲ.

ಶಾರ್ಟ್‌ ಟರ್ಮ್ ಕ್ರೆಡಿಟ್‌ಗೂ ಅನ್ವಯ: ಯುಪಿಐ ಹಾಗೂ ಕ್ರೆಡಿಟ್‌ ಕಾರ್ಡ್‌ ಲಿಂಕ್‌ ವ್ಯವಸ್ಥೆ, ಶಾರ್ಟ್‌ ಟರ್ಮ್ ಕ್ರೆಡಿಟ್‌ ಕಾರ್ಡ್‌ಗಳಿಗೂ ಅನ್ವಯವಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಇದರಿಂದ ಡಿಜಿಟಲ್‌ ಪೇಮೆಂಟ್‌ ವ್ಯಾಪ್ತಿ ಮತ್ತಷ್ಟು ಹಿರಿದಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Advertisement

ತೈಲ ಬೆಲೆ ಇಳಿಕೆಗೆ ಕಿವಿಮಾತು: ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿತ್ತು. ಅದೇ ರೀತಿ ರಾಜ್ಯ ಸರಕಾರಗಳೂ ಕೂಡ ಇಳಿಕೆ ಮಾಡಬೇಕು ಎಂದು ಆರ್‌ಬಿಐ ಸಲಹೆ ಮಾಡಿದೆ. ಇದರಿಂದಾಗಿ ಹಣದುಬ್ಬರ ಪ್ರಮಾಣ ಇಳಿಕೆಯಾಗಲಿದೆ ಎಂದು ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಮೇ 21ರಂದು ಕೇಂದ್ರ ಸರಕಾರ ಪ್ರತೀ ಲೀಟರ್‌ ಪೆಟ್ರೋಲ್‌ ಮೇಲೆ 8 ರೂ., ಪ್ರತೀ ಲೀಟರ್‌ ಡೀಸೆಲ್‌ ಮೇಲೆ 6 ರೂ. ತೆರಿಗೆ ಇಳಿಕೆ ಮಾಡಿತ್ತು. ಆದರೆ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ತಮ್ಮ ಪಾಲಿನ ತೆರಿಗೆ ಇಳಿಸಲು ತಕರಾರು ಮಾಡಿದ್ದವು. ಎಪ್ರಿಲ್‌ನಲ್ಲಿ ಪ್ರಧಾನಿ ಮೋದಿಯವರೂ ಈ ಬಗ್ಗೆ ರಾಜ್ಯಗಳಿಗೆ ಮನವಿ ಮಾಡಿದ್ದರು.

ರೆಪೋ ಏರಿಕೆ: ಮಾರುಕಟ್ಟೆ ಇಳಿಕೆ
ಭಾರತೀಯ ರಿಸರ್ವ್‌ ಬ್ಯಾಂಕ್‌, ಬ್ಯಾಂಕ್‌ಗಳ ರೆಪೋ ದರವನ್ನು 50 ಬೇಸಿಸ್‌ ಪಾಯಿಂಟ್‌ಗಳನ್ನು ಏರಿಕೆ ಮಾಡಿದ ಪರಿಣಾಮವಾಗಿ, ಬುಧವಾರದ ಷೇರು ವ್ಯವಹಾರ 215 ಅಂಕಗಳಷ್ಟು ಕುಸಿತ ಕಂಡಿತು. ದಿನದ ಒಟ್ಟಾರೆ ವ್ಯವಹಾರದಲ್ಲಿ 741 ಅಂಕಗಳಷ್ಟು ಕುಸಿದ ಬಿಎಸ್‌ಇ ಸೆನ್ಸೆಕ್ಸ್‌ ದಿನಾಂತ್ಯದ ಹೊತ್ತಿಗೆ 54,892.49 ಅಂಕಗಳಿಗೆ ಬಂದು ಮುಟ್ಟಿತು. ಅತ್ತ, ನಿಫ್ಟಿಯು 60.10 ಅಂಕಗಳಷ್ಟು ಇಳಿಕೆಯಾಗಿ 16,356.25 ಅಂಕಗಳಿಗೆ ಬಂದು ತಲುಪಿತು. ಸೆನ್ಸೆಕ್ಸ್‌ ಅಡಿಯಲ್ಲಿ ಭಾರ್ತಿ ಏರ್‌ಟೆಲ್‌, ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌), ಏಷ್ಯನ್‌ ಪೇಂಟ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಇಂಡಸ್‌ಲ್ಯಾಂಡ್‌ ಬ್ಯಾಂಕ್‌ಗಳ ಷೇರುಗಳು ಗಣನೀಯವಾಗಿ ಇಳಿಕೆಯಾದವು. ಅತ್ತ, ಟಾಟಾ ಸ್ಟೀಲ್‌, ಡಾ| ರೆಡ್ಡೀಸ್‌ ಲ್ಯಾಬೊರೇಟರೀಸ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ), ಟೈಟನ್‌ ಕಂಪನಿ, ಬಜಾಜ್‌ ಫೈನಾನ್ಸ್‌, ಮಾರುತಿ ಸುಝುಕಿ ಷೇರುಗಳು ಹೆಚ್ಚು ಏರಿಕೆ ಕಂಡವು.

Advertisement

Udayavani is now on Telegram. Click here to join our channel and stay updated with the latest news.

Next