ಕೂಡ್ಲಿಗಿ: ಬಡತನ,ಹಸಿವು ಹಲವು ಪಾಠಗಳನ್ನು ಕಲಿಸುತ್ತವೆ. ಅದರಂತೆ ನಮ್ಮ ಅವಶ್ಯಕತೆಗಳು ಹೊಸ ದಾರಿಗಳನ್ನು ಸೃಷ್ಟಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಯಾವುದು ಅಸಾಧ್ಯ ಎಂದು ಕೈಚಲ್ಲಿ ಕೂರಬೇಡಿ. ಆತ್ಮವಿಶ್ವಾಸದಿಂದ ಪ್ರಯತ್ನಿಸಬೇಕೆಂದು ಮುಖ್ಯ ಶಿಕ್ಷಕ ಮೈಲೇಶ್ ಬೇವೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಚೌಡಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕೊರತೆಯಿಂದ ಪಾಠಗಳನ್ನು ಕಲಿಯಬೇಕಿದೆ. ಸೌಲಭ್ಯಗಳು ಇಲ್ಲ ಎಂದು ಬೇರೆಯವರನ್ನು ದೂಷಿಸುವ ಬದಲು ನಿಮ್ಮಲ್ಲಿಯ ಆತ್ಮವಿಶ್ವಾಸದ ಮೂಲಕ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆ ಎಂದರೆ ಹಬ್ಬದ ರೀತಿ ತಯಾರಾಗಿ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮೊದಲ ಮೆಟ್ಟಿಲಾಗಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹದವಾದ ವಯಸ್ಸಿನಲ್ಲಿ ಎಡವದೆ ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳಲು ಶಿಕ್ಷಣದ ಮೂಲಕ ಭದ್ರವಾದ ಬುನಾದಿ ಹಾಕಿಕೊಳ್ಳಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿ ಪಿ.ರಾಜಶೇಖರ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕಾದರೆ ಯಾವುದೇ ವಿಷ್ಯಯದ ಬಗ್ಗೆ ಆಸಕ್ತಿದಾಯಕ ಕಲಿಕೆ ಮುಖ್ಯವಾಗಿದೆ. ಇಚ್ಛಾಶಕ್ತಿ ಮೂಲಕ ಕಲಿಕೆ ಪ್ರಕ್ರಿಯೆಯಲ್ಲಿ ಮಕ್ಕಳು ಪಾಲ್ಗೊಂಡರೆ ವಿಷಯದ ಆಳಕ್ಕೆ ಹೋಗಬಹುದು. ಈ ಮೂಲಕ ವಿಷಯದ ಬಗ್ಗೆ ಸಮಗ್ರ ಅರಿವು ದೊರೆಯುತ್ತದೆ. ಸಮಾಜ, ಕನ್ನಡ ಮುಂತಾದ ವಿಷಯಗಳ ಬಗ್ಗೆ ಸಮಾನ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುವ ಮೂಲಕ ವಿಷಯವನ್ನು ಪುನರ್ ಮನನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಗಣಿತ ವಿಜ್ಞಾನ ವಿಷಯಗಳಲ್ಲಿ ಬರಹ, ಕ್ಲಿಷ್ಟ ಸಮಸ್ಯೆ ಸರಳೀಕರಣಗೊಳಿಸುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಗೊತ್ತಿಲ್ಲದ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಈ ಮೂಲಕ ತಮ್ಮ ಗೊಂದಲ ನಿವಾರಿಸಿಕೊಳ್ಳಬೇಕಿದೆ. ಪರೀಕ್ಷೆಯಲ್ಲಿ ಮೊದಲು ಬರವಣಿಗೆ ಸ್ಫುಟವಾಗಿರಬೇಕು. ಸಮಯದ ಪ್ರಜ್ಞೆ, ಪ್ರಶ್ನೆಗಳ ಸಂಖ್ಯೆ ಸರಿಯಾಗಿ ಬರೆಯುವುದು ಸೇರಿದಂತೆ ಪ್ರಶ್ನೆಗಳಿಗೆ ಅರ್ಥೈಸಿಕೊಂಡು ಉತ್ತರ ಬರೆಯಬೇಕು. ಅವಸರಕ್ಕಿಂತ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವುದು ಮುಖ್ಯ ಎಂದರು.
ಸಹ ಶಿಕ್ಷಕರಾದ ಹೊನ್ನಳ್ಳಿ ಕೊಟ್ರೇಶ್, ಶರಣಬಸಪ್ಪ, ಕೊಟ್ರಪ್ಪ, ಕೊಟ್ರೇಶ್, ನಾಗಶ್ರೀ, ಚನ್ನಬಸಮ್ಮ, ಯುಗಚಂದ್ರ, ಅಭಿಷೇಕ್ ಇತರರು ಉಪಸ್ಥಿತರಿದ್ದರು.