Advertisement

ಕಪ್ಪುಹಣ ಸೃಷ್ಟಿಗೆ ತಡೆ ಹಾಕಬೇಕು

12:01 AM Oct 11, 2019 | sudhir |

ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಚಿಸಿದ ಕೆಲವು ಕಾನೂನುಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಈಗ ಫ‌ಲ ನೀಡಲಾರಂಭಿಸಿವೆ.

Advertisement

ಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪುಹಣದ ಖಾತೆಗಳ ಮಾಹಿತಿಯ ಮೊದಲ ಕಂತು ಭಾರತದ ಕೈಸೇರಿದೆ. ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಜಯ ಎಂದು ಹೇಳಬಹುದು. ಒಟ್ಟು 75 ದೇಶಗಳ ಜೊತೆಗೆ ಸ್ವಿಜರ್‌ಲ್ಯಾಂಡ್‌ ಕಪ್ಪುಹಣ ಖಾತೆಗಳ ಮಾಹಿತಿ ವಿನಿಮಯ ಮಾಡಿಕೊಂಡಿದ್ದು ಅದರಲ್ಲಿ ಭಾರತವೂ ಸೇರಿದೆ. ಭಾರತಕ್ಕೆ ಒಟ್ಟು ಸುಮಾರು 31 ಲಕ್ಷ ಖಾತೆಗಳ ಮಾಹಿತಿ ಸಿಕ್ಕಿದೆ. ಇದಕ್ಕೆ ಪ್ರತಿಯಾಗಿ ಭಾರತ 21 ಲಕ್ಷ ಖಾತೆಗಳ ಮಾಹಿತಿಯನ್ನು ಸ್ವಿಜರ್‌ಲ್ಯಾಂಡ್‌ಗೆ ಹಸ್ತಾಂತರಿಸಿದೆ.

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಪ್ಪುಹಣದ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸುತ್ತಿದೆ. ವಿದೇಶಗಳಲ್ಲಿ ಮಾತ್ರವಲ್ಲದೆ ದೇಶದೊಳಗಿರುವ ಕಪ್ಪುಹಣವನ್ನು ಬಯಲು ಗೊಳಿಸುವ ನಿಟ್ಟಿನಲ್ಲೂ ಕಠಿಣ ನಿಲುವು ಕೈಗೊಂಡಿದೆ. ಇದರ ಪರಿಣಾಮವಾಗಿಯೇ ದೊಡ್ಡ ದೊಡ್ಡ ಕುಳಗಳ ಮೇಲೆ ಐಟಿ ಮತ್ತು ಇಡಿ ದಾಳಿಗಳಾಗುತ್ತಿವೆ. ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಚಿಸಿದ ಕೆಲವು ಕಾನೂನುಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಈಗ ಫ‌ಲ ನೀಡಲಾರಂಭಿಸಿವೆ. ಈ ಮಾದರಿಯ ಒಂದು ಒಪ್ಪಂದದ ಫ‌ಲಶ್ರುತಿಯೇ ಸ್ವಿಜರ್‌ಲ್ಯಾಂಡ್‌ನ‌ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ಖಾತೆಗಳ ಮಾಹಿತಿ ಹಸ್ತಾಂತರ. ಸ್ವಿಜರ್‌ಲ್ಯಾಂಡ್‌ ಸೇರಿದಂತೆ ತೆರಿಗೆ ಕಳ್ಳರ ಸ್ವರ್ಗ ಎಂದು ಅರಿಯಲ್ಪಡುವ ಕೆಲವು ದೇಶಗಳಿವೆ. ಈ ದೇಶಗಳಲ್ಲಿ ಅಕ್ರಮ ಸಂಪಾದನೆಯನ್ನು ಬಚ್ಚಿಟ್ಟರೆ ಯಾರ ಕೈಗೂ ಸಿಗುವುದಿಲ್ಲ ಎಂಬ ಗಟ್ಟಿ ನಂಬುಗೆ ಕಪ್ಪುಹಣದ ಕುಳಗಳಲ್ಲಿದೆ. ಅದರಲ್ಲೂ ಸ್ವಿಸ್‌ ಬ್ಯಾಂಕ್‌ಗಳು ಹಿಂದಿನಿಂದಲೂ ಕಪ್ಪುಹಣ ಕುಳಗಳ ಅಚ್ಚುಮೆಚ್ಚಿನ ತಾಣ. ಈ ಬ್ಯಾಂಕ್‌ಗಳ ಕುರಿತಾಗಿ ಹಲವು ದಂತಕತೆಗಳೇ ಇವೆ. ಇವುಗಳಲ್ಲಿ ಹಣ ಇಟ್ಟರೆ ಸ್ವತಃ ಕುಟುಂಬದವರಿಗೂ ಗೊತ್ತಾಗುವುದಿಲ್ಲ ಎಂಬಂಥ ಕತೆಗಳಿವೆ. ಇಂಥ ಬ್ಯಾಂಕ್‌ಗಳೇ ಈಗ ತಾವಾಗಿಯೇ ಖಾತೆಗಳ ಮಾಹಿತಿಯನ್ನು ಹಸ್ತಾಂತರಿಸಲು ಪ್ರಾರಂಭಿಸಿರುವುದು ಕಪ್ಪುಹಣ ಕುಳಗಳಲ್ಲಿ ನಡುಕ ಹುಟ್ಟಿಸುವ ನಡೆ.

ಜಾಗತಿಕ ಒತ್ತಡ ಬಿದ್ದ ಬಳಿಕ ಸ್ವಿಜರ್‌ಲ್ಯಾಂಡ್‌ ಸರಕಾರ ಮಾಹಿತಿ ವಿನಿಮಯಕ್ಕೆ ವಿವಿಧ ದೇಶಗಳ ಜೊತೆಗೆ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಂಡಿತು ಎನ್ನುವುದು ನಿಜ. ಆದರೆ ಈ ಮಾದರಿಯ ಒಪ್ಪಂದ ಮಾಡಿಕೊಳ್ಳುವಲ್ಲಿ ನಮ್ಮ ಸರಕಾರ ತೋರಿಸಿದ ಉತ್ಸುಕತೆ ಪ್ರಶಂಸನೀಯ.

ಸರಕಾರದ ಬದ್ಧತೆ ಮತ್ತು ಸಂಕಲ್ಪ ಇಲ್ಲದಿದ್ದರೆ ಸ್ವಿಸ್‌ ಖಾತೆಗಳ ಮಾಹಿತಿ ನಮಗೆ ಸಿಗುತ್ತಿರಲಿಲ್ಲ. 2016ರಲ್ಲಿ ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ ಜೊತೆಗೆ ಖಾತೆಗಳ ಮಾಹಿತಿ ವಿನಿಮಯ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ ಪ್ರತಿ ವರ್ಷ ಉಭಯ ದೇಶಗಳ ಪರಸ್ಪರರ ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು. ಇದೀಗ ಮೊದಲ ಕಂತಿನ ಮಾಹಿತಿ ಸಿಕ್ಕಿದ್ದು, ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಇನ್ನೊಂದು ಕಂತು ಸಿಗಲಿದೆ. ಇದು ನಿರಂತರ ಮುಂದುವರಿಯುವ ಪ್ರಕ್ರಿಯೆ. ಈ ಒಪ್ಪಂದ ಕಪ್ಪುಹಣದ ಹೊರ ಹರಿವನ್ನು ದೊಡ್ಡ ಮಟ್ಟದಲ್ಲಿ ತಡೆ ಹಿಡಿದಿರುವುದನ್ನು ಅಂಕಿಅಂಶಗಳೇ ಸಾರುತ್ತಿವೆ.

Advertisement

ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿ ಆದಾಯ ತೆರಿಗೆ ಕಳ್ಳತನ ರೂಪದಲ್ಲಿ ನಷ್ಟವಾಗುತ್ತಿದೆ. ಇದುವೇ ಕಪ್ಪುಹಣವಾಗಿ ಪರಿವರ್ತಿತಗೊಂಡು ವಿದೇಶಗಳಿಗೆ ಹೋಗುತ್ತದೆ. ಈ ಹಣ ದೇಶದೊಳಗೆ ಹೂಡಿಕೆಯಾದರೆ ಬಡತನ ಮತ್ತು ಸಾಮಾಜಿಕ ಅಸಮತೋಲನವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.ಇದಕ್ಕೂ ಮೊದಲು ಕಪ್ಪುಹಣ ಸೃಷ್ಟಿಯಾಗದಂಥ ತೆರಿಗೆ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ದಕ್ಷ ಮತ್ತು ಸರಳಗೊಳಿಸುವುದು ಸೇರಿದಂತೆ ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಹಲವು ಇವೆ.

Advertisement

Udayavani is now on Telegram. Click here to join our channel and stay updated with the latest news.

Next