ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು ತನ್ನ ಮಂತ್ರ ದಂಡದಿಂದ ಅದರ ಮೇಲೆ, “ಹ್ರಾಂ, ಹ್ರೀಂ ಹೋಕಸ್, ಪೊಕಸ್’ ಎಂದು ಮಂತ್ರ ಹಾಕುತ್ತಾನೆ. ನೋಡ ನೋಡುತ್ತಿದ್ದಂತೆ, ಟೋಪಿಯನ್ನು ಮೇಲೆ ಎತ್ತಿ ಅದರಿಂದ ಚಾಕೊಲೇಟ್, ಬಿಸ್ಕೆಟ್, ವಾಚು, ನೋಟು, ಕರ್ಚಿಫ್ ಗಳನ್ನು ತೆಗೆಯುತ್ತಾನೆ.
ನೋಡುವ ಕಣ್ಣುಗಳಿಗೆ ಹಬ್ಬ ! ಜಾದೂಗಾರ ಸ್ವರ್ಗದಿಂದಲೇ ಬಂದಿದ್ದಾನೆ ಅನ್ನೋ ರೀತಿ ನೋಡುತ್ತಿರುತ್ತಾರೆ. ಹೀಗೆ, ಮಾಡುತ್ತಿದ್ದರೆ ಎಂಥವರಿಗೂ ತಾನೇ ಬೆರಗು ಹುಟ್ಟೊಲ್ಲ. ಬೇಕಾದ್ದನ್ನು ಕೊಡುವ ಈ ತರಹದ ಟೋಪಿಯೊಂದು ನಿಮಗೂ ಬೇಕೆಂದು ಅನಿಸುವುದಿಲ್ಲವೇ? ಇಲ್ಲ, ನಮಗೂ ಬೇಕು ಅನ್ನುವುದಾದರೆ ಸ್ವಲ್ಪ ತಾಳಿ. ನಿಮ್ಮ ಈ ಅನಿಸಿಕೆ ತಪ್ಪು. ರಹಸ್ಯ ಇರುವುದು ಟೋಪಿಯಲ್ಲಲ್ಲ. ಚಿತ್ರವನ್ನು ಸರಿಯಾಗಿ ಗಮನಿಸಿ.
ಇದನ್ನು ಮಾಡುವುದಕ್ಕೆ ಮೇಜಿನ ಹಿಂಭಾಗದ ಬಟ್ಟೆಯನ್ನು ಚಿತ್ರದಲ್ಲಿ ತೋರಿಸಿರುವಂತೆ ಸ್ವಲ್ಪ ಮಡಚಿ, ಒಂದು ಜೋಳಿಗೆಯನ್ನು ಮಾಡಿಕೊಳ್ಳಬೇಕು. ನಂತರ ಒಂದು ಕರ್ಚಿಫನ್ನು ತೆಗೆದುಕೊಂಡು ಅದರಲ್ಲಿ ಸೃಷ್ಟಿ ಮಾಡಬೇಕಾದ ವಸ್ತುಗಳನ್ನು ತುಂಬಿ, ಒಂದು ಚಿಕ್ಕ ಗಂಟನ್ನು ಮಾಡಿಕೊಳ್ಳಿ. ಈ ಗಂಟನ್ನು ಜೋಳಿಗೆಯಲ್ಲಿ ಹಾಕಿ. ಮೇಜಿನ ಮೇಲೆ ಇಟ್ಟ ಟೋಪಿಗೆ ಮಂತ್ರ ಹಾಕಿ ಪುನಃ ಮೇಲೆತ್ತುವ ಸಮಯದಲ್ಲಿ ಅದನ್ನು ಮೇಲಿನ ಅಂಚಿಗೆ ತಂದುಬಿಡಿ. ಆಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆಟ್ಟು ಮತ್ತು ತೋರು ಬೆರಳಿನಿಂದ ಸ್ವಲ್ಪವೇ ಮೇಲೆತ್ತಿ, ಇನ್ನೆರಡು ಬೆರಳುಗಳಿಂದ ವಸ್ತುಗಳನ್ನು ಇಟ್ಟಿರುವ ಗಂಟನ್ನು ಮೇಲೆತ್ತಿ. ತಕ್ಷಣ ಟೋಪಿಯೊಳಗೆ ಬೀಳಿಸಿ ಉಲ್ಟಾ ಮಾಡಿ. ಇದನ್ನು ಬಹಳ ವೇಗವಾಗಿ ಮಾಡಬೇಕು.
ನಂತರ ಬಲಗೈಯಿಂದ ಕರವಸ್ತ್ರದ ಗಂಟನ್ನು ಬಿಚ್ಚಿ ಎಲ್ಲಾ ವಸ್ತುಗಳನ್ನೂ ಒಂದಾದ ಮೇಲೆ ಒಂದು ತೋರಿಸಿ. ಇದನ್ನು ಸರಿಯಾಗಿ ಮಾಡಿದರೆ ಚಪ್ಪಾಳೆ ಖಚಿತ. ಎಲ್ಲ ಮಾಡಬೇಕಾದರೆ ಸ್ವಲ್ಪ ಹುಷಾರು!
ಉದಯ್ ಜಾದೂಗಾರ್