Advertisement

ವಿಶ್ವಶಾಂತಿಗಾಗಿ “ಬಾಹುಬಲಿ ಅಹಿಂಸಾ ದಿಗ್ವಿಜಯ’ರಚನೆ

06:20 AM Sep 16, 2017 | |

ಹುಬ್ಬಳ್ಳಿ: “ಭಾರತೀಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದ ಬಾಹುಬಲಿಗೆ ಮಹಾಕಾವ್ಯ ನ್ಯಾಯ ಸಿಕ್ಕಿಲ್ಲವೆಂಬ ಶ್ರವಣಬೆಳಗೊಳದ ಸ್ವಾಮೀಜಿಯವರ ಒತ್ತಾಸೆಯಿಂದಾಗಿ, ನಾಲ್ಕೂವರೆ ವರ್ಷಗಳ ಹಿಂದೆ ತಪಸ್ಸಿನ ರೀತಿಯಲ್ಲಿ ಆರಂಭಿಸಿದ್ದ “ಬಾಹುಬಲಿ ಅಹಿಂಸಾ ದಿಗ್ವಿಜಯ’ ಎಂಬ ಸುಮಾರು 650 ಪುಟಗಳ ಮಹಾಕಾವ್ಯ ಪೂರ್ಣಗೊಂಡಿದೆ. ವಿಶ್ವಶಾಂತಿಗೆ ಒತ್ತು ನೀಡಿ ಮಹಾಕಾವ್ಯಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಯತ್ನ ತೋರಿದ್ದೇನೆ.’

Advertisement

-ಇದು, ಸಾಹಿತಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಅವರ ಅನಿಸಿಕೆ. ಅವರು ತಮ್ಮ ಮೂರು ಮಹಾಕಾವ್ಯ, ಸಾಹಿತ್ಯ ಕೃಷಿ, ಇಂದಿನ ಸಾಹಿತ್ಯ ವಲಯದ ಸ್ಥಿತಿ ಕುರಿತಾಗಿ “ಉದಯವಾಣಿ’ಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

“ಬಾಹುಬಲಿ ಅಹಿಂಸಾ ದಿಗ್ವಿಜಯ’ ಮಹಾಕಾವ್ಯ ಪೂರ್ಣಗೊಂಡಿದೆ. ಐವರು ವಿದ್ವಾಂಸರ ಪರಿಶೀಲನೆ ಹಾಗೂ ವ್ಯಾಖ್ಯಾನಕ್ಕೆ ನೀಡಲಾಗಿದೆ. ನವೆಂಬರ್‌ ವೇಳೆಗೆ ಮುದ್ರಣಕ್ಕೆ ಹೋಗಲಿದ್ದು, ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ವೇಳೆ ಮಹಾಕಾವ್ಯ ಲೋಕಾರ್ಪಣೆಗೊಳ್ಳಲಿದೆ.

“ರಾಮಾಯಣ ಮಹಾನ್ವೇಷಣಂ’ ಹಾಗೂ ದ್ರೌಪತಿಯ ಆತ್ಮಕಥೆಯ “ಸಿರಿಮುಡಿ ಪರಿಕ್ರಮ’ ಎರಡು ಮಹಾಕಾವ್ಯಗಳ ನಂತರ ಇನ್ನಾವುದೇ ಮಹಾಕಾವ್ಯ ಬರೆಯುವುದು ಬೇಡವೆಂದು ನಿರ್ಧರಿಸಿದ್ದೆ. ಆದರೆ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬಾಹುಬಲಿಗೆ ಕಾವ್ಯ ನ್ಯಾಯ ಸಿಕ್ಕಿಲ್ಲ. ಮಹಾಕಾವ್ಯ ಬರೆಯುವ ಮೂಲಕ ಕಾವ್ಯ ನ್ಯಾಯ ಒದಗಿಸಬೇಕೆಂದು ಹೇಳಿದ್ದರು. ಅವರ ಪ್ರೇರಣೆಯೊಂದಿಗೆ ಬಾಹುಬಲಿ ಮಹಾಕಾವ್ಯ ರಚನೆಯಲ್ಲಿ ತೊಡಗಿದ್ದೆ.

33 ಅಧ್ಯಾಯದ ಮಹಾಕಾವ್ಯ: ಬಾಹುಬಲಿ ಅಹಿಂಸಾ ದಿಗ್ವಿಜಯ ಮಹಾಕಾವ್ಯ ರಚನೆಗಿಳಿದಾಗ ಹಲವು ಗೊಂದಲ, ಆತಂಕ ಸೃಷ್ಟಿಯಾಗಿತ್ತು. ನಾನು ಮೆಚ್ಚುವ ಮೂಡಬಿದರೆಯ ರತ್ನಾಕರವರ್ಣಿ ಅವರು “ಭರತೇಶ ವೈಭವ’ ಬರೆದಿದ್ದು, ಅದಕ್ಕೆ ವಿರುದ್ಧದಂತಿರಬಾರದು. ಮೂಲ ಆಶಯಕ್ಕೆ ಧಕ್ಕೆಯೂ ಬಾರದಂತೆ ಮಹಾಕಾವ್ಯ ರಚನೆ ಸವಾಲು ನನ್ನ ಮುಂದಿತ್ತು. ಇದಾವುದಕ್ಕೂ ಧಕ್ಕೆಯಾಗದಂತೆ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗದಂತೆ ಮಹಾಕಾವ್ಯ ರಚಿಸಿದ ತೃಪ್ತಿಯಂತೂ ಇದೆ. ಮಹಾಕಾವ್ಯದಲ್ಲಿ ಒಟ್ಟು 33 ಅಧ್ಯಾಯಗಳಿವೆ.

Advertisement

ಜೈನ ಧರ್ಮದ ಸಾಹಿತ್ಯ, ಪರಂಪರೆಯ ಅಧ್ಯಯನಕ್ಕಿಳಿದಿದ್ದೆ. ಜೈನ ಧರ್ಮದ ಪ್ರಥಮ ತೀರ್ಥಂಕರ ವೃಷಭದೇವ ಅವರಿಗೆ ಭರತೇಶ, ಬಾಹುಬಲಿ ಸೇರಿ 99 ಮಕ್ಕಳು ಮುಂದೆ ರಾಜರಾಗಿದ್ದ ವೃಷಭದೇವ ತೀರ್ಥಂಕರ ರೂಪ ತಾಳುವುದು. ಮುಂದೆ ಭರತೇಶ, ಬಾಹುಬಲಿ ನಡುವಿನ ಸಮರ, ಬಾಹುಬಲಿ ಕೇವಲ್ಯ ಆಗುವುದು ಹೀಗೆ ಅನೇಕ ಸನ್ನಿವೇಶಗಳ ಚಿತ್ರಣ ಬರುತ್ತದೆ.

ಮಗಳ ಸಲಹೆ: ಬಾಹುಬಲಿ ಮಹಾಕಾವ್ಯ ರಚನೆ ಸಂದರ್ಭದಲ್ಲೇ ಅಮೆರಿಕಾದಲ್ಲಿ ನೃತ್ಯ ಮತ್ತು ಸಂಗೀತ ಥೆರಪಿ ತರಬೇತುಗಾರ್ತಿಯಾಗಿರುವ ನನ್ನ ಮಗಳು ಬಂದಿದ್ದಳು. ಬಾಹುಬಲಿಯ ಅಹಿಂಸಾ ಕುರಿತಾಗಿ ಯಾಕೆ ಒತ್ತು ಕೊಡಬಾರದು ಎಂದು ಪ್ರಶ್ನಿಸಿದ್ದಳು. ಈ ಪ್ರೇರಣೆಯೊಂದಿಗೆ ಶೋಧನೆಗಿಳಿದಾಗ ಬಾಹುಬಲಿಯ ಅಹಿಂಸಾ ದಿಗ್ವಿಜಯ ಪ್ರಸ್ತಾಪ ಮಹಾಪುರಾಣವೊಂದರಲ್ಲಿ ಉಲ್ಲೇಖ ಆಗಿದ್ದು, ಅದನ್ನು ವಿಸ್ತರಿಸುವ ಕಾರ್ಯ ಮಾಡಿದ್ದೇನೆ.

ಮಾಂಸಾಹಾರ ಮುಟ್ಟಿಲ್ಲ
ಮಹಾಕಾವ್ಯ ರಚನೆಗೆ ಇಳಿದಾಗಿ ನನ್ನ ಮನ ಸ್ವಯಂ ಪ್ರೇರಿತವಾಗಿ ಮಾಂಸಾಹಾರ ತ್ಯಜಿಸುವ ನಿರ್ಣಯ ಕೈಗೊಂಡಿತ್ತು. ಕೆಲ ದಿನಗಳ ಮಟ್ಟಿಗೆ ಮೊಟ್ಟೆ ಸೇವಿಸುತ್ತಿದ್ದೆ. ಅದು ಕೂಡ ನಿರಾಕರಣೆ ಮನೋಭಾವ ಮೂಡಿದ್ದರಿಂದ ನಾಲ್ಕೂವರೆ ವರ್ಷಗಳಿಂದ ಶುದ್ಧ ಸಸ್ಯಹಾರಿಯಾಗಿದ್ದೇನೆ ಎನ್ನುತ್ತಾರೆ ಮೊಯ್ಲಿ.

ಸಾಹಿತಿಯಾದವರು ವರ್ತಮಾನದ ಸಾಹಿತಿಗಳಾಗಿದ್ದು ಭೂತಕಾಲದ ಆಧಾರ, ಭವಿಷ್ಯತ್ತಿನ ಧ್ರುವ ನಕ್ಷತ್ರ ರೀತಿಯಲ್ಲಿ ಸಾಹಿತ್ಯ ಬದುಕು ರೂಪಿಸಿಕೊಳ್ಳಬೇಕಾಗಿದೆ. ಯಾವುದೇ ಸಿದ್ಧಾಂತಕ್ಕೆ ಸಿಲುಕದೆ ಸ್ವತಂತ್ರತೆ, ಪ್ರಾಮಾಣಿಕತೆ ಬದುಕು ತೋರಬೇಕಾಗಿದೆ. ನಮ್ಮ ಸಿದ್ಧಾಂತವನ್ನು ಒತ್ತಾಯಪೂರ್ವಕವಾಗಿ ಅಕ್ಷರಗಳ ಮೂಲಕ ಇನ್ನೊಬ್ಬರ ಮೇಲೆ ಹೇರುವ ಅಧಿಕಾರವನ್ನು ನಮಗ್ಯಾರು ನೀಡಿದ್ದಾರೆ ಹೇಳಿ? ಸಾಹಿತಿ ಸಾರ್ವತ್ರಿಕ ಸಿದ್ಧಾಂತ ಹೊಂದಬೇಕೆಂಬುದು ನನ್ನ ಅನಿಸಿಕೆ.
– ವೀರಪ್ಪ ಮೊಯ್ಲಿ ಸಾಹಿತಿ, ಸಂಸದ

– ಅಮರೇಗೌಡ ಗೋನವಾರ
 

Advertisement

Udayavani is now on Telegram. Click here to join our channel and stay updated with the latest news.

Next