Advertisement
ನಾವು ಬಿಟ್ಟು ಬಂದ ಸಮಾಜದಿಂದ ಎಷ್ಟೆಲ್ಲ ಅಮೂರ್ತ ಆಸ್ತಿಯನ್ನು ನಮ್ಮೊಡನೆ ತಂದು ಅವೆಲ್ಲ ನಮ್ಮಿಂದ ಬೇರ್ಪಡಿಸಲಾಗದ ಅಂಗವಾಗುತ್ತವೆ. ನಮ್ಮ ಆಸಕ್ತಿ ಮತ್ತು ತೃಪ್ತಿಗನುಸಾರವಾಗಿ ಅವುಗಳನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ. ಇದು ಒಂದು ರೀತಿ ನಮ್ಮ ಸಮಾಜಕ್ಕೆ ನಾವು ನೀಡುವ ಒಂದು ಪುಟ್ಟ ಕೊಡುಗೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಇಂತಹ ಸಾಂಪ್ರದಾಯಿಕ ಸಾಂಸ್ಕೃತಿಕ ಜಾನಪದ ಕಲೆಯ ಬೆಳವಣಿಗೆಗೆ ದೇಶದಿಂದ ಸಾವಿರಾರು ಮೈಲು ದೂರವಿದ್ದು ಪರಿಶ್ರಮಿಸುತ್ತಾರೆ ಎಂದು ಲೆಕ್ಕವಿಡಲು ಹೋದರೆ ಸಿಗುವುದು ಬೆರಳೆಣಿಕೆಯಷ್ಟೇ.
Related Articles
Advertisement
ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಅತೀ ಹೆಚ್ಚು (ಒಟ್ಟು- 24) ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆಯ ಜತೆಗೆ ಗಿನಿಸ್Õ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಇವರ ಹೆಸರು ಇದೆ. ಅಲ್ಲದೇ ಬೆಲ್ಜಿಯಂನ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಎರಡು ಬಾರಿ ಕಾರ್ಯಕ್ರಮ ನೀಡಿರುವ ಇವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
1942ರಿಂದ ಬ್ರಿಟಿಷ್ ಗ್ರಂಥಾಲಯದ ವಶದಲ್ಲಿರುವ ತತ್ವ ಜ್ಞಾನಿ ಆಚಾರ್ಯ ರಾಮಾನುಜ ಬರೆದ 300 ವರ್ಷಗಳ ಹಳೆಯ ತೆಲುಗು ತಾಳೆ ಎಲೆ ಫೋಲಿಯೊಗಳನ್ನು ಲಿಪ್ಯಂತರಿಸುವ ಅತ್ಯಂತ ಕಠಿನ ಕಾರ್ಯವನ್ನು ಮೂರು ವರ್ಷಗಳಲ್ಲಿ ಪೂರೈಸಿ ಬ್ರಿಟಿಷ್ ಸಂಸತ್ತಿನಲ್ಲಿ ಆಚಾರ್ಯರ 999ನೇ ಜನ್ಮ ದಿನಾಚರಣೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು.
2019ರಲ್ಲೊಮ್ಮೆ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಕನ್ನಡದ ಕವಯತ್ರಿಯೊಬ್ಬರು ಬರೆದ ಕವಿತೆ ವಾಚನ ಮಾಡುವ ಅವಕಾಶವನ್ನು ರಾಗಸುಧಾ ಅವರು ನನಗೆ ಒದಗಿಸಿದ್ದರು. ಇದು ನನಗೆ ಕನಸಿನಲ್ಲೂ ಯೋಚಿಸದ ಅವಕಾಶ. ಇದಕ್ಕಿಂತ ಮುಂಚೆ ರಾಗಸುಧಾ ಅವರನ್ನು ಮುಖತಃ ಭೇಟಿಯಾಗಿರಲಿಲ್ಲ.
ಹೌಸ್ ಆಪ್ ಲಾರ್ಡ್ಸ್‌ನ ಥೇಮ್ಸ್ ನದಿ ತೀರದ ಸುಂದರವಾದ ಖಾಸಗಿ ಕೊಠಡಿಯಲ್ಲಿ ಸಂಜೆಯ ಚಹಾ ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಂದ ತುಂಬಿದ ಮೇಜಿನ ಮುಂದೆ ಕುಳಿತು ದೇಶವಿದೇಶಗಳಿಂದ ಬಂದಿದ್ದ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಸಮಕ್ಷಮದಲ್ಲಿ ನಡೆದ ಮಾತೃ ಭಾಷಾ ಕಾರ್ಯಕ್ರಮವದು. ಸುಮಾರು 20 ಭಾರತೀಯ ಭಾಷೆಯಲ್ಲಿ ಬರೆದ ಕವನ, ಕವಿತೆ, ಹಾಡು ಕೇಳುವ ಅದೃಷ್ಟ ಮತ್ತು ವಿಭಿನ್ನ ಸಂಸ್ಕೃತಿಯಿಂದ ಬಂದ ಜನರ ಪರಿಚಯ. ಹೊರದೇಶದಲ್ಲಿ ಅದೂ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ಅದಕ್ಕೆ ಗೌರವ ಲಭಿಸಿದ್ದು ಒಂದು ರೀತಿಯ ಕನಸಿನಂತೆ ಭಾಸವಾಗಿತ್ತು. ಅಲ್ಲಿಂದ ಹಿಂದಿರುಗುವ ಮೊದಲು ರಾಗಸುಧಾ ಅವರು ಬಳಿಗೆ ಬಂದು ಮುಂದಿನ ಕಾರ್ಯಕ್ರಮದಲ್ಲಿ ನಿನ್ನದೇ ಕವಿತೆ ಬರಿ ಎಂದರು. ನಾನು ನಕ್ಕು ಸುಮ್ಮನಾಗಿದ್ದೆ. ಮುಂದೆ ನಾನು ಕವಿತೆ ಬರೆಯುವ ಪ್ರಯತ್ನ ಮಾಡಿದೆ. 2020ರಲ್ಲಿ ನಾನೇ ಬರೆದ ಕವಿತೆ ಎಲ್ಲರಿಂದ ಮೆಚ್ಚುಗೆ ಪಡೆದು ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡನೆಯಾಯಿತು. ಆದರೆ ಇದರ ಹಿಂದೆ ರಾಗಸುಧಾ ಅವರ ಪರಿಶ್ರಮ ಅವರ ಮುಖದಲ್ಲಿ ಕಿಂಚಿತ್ತೂ ಕಾಣಲಿಲ್ಲ. ಕೇಳಿದರೆ ಎಲ್ಲರ ಟೀಮ್ ವರ್ಕ್ ಎನ್ನುತ್ತಾರೆ.
2021ರಲ್ಲಿ ವಿಶ್ವ ಮಾತೃಭಾಷಾ ದಿನದಂದು ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಮಗದೊಮ್ಮೆ ನನ್ನ ಬರವಣಿಗೆಗೆ ಪ್ರೋತ್ಸಾಹ ಸಿಕ್ಕಿತು. ಐದು ವಿವಿಧ ದೇಶಗಳ ಖ್ಯಾತ ಲೇಖಕರು, ವಿದ್ವಾಂಸರು, ರಾಜತಾಂತ್ರಿಕರು, ಗಾಯಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ 27 ಭಾರತೀಯ ಹಾಗೂ ದಕ್ಷಿಣ ಏಷ್ಯಾದ ಭಾಷೆಗಳ ಜತೆ ಕನ್ನಡ ಮತ್ತು ಕನ್ನಡ ನಾಡಿನ ಶ್ರೇಷ್ಠತೆ ಬಗ್ಗೆ ಬರೆಯುವ ಹೇಳುವ ಅವಕಾಶ ನನ್ನದಾಯಿತು.