ಬೆಂಗಳೂರು: ಹದಿನಾರು ವರ್ಷಗಳ ಹಿಂದೆ ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಗಳೂರು ಮೂಲದ ಯುವಕನನ್ನು ಮದುವೆಯಾಗಿ ನಗರದಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ರೋನಿ ಬೇಗಂ(36) ಎಂಬಾಕೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
2005-06ರಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಈಕೆ, ಮುಂಬಯಿ, ಪೂನಾ ಸಹಿತ ವಿವಿಧೆಡೆ ವಾಸವಿದ್ದರು. ಮುಂಬಯಿಯ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗಳೂರು ಮೂಲದ ನಿತಿನ್ ಎಂಬಾತನನ್ನು ಪ್ರೀತಿಸಿದ್ದರು. ತನ್ನ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಈಕೆ ಪಾಯಲ್ ಘೋಷ್ ಎಂದು ಹೆಸರು ಬದಲಿಸಿಕೊಂಡು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಭಾರತೀಯ ಪೌರತ್ವ ಪಡೆದುಕೊಂಡಿದ್ದರು. ಅನಂತರ 2015ರಲ್ಲಿ ನಿತಿನ್‌ನನ್ನು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಈತ ಫುಡ್ ಡೆಲಿವರಿ ಬಾಯ್ ಆಗಿದ್ದು, ಆಕೆ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಕೋಲ್ಕೊತಾ ಪೊಲೀಸರ ಬಲೆಗೆ ಬಿದ್ದ ರೋನಿ:
ನಕಲಿ ದಾಖಲೆ ನೀಡಿ ಪಾಯಲ್ ಘೋಷ್ ಹೆಸರಿನಲ್ಲಿ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್‌ಕಾರ್ಡ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಳು. ಇದೇ ಪಾಸ್‌ಪೋರ್ಟ್ ಬಳಸಿ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದಾಗ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್ ಅಧಿಕಾರಿಗಳು ದಾಖಲೆ ತಪಾಸಣೆ ನಡೆಸಿದ್ದಾರೆ. ದಾಖಲೆಗಳ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾಳೆ. ಕೂಡಲೇ ವಿಚಾರಣೆಗೊಳಪಡಿಸಿದಾಗ ಆಕೆ ಬಳಿ ಇರುವುದು ನಕಲಿ ದಾಖಲೆಗಳು ಎಂಬುದು ಗೊತ್ತಾಗಿದೆ. ಹೀಗಾಗಿ, ಆಕೆಯ ವಿರುದ್ಧ ಎಫ್‌ಆರ್‌ಆರ್‌ಒ ಅಧಿಕಾರಿಗಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅನಂತರ ಆಕೆ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದಳು. ಒಂದೂವರೆ ವರ್ಷದ ಬಳಿಕ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಈಕೆಯನ್ನು ಮದುವೆಯಾಗಿರುವ ನಿತಿನ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.