Advertisement

ಸಮುದಾಯದಲ್ಲಿ ಬೆರೆತರೆ ಕಥೆ ಸೃಷ್ಟಿ

03:37 PM Mar 31, 2018 | |

ರಾಯಚೂರು: ಯಾವುದೇ ಸಾಹಿತಿ ಒಂದು ಕೃತಿ ರಚಿಸುವ ಮುನ್ನ ಪರಿಸರದೊಂದಿಗೆ ಬೆರೆಯಬೇಕು. ಅಂತರಾತ್ಮದಲ್ಲಿ ಪರಿಸರದೊಂದಿಗೆ ಸಂವಾದ ನಡೆಸಿದಾಗ ಕಥೆ ಸೃಷ್ಟಿ ಸಾಧ್ಯ ಎಂದು ಮೈಸೂರಿನ ಹಿರಿಯ ಸಾಹಿತಿ ಜಿ.ಪಿ.ಬಸವರಾಜ ಹೇಳಿದರು.

Advertisement

ನಗರದ ಕೃಷಿ ತಾಂತ್ರಿಕ ಕಾಲೇಜಿನ ಸೆಮಿನಾರ್‌ ಹಾಲ್‌ ನಲ್ಲಿ ಕಸಾಪ ಜಿಲ್ಲಾ ಘಟಕದಿಂದ ಹೈ-ಕ ಭಾಗದ ಯುವ ಕಥೆಗಾರರಿಗಾಗಿ ಹಮ್ಮಿಕೊಂಡ ಎರಡು ದಿನಗಳ ಸಣ್ಣ ಕಥೆಗಳ ಕಥನ ಮಾದರಿಯ ಕಥಾ ಕಮ್ಮಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಏಕಾಂತದಲ್ಲಿ ಕುಳಿತು ಕಥೆ ಬರೆಯಬಹುದೇ ವಿನಃ ಶೂನ್ಯದಲ್ಲಿ ಕುಳಿತರೆ ಕಥೆ ಸೃಷ್ಟಿಸಲು ಸಾಧ್ಯವಿಲ್ಲ. ನೆಲ, ಪರಿಸರ ಹಾಗೂ ಸಮುದಾಯದೊಂದಿಗೆ ಮುಖಾಮುಖೀಯಾದಾಗ ಮಾತ್ರ ಕಥೆ ಹುಟ್ಟಲು ಸಾಧ್ಯ. ನೆಲದ ಭಾಷೆ, ವೈಚಾರಿಕತೆ, ಸಾಮಾಜಿಕ ಒತ್ತಡಗಳಿಗೆ ಮುಖಾಮುಖೀಯಾದಾಗ ಮಾತ್ರ ಕಥೆ ಹುಟ್ಟಲು ಸಾಧ್ಯ ಎಂದರು.

118 ವರ್ಷಗಳ ಹಿಂದೆ ಹುಟ್ಟಿದ ಕಥೆಯನ್ನು ಪ್ರಬಂಧದ ಆಚೆಗೆ ನೋಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಥೆ ಮತ್ತು ಪ್ರಬಂಧಗಳ ನಡುವೆ ತೆಳುವಾದ ಗೆರೆ ಮಾತ್ರ ಕಂಡು ಬರುತ್ತಿದೆ. ರಾಜ್ಯದಲ್ಲಿನ ಪ್ರಮುಖ ಕಥೆಗಾರರನ್ನು ನೋಡಿದಾಗ ಈ ಭಾಗದವರೇ ಕಂಡು ಬರುತ್ತಿರುವುದಕ್ಕೆ ಇಲ್ಲಿಯ ಪರಿಸರವೇ ಕಾರಣವಾಗಿದೆ ಎಂದರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ| ಅಮರೇಶ ನುಗಡೋಣಿ ಮಾತನಾಡಿ, ಕಥೆಯ ರಚನೆ ಮತ್ತು ರೂಪದ ಬಗ್ಗೆ ಮೊದಲು ಆಲೋಚಿಸಬೇಕು. ಕಥೆಯ ಬಗ್ಗೆ ಆಲೋಚಿಸುವಾಗ ಹೇಗೆ ಆರಂಭಿಸಬೇಕು, ಕೊನೆಗಾಣಿಸಬೇಕು ಎನ್ನುವ ಗೊಂದಲವಿರುತ್ತದೆ. ಕಥೆಯ ಮಾದರಿ ಸೃಷ್ಟಿಸಿದಾಗ ಮಾತ್ರ ಕಥೆ, ಪಾತ್ರ, ಸನ್ನಿವೇಶಗಳು ಹುಟ್ಟುತ್ತವೆ ಎಂದರು.

ದುಃಖ, ಬಡತನ ಮತ್ತು ನೋವು ಇದ್ದಲ್ಲಿ ಕಥೆ ಹುಟ್ಟುತ್ತದೆ. ಬರವಣಿಗೆ, ಬದುಕು ಬೇರೆಯಲ್ಲ. ಬರವಣಿಗೆ ಎನ್ನುವುದು ಚಿಂತನಾ ಕ್ರಮವಾಗಿದ್ದು, ಬೇರೆಯವರಿಗಿಂತ ಭಿನ್ನವಾಗಿ ಯೋಚಿಸಿದಾಗ ಮಾತ್ರ ಕಥೆಯಲ್ಲಿ ಹೊಸತನ ಕಾಣಲು ಸಾಧ್ಯ ಎಂದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಕುಮಟಾದ ಸಾಹಿತಿ ಶ್ರೀಧರ ಬಳಿಗಾರ, ಕಸಾಪ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಜೆ.ಎಸ್‌.ಈರಣ್ಣ, ಶಿಬಿರದ ಸಂಚಾಲಕ ಡಾ| ದಸ್ತಗೀರಸಾಬ್‌ ದಿನ್ನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.