Advertisement

ಸರ್ಕಾರಿ ಶಾಲೆಯಲ್ಲೂ ಸೃಜನಶೀಲತೆ ಪಠ್ಯ

02:16 AM May 22, 2017 | Karthik A |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಈ ವರ್ಷದಿಂದ ಸೃಜನಶೀಲತೆ ಮತ್ತು ಪ್ರಯೋಗಾತ್ಮಕ ಪಠ್ಯವೂ ಲಭ್ಯ! ಹೌದು, ಒಂದರಿಂದ ಮೂರನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಸಲಾಗುವ ಸಾಮಾನ್ಯ ಶಿಕ್ಷಣ ಜತೆಗೆ ಸೃಜನಶೀಲತೆ ಮತ್ತು ಪ್ರಯೋಗಾತ್ಮಕ ಪಠ್ಯಕ್ರಮ ಸಿದಟಛಿಪಡಿಸಲಾಗಿದ್ದು, 2017-18 ನೇ ಸಾಲಿನಿಂದಲೇ ಇದು ಸಾಮಾನ್ಯ ಶಿಕ್ಷಣದ ಜತೆಗೆ ಜೋಡಣೆಯಾಗಲಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಖಾಸಗಿ ಶಾಲಾ ಮಕ್ಕಳ ಜತೆ ಸ್ಪರ್ಧೆಗೆ ತಯಾರು ಮಾಡುವ ನಿಟ್ಟಿನಲ್ಲಿ ಈ ಮನೋಭಾವ ಬೆಳೆಸುವುದು ಸರ್ಕಾರದ ಉದ್ದೇಶವಾಗಿದೆ.

Advertisement

ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವ್ಯವಸ್ಥೆ ಇಲ್ಲ. ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮವೂ ಇಲ್ಲ. ನೇರವಾಗಿ ವಯಸ್ಸಿನ ಆಧಾರದ ಮೇಲೆ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಆ ಮಕ್ಕಳಲ್ಲಿರುವ ಬುದ್ಧಿಮತ್ತೆ ಗುರುತಿಸಲು ಪ್ರೋತ್ಸಾಹ ನೀಡುವ ಪಠ್ಯಕ್ರಮ ಇಲ್ಲ. ಹೀಗಾಗಿ, ಸರ್ಕಾರ ಕ್ರಿಯೇಟಿವಿಟಿ ಹಾಗೂ ಪ್ರಾಕ್ಟಿಕಲ್‌ ಪಠ್ಯಕ್ರಮ ಜೋಡಣೆಗೆ ಮುಂದಾಗಿದೆ. ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳ ಭಾಷೆ ವೃದ್ಧಿ ಮತ್ತು ಅಕ್ಷರಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಇದಕ್ಕೆ ಪೂರಕವಾಗುವಂತೆ ವಿಭಿನ್ನವಾದ ಪ್ರಾಯೋಗಿಕ ಪುಸ್ತಕ, ಸೃಜನಶೀಲತೆ ಹೆಚ್ಚಿಸುವ ಪುಸ್ತಕ ಅಲ್ಲಿನ ಪಠ್ಯಕ್ರಮದಲ್ಲೇ ಸೇರಿಕೊಂಡಿರುತ್ತದೆ.

ಹೊಸ ಪ್ರಾಯೋಗಿಕ ಪುಸ್ತಕದಲ್ಲಿ ಏನೇನಿದೆ?
ಅ, ಆ, ಇ, ಈ…..ಎ,ಬಿ,ಸಿ,ಡಿ ಹಾಗೂ ಹಿಂದಿ ವರ್ಣಮಾಲೆಯ ಅಕ್ಷರಗಳನ್ನು ಮಕ್ಕಳು ತಿದ್ದಿ, ತಿದ್ದಿ ಬರೆಯಲು ಹಾಗೂ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪೂರಕವಾಗುವ ಪ್ರಾಯೋಗಿಕ ಪುಸ್ತಕ ಸಿದ್ಧಪಡಿಸಲಾಗಿದೆ. ಮಕ್ಕಳ ಪ್ರತಿಭೆ ಗುರುತಿಸಿ, ಅವರ ಆಲೋಚನೆಯ ವಿವೇಚನೆಯ ಮಟ್ಟಕ್ಕೆ ಅನುಗುಣವಾಗಿ ನಾಗರಿಕತೆ, ಪರಿಸರ ಪ್ರಜ್ಞೆ, ಪ್ರತಿ ಮಗುವಿಗೂ ಮರಗಳ ರಕ್ಷಣೆ, ಸಸಿ ನೆಡಲು ಬೇಕಾದ ರೀತಿಯಲ್ಲಿ ಪ್ರೇರಣೆ ನೀಡಲು ಸೃಜನಶೀಲತೆಯ ಕೆಲವು ನಿದರ್ಶನ ಹೊಂದಿರುವ ಚಿತ್ರಗಳನ್ನು ಒಳಗೊಂಡ ಪುಸ್ತಕ ತಯಾರಿಸಿದ್ದು, ಶಾಲಾ ಆರಂಭದಲ್ಲೇ ನೀಡಲಾಗುತ್ತದೆ. ಸಸಿ ನೆಡುವುದು, ಪರಿಸರದಲ್ಲಿ ಮರಗಳ ಪಾತ್ರ, ಮಣ್ಣಿನ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಇತ್ಯಾದಿಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಮಕ್ಕಳಿಗೆ ಮನದಟ್ಟು ಮಾಡಲಾಗುತ್ತದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕೌಶಲ್ಯಾಭಿವೃದ್ಧಿ, ಭಾಷಾ ವೃದ್ಧಿ, ಪರಿಸರ ಕಾಳಜಿ ಹೆಚ್ಚಿಸಲು ಪೂರಕವಾಗುವ ಮತ್ತು ಅವರಲ್ಲಿನ ಸೃಜನಾತ್ಮಕತೆಯನ್ನು ಹೆಚ್ಚಿಸಲು ಹೊಸ ಪುಸ್ತಕಗಳನ್ನು ನೀಡಲಿದ್ದೇವೆ. ಖಾಸಗಿ ಶಾಲೆಗಳ ಜತೆ ಸ್ಪರ್ಧೆಗೆ ಇದು ಅನಿವಾರ್ಯ.
– ತನ್ವೀರ್‌ ಸೇಠ್, ಶಿಕ್ಷಣ ಸಚಿವ

– ರಾಜು ಖಾರ್ವಿ ಕೊಡೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next