Advertisement

ಕ್ರೆಡಿಟ್‌ ಕಾರ್ಡ್‌ ಸಾಲ ದುಬಾರಿ

10:21 AM Mar 17, 2020 | mahesh |

ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಆರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್‌ ಕಾರ್ಡ್‌ ತೆಗೆದುಕೊಳ್ಳುತ್ತೀರಿ. ಅಂಥ ಕಾರ್ಡ್‌ಗಳನ್ನು ಸ್ವೀಕರಿಸುವಂಥ ಅಂಗಡಿಗಳಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ, ನಿಮ್ಮ ಕಾರ್ಡನ್ನು ಕೌಂಟರಿನಲ್ಲಿ ಕೊಡುತ್ತೀರಿ. ಕೌಂಟರಿನಲ್ಲಿ ಕುಳಿತ ವ್ಯಕ್ತಿ ನಿಮ್ಮ ಕಾರ್ಡನ್ನು ಒಂದು ಮೆಶೀನಿನಲ್ಲಿ ಉಜ್ಜಿ, ಬ್ಯಾಂಕಿಂಗ್‌ ವ್ಯವಸ್ಥೆಯ ಕಂಪ್ಯೂಟರಿಗೆ ಡಯಲ್‌ ಮಾಡುತ್ತಾನೆ. ಆ ಕಂಪ್ಯೂಟರ್‌ ನೀವು ಕೊಡಬೇಕಾದ ದುಡ್ಡನ್ನು ಆ ಅಂಗಡಿಯವರ ಖಾತೆಗೆ ನೀಡಿ ಅಷ್ಟು ದುಡ್ಡನ್ನು ಬ್ಯಾಂಕು ನಿಮಗೆ ಕೊಟ್ಟ ಸಾಲ ಎಂದು ನಿಮ್ಮ ಖಾತೆಯಲ್ಲಿ ನಮೂದಿಸುತ್ತದೆ.

Advertisement

ಅಷ್ಟು ದುಡ್ಡನ್ನು ನೀವು ಅದರ ಮಾಸಿಕ ಬಿಲ್‌ ದಿನಾಂಕದಿಂದ ಸುಮಾರು 20 ದಿನಗಳಲ್ಲಿ (due
date) ಕೊಡಬೇಕಾಗುತ್ತದೆ. ಅಂದರೆ, ಯಾವುದೇ ತಿಂಗಳಿನುದ್ದಕ್ಕೂ ಮಾಡಿದ ಖರ್ಚಿನ ಮರುಪಾವತಿಗೆ ಒಟ್ಟು 20- 50 ದಿನಗಳವರೆಗೆ ಫ್ರೀ ಸಮಯ ಸಿಕ್ಕಂತಾಯಿತು. ಆ ಅವಧಿಯೊಳಗೆ ಪಾವತಿ ಮಾಡಿದಲ್ಲಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುವುದಿಲ್ಲ. ಬದಲಿಗೆ ಅಂಗಡಿಯವನಿಂದ ಈ ಸೇವೆಗಾಗಿ ಸ್ವಲ್ಪ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆ ಫ್ರೀ ಅವಧಿಯನ್ನು ಮೀರಿದರೆ ಮಾತ್ರ ಅದಕ್ಕೆ ಹೇರಳವಾದ ತಡಪಾವತಿಯ ಶುಲ್ಕ(ಲೇಟ್‌ ಫೀ), ಬಡ್ಡಿದರ, ತೆರಿಗೆಗಳು ಇತ್ಯಾದಿ ಚಾರ್ಜುಗಳು ಬೀಳುತ್ತವೆ.

ಈ ಕೆಳಗಿನವೇ ಕ್ರೆಡಿಟ್‌ ಕಾರ್ಡ್‌ ಮೇಲೆ ಬೀಳುವ ಹೆಚ್ಚುವರಿ ಶುಲ್ಕಗಳು:
1. ಲೇಟ್‌ ಫೀಸ್‌- ಇದು ಡ್ನೂ ದಿನಾಂಕದಂದು ಕನಿಷ್ಠ ಮೊತ್ತವನ್ನಾದರೂ ಪಾವತಿಸದಿದ್ದರೆ ಬೀಳುವ ಶುಲ್ಕ. ಇದು ಪ್ರತಿ ಸಲಕ್ಕೆ ಕನಿಷ್ಠ 400- 600 ರೂ.ಗಳಷ್ಟು ಆದೀತು.

2. ಬಡ್ಡಿ – ನಿಗದಿತ ದಿನಾಂಕದೊಳಗೆ ಪಾವತಿಸದೆ ಉಳಿದ ಮೊತ್ತದ ಮೇಲೆ ತಿಂಗಳೊಂದರ 3- 3.5%ದಂತೆ 36-42% ವಾರ್ಷಿಕದ ಅಂದಾಜಿಗೆ ಬಡ್ಡಿ ತಗುಲುತ್ತದೆ. ಈ ತೆರನಾದ ಬಡ್ಡಿಯು ಕ್ರೆಡಿಟ್‌ ಕಾರ್ಡುಗಳನ್ನು ಅತ್ಯಂತ ದುಬಾರಿ ಸಾಲವನ್ನಾಗಿಸಿದೆ. ಎಟಿಎಂ ಮೂಲಕ ನಗದು ದುಡ್ಡನ್ನು ಸಾಲ ಪಡೆದುಕೊಂಡಿದ್ದಲ್ಲಿ ಅದಕ್ಕೆ ಇನ್ನೂ ಸುಮಾರು 6% ನಷ್ಟು ಹೆಚ್ಚುವರಿ ಬಡ್ಡಿ ತಗುಲುತ್ತದೆ.

3. ಜಿಎಸ್‌ಟಿ – ಸರ್ವೀಸ್‌ ಚಾರ್ಜ್‌ ಮತ್ತು ಸರಕಾರದ ನಿಯಮದ ಪ್ರಕಾರ ಅದರ ಮೇಲಿನ ಜಿಎಸ್‌ಟಿ.

Advertisement

4. ಸರ್ಚಾರ್ಜ್‌ – ರೈಲ್ವೇ, ಪೆಟ್ರೋಲ್‌ ಬಂಕು ಮತ್ತಿತರ ಕೆಲವೆಡೆಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಉಪಯೋಗದ ಮೇಲೆ ಸುಮಾರು 2.5% ನಷ್ಟು ಸರ್ಚಾರ್ಜ್‌ ವಿಧಿಸಲಾಗುತ್ತದೆ.

ಕ್ರೆಡಿಟ್‌ ಕಾರ್ಡ್‌ ಮೇಲೆ ಬಡ್ಡಿ ಹೇಗೆ ?
ಒಂದು ತಿಂಗಳ ಅವಧಿಯ ಒಂದು ಮಂಥಿಲೀ ಕ್ರೆಡಿಟ್‌ ಸೈಕಲ್‌ ಅಥವಾ ಮಾಸಿಕ ಸಾಲದ ಅವಧಿವನ್ನು ತೆಗೆದುಕೊಳ್ಳಿ. ಉದಾ: ಪ್ರತಿ ತಿಂಗಳ 16ರಿಂದ ಮುಂದಿನ ತಿಂಗಳ 15ರವರೆಗೆ ಎಂದಿಟ್ಟುಕೊಳ್ಳಿ. ಈ ಮಾಸಿಕ ಅವಧಿಯ ಎಲ್ಲಾ ವ್ಯವಹಾರಗಳನ್ನೂ 15ನೆಯ ದಿನಾಂಕದ ಸ್ಟೇಟ್ಮೆಂಟಿನಲ್ಲಿ ತುಂಬುತ್ತಾರೆ. ಈ ಸ್ಟೇಟ್ಮೆಂಟ್‌ ಪ್ರಕಾರ ಆಗುವ ಬಾಕಿ ಮೊತ್ತವನ್ನು (ಡ್ನೂ ಅಮೌಂಟ್‌) ಮುಂದಿನ ತಿಂಗಳ 3ನೇ ತಾರೀಕಿನ ಒಳಗಾಗಿ ಪಾವತಿ ಮಾಡತಕ್ಕದ್ದು. ಇದು ಪಾವತಿಯ ನಿಯಮ. ಅದರೊಳಗೆ ಎಲ್ಲಾ ಮೊತ್ತ ಪಾವತಿ ಮಾಡಿದರೆ ಯಾವುದೇ ಬಡ್ಡಿಯೂ ಇರುವುದಿಲ್ಲ. ಅಂದರೆ, ನಿಮಗೆ ಸುಮಾರು 18- 48 ದಿನಗಳ ಬಡ್ಡಿರಹಿತ ಸಾಲ ಸೌಲಭ್ಯ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ದೊರಕುತ್ತದೆ. ಇದೇ ರೀತಿಯ ಸಾಲದ ಚಕ್ರ ಪ್ರತಿ ಮಾಸವೂ ಮುಂದುವರಿಯುತ್ತಾ ಹೋಗುತ್ತದೆ.

ಕನಿಷ್ಠ ಬಾಕಿ ಮೊತ್ತ
ಪ್ರತಿ ಮಾಸದ ಕ್ರೆಡಿಟ್‌ ಅವಧಿಯಲ್ಲೂ ಮಾಡಿಕೊಂಡ ಸಾಲ “ಒಟ್ಟು ಬಾಕಿ’ ಎಂದಾದರೆ ಅದರ ಸುಮಾರು 5% ಮೊತ್ತವನ್ನು “ಮಿನಿಮಮ್‌ ಬಾಕಿ’ ಅಥವಾ “ಕನಿಷ್ಠ ಬಾಕಿ’ ಎಂದು ಸ್ಟೇಟೆ¾ಂಟಿನಲ್ಲಿ ಘೋಷಿಸಿ ಬಿಡುತ್ತಾರೆ. ಉದಾಹರಣೆಗೆ, ಮೇಲೆ ತಿಳಿಸಿದ ಅವಧಿಯಲ್ಲಿ ಒಟ್ಟು ಖರೀದಿ 2,000 ರೂ. ಇದ್ದರೆ ಮಿನಿಮಮ್‌ ಡ್ನೂ 100 ರೂ. ಆಗಿರುತ್ತದೆ. ಅಂದರೆ ಡ್ನೂ ಡೇಟ್‌ ಒಳಗೆ ಕನಿಷ್ಠ 100 ರೂ. ಆದರೂ ಕಟ್ಟಲೇಬೇಕು. ಸಂಪೂರ್ಣ ಮೊತ್ತವಾದ 2000 ರೂ. ಕಟ್ಟಿದರೆ ಉತ್ತಮವೇ, ಆದರೆ ಬ್ಯಾಂಕ್‌ ಪ್ರಕಾರ ಅದು ಕಡ್ಡಾಯವಲ್ಲ. ಬ್ಯಾಂಕ್‌ ಪ್ರಕಾರ, ಕಡ್ಡಾಯ ಪಾವತಿ ಇರುವುದು ಕನಿಷ್ಠ ಮೊತ್ತದ ಮೇಲೆ ಮಾತ್ರವೇ.

ನಾವೆಲ್ಲಾ ಇಲ್ಲೇ ಎಡವುವುದು. ಬ್ಯಾಂಕಿನವರು ಕನಿಷ್ಠ ಮೊತ್ತ ಕಟ್ಟಿದರೆ ಸಾಕು ಅನ್ನುವುದು ನಿಮ್ಮ ಮೇಲೆ “ಲೇಟ್‌ ಫೀಸ್‌’ ಹಾಕದೆ ಇರುವ ಸೌಲಭ್ಯಕ್ಕೆ ಮಾತ್ರ. ಕಟ್ಟದೆ ಉಳಿಸಿದ ಬಾಕಿಯ ಮೇಲೆ ಬಡ್ಡಿ ಖಂಡಿತವಾಗಿ ಬೀಳುತ್ತದೆ. ಮಿನಿಮಮ್‌ ಡ್ನೂ ಕಟ್ಟಿದರೆ ಬಾಕಿ ಮೊತ್ತದ ಮೇಲೆ ಬಡ್ಡಿಯೂ ತಗುಲುವುದಿಲ್ಲ ಎಂಬ ಮಿಥ್ಯಾಸ್ವರ್ಗದಲ್ಲಿ ಹಲವು ಕಾರ್ಡ್‌ದಾರರು ಇರುತ್ತಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮಿನಿಮಮ್‌ ಮೊತ್ತ ಕಟ್ಟಿದರೆ ಉಳಿದ ಮೊತ್ತದ ಮೇಲೆ ಬಡ್ಡಿ ತಗುಲುತ್ತದೆ. ಲೇಟ್‌ ಫೀಸ್‌ ಮಾತ್ರ ಇರುವುದಿಲ್ಲ.

ಉಳಿದರೆ ಚಕ್ರಬಡ್ಡಿಯಾಗುತ್ತದೆ
ಮಿನಿಮಮ್‌ ಡ್ನೂ ಕಟ್ಟದವರಿಗೆ ಪೂರ್ಣ ಮೊತ್ತದ ಮೇಲೆ ಹಾಗೂ ಕಟ್ಟಿದವರಿಗೆ ಬಾಕಿ ಮೊತ್ತದ ಮೇಲೆ ಬಡ್ಡಿ ತಗುಲುತ್ತದೆ. ಎಲ್ಲಾ ಖರೀದಿಗಳ ಮೇಲೆ ಬಡ್ಡಿಯನ್ನು ಯಾವುದೇ ಇಂಟರೆಸ್ಟ್ – ಫ್ರೀ ಅವಧಿ ಇಲ್ಲದೆ ಖರೀದಿಯ ದಿನಾಂಕಗಳಿಂದಲೇ ಹೇರಲಾಗುತ್ತದೆ. ಇದರ ವಿವರ ಮುಂಬರುವ ಸ್ಟೇಟ್ಮೆಂಟಿನಲ್ಲಿ ಪ್ರತಿಫ‌ಲಿತವಾಗುತ್ತದೆ. ಬಡ್ಡಿ ದರ ಸಾಮಾನ್ಯವಾಗಿ ಬ್ಯಾಂಕ್‌ ಮತ್ತು ಕಾರ್ಡಿನ ಪ್ರಭೇದವನ್ನು ಹೊಂದಿಕೊಂಡು ಸುಮಾರು 25- 45% ವಾರ್ಷಿಕ ಇರಬಹುದು. ಈ ಬಡ್ಡಿಯನ್ನು ಸಾಲದ ಮೊತ್ತದ ಮೇಲೆ ದೈನಂದಿನ ಲೆಕ್ಕದಲ್ಲಿ ಹೇರಲಾಗುತ್ತದೆ. ಹಾಗೂ ಪ್ರತೀ ಮಾಸದ ಅವಧಿಯ ಕೊನೆಗೂ ಇದು ಚಕ್ರೀಕೃತವಾಗುತ್ತದೆ (compounding). ಇದು ಅತಿಯಾದ ಬಡ್ಡಿ. ಹಾಗಾಗಿ ಕ್ರೆಡಿಟ್‌ ಕಾರ್ಡಿನಲ್ಲಿ ಯಾವತ್ತೂ ಸಾಲ ಇಟ್ಟುಕೊಳ್ಳಬೇಡಿ. ಅದೂ ಅಲ್ಲದೆ, ಪೂರ್ಣ ಮೊತ್ತ ಕಟ್ಟದೆ ಬಾಕಿ ಇಟ್ಟುಕೊಂಡಲ್ಲಿ ಮುಂದಿನ ಅವಧಿಯಲ್ಲಿ ಮಾಡಿದ ಖರೀದಿಗಳ ಮೇಲೂ ಯಾವುದೇ ನಿಬ್ಬಡ್ಡಿಯ ಗ್ರೇಸ್‌ ಪೀರಿಯಡ್‌ ಇಲ್ಲದೆ ಅದೇ ದಿನಾಂಕಗಳಿಂದ ಪೂರ್ಣ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಈ ಪದ್ಧತಿ ಹಳೆಯ ಬಾಕಿಯನ್ನು ಸಂಪೂರ್ಣವಾಗಿ ತೀರಿಸುವವರೆಗೂ ಜಾರಿಯಲ್ಲಿರುತ್ತದೆ.

ಲೇಟ್‌ ಫೀಯಿಂದ ಮಾತ್ರ ಮುಕ್ತಿ
ಮಿನಿಮಮ್‌ ಡ್ನೂ ಕಟ್ಟಿದರೆ ಲೇಟ್‌ ಫೀಸ್‌+ ಸರ್ವಿಸ್‌ ಟ್ಯಾಕ್ಸ್ ಇರುವುದಿಲ್ಲ, ಆದರೆ ಬಡ್ಡಿ ಅನ್ವಯವಾಗುತ್ತದೆ. ಈ ಅಂಕಿ ಅಂಶಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಹಾಗಾಗಿ, ಕ್ರೆಡಿಟ್‌ ಕಾರ್ಡಿನ ಮೇಲೆ ಅತಿಯಾದ ಪ್ರತಿ ಮಾಸವೂ ಚಕ್ರೀಕೃತಗೊಳ್ಳುವ ಸಾಧ್ಯತೆ ಜಾಸ್ತಿ (25- 45% ವಾರ್ಷಿಕ) ಬಡ್ಡಿ ದರ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಮಿನಿಮಮ್‌ ಡ್ನೂ ಮಾತ್ರ ಕಟ್ಟಿದರೆ ಲೇಟ್‌ ಫೀಸ್‌ ಮಾತ್ರ ಉಳಿದೀತು. ಬಡ್ಡಿ ಕೊಡಲೇ ಬೇಕು. ಅಲ್ಲದೆ ಹೊಸ ಖರೀದಿಗಳಿಗೆ ಬಡ್ಡಿರಹಿತ ಗ್ರೇಸ್‌ ಅವಧಿ ಇರುವುದಿಲ್ಲ. ಬಡ್ಡಿಯಿಂದ ತಪ್ಪಿಸಿಕೊಳ್ಳುವ ಏಕೈಕ ಉಪಾಯವೆಂದರೆ ಸಾಲ ತೆಗೆದುಕೊಳ್ಳದೇ ಇರುವುದು (ಬಾಕಿ ಉಳಿಸಿಕೊಳ್ಳದೇ ಇರುವುದು). ಕಾಲ ಕಾಲಕ್ಕೆ ತಕ್ಕಂತೆ ಪೂರ್ತಿಯಾಗಿ ಡ್ನೂ ಮೊತ್ತವನ್ನು ಕಟ್ಟಿ ಬಿಡಬೇಕು. ಇಲ್ಲದಿದ್ದರೆ ಕ್ರೆಡಿಟ್‌ ಕಾರ್ಡ್‌ ಎನ್ನುವ ಸೌಲಭ್ಯ ದೊಡ್ಡ ಪೀಡೆಯಾಗಿ ಪರಿವರ್ತನೆಗೊಂಡೀತು. ನೆನಪಿಡಿ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next