Advertisement

ಸೃಷ್ಟಿಸಿದೆ ಸಾಮಾಜಿಕ, ಆರ್ಥಿಕ ತಲ್ಲಣ! ಚೀನದಲ್ಲೀಗ ಮಾನವ ಸಂಪನ್ಮೂಲದ ಕೊರತೆ

12:59 AM Jan 29, 2023 | Team Udayavani |

ಚೀನದ ಉದ್ಯೋಗ ರಂಗವೀಗ ಯುವ ಪೀಳಿಗೆಯ ಕೊರತೆಯನ್ನು ಎದುರಿಸುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಹಿರಿಯರೇ ತುಂಬಿಕೊಂಡಿ ದ್ದಾರೆ. ಸಾರ್ವಜನಿಕ ಸೇವೆಗೆ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಉತ್ಪಾದನೆಯಲ್ಲಿ ಕುಂಠಿತ, ಅಭಿವೃದ್ಧಿಯಲ್ಲಿ ಹಿನ್ನಡೆಗೆ ಇದು ಕಾರಣವಾಗುತ್ತಿದೆ. ಒಟ್ಟಿನಲ್ಲಿ ಮಾನವ ಸಂಪನ್ಮೂಲದ ಕೊರತೆ ಚೀನದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತಲ್ಲಣವನ್ನುಂಟು ಮಾಡಿದ್ದು ಜಾಗತಿಕ ಆರ್ಥವ್ಯವಸ್ಥೆಯ ಮೇಲೂ ಇದು ಗಂಭೀರ ಪರಿಣಾಮ ಬೀರಲಿದೆ.

Advertisement

ಏನು?
ಜನನ ಪ್ರಮಾಣ ಇಳಿಮುಖವಾಗಿ ರುವ ಕ್ಯೂಬಾ, ಜರ್ಮನಿ, ಹಂಗೇರಿ, ಜಪಾನ್‌ ದೇಶಗಳ ಸಾಲಿಗೆ ಈಗ ಹೊಸ ಸೇರ್ಪಡೆ ಚೀನ. ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದ ರಾಷ್ಟ್ರವಾಗಿದ್ದ ಚೀನದಲ್ಲಿ ಸುಮಾರು ಆರು ದಶಕಗಳ ಬಳಿಕ ಮೊದಲ ಬಾರಿಗೆ ಜನನ ಪ್ರಮಾಣ ಇಳಿಮುಖವಾಗುತ್ತಿದೆ. ಇದರ ಪರಿಣಾಮವನ್ನು ಚೀನ ಮಾತ್ರವಲ್ಲ ವಿಶ್ವವೇ ಎದುರಿಸಬೇಕಾಗಿ ಬರಲಿದೆ.

ಹೇಗೆ?
ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯಾಗಿ ಜಾಗತಿಕ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಚೀನ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕ ದಿಂದ ಚೇತರಿಸಿಕೊಳ್ಳುತ್ತಿರುವ ವಿಶ್ವಕ್ಕೆ ಇದು ಬಹುದೊಡ್ಡ ಹೊಡೆತವಾಗಲಿದೆ. ಒಂದು ದೇಶದಲ್ಲಿ ಜನಸಂಖ್ಯೆ ವೃದ್ಧಿ ಪ್ರಮಾಣ ಕಡಿಮೆಯಾದಾಗ ಕಾರ್ಮಿಕ ವೆಚ್ಚ ದುಬಾರಿ ಯಾಗುತ್ತದೆ. ಉತ್ಪಾದನೆ ಕುಂಠಿತಗೊಳುತ್ತದೆ. ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಹೆಚ್ಚಿನ ವೆಚ್ಚ ಮಾಡಬೇಕಾಗುತ್ತದೆ.

ಕಾರಣ?
ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಚೀನ ಅನುಷ್ಠಾನಗೊಳಿಸಿದ ಬಿಗಿ ನಿಯಮಗಳು ಈಗ ಅದರ ಪಾಲಿಗೆ ಮುಳುವಾಗಿದೆ. “ಒಂದು ಕುಟುಂಬಕ್ಕೆ ಒಂದೇ ಮಗು’ ಯೋಜನೆಯು ಏಕಾಏಕಿ ಚೀನದ ಜನಸಂಖ್ಯೆ ಕುಸಿತಕ್ಕೆ ಪ್ರಮುಖ ಕಾರಣ. ಬಿಗಿ ನಿಯಮದಿಂದಾಗಿ 35 ವರ್ಷದೊಳ ಗಿನ ಹೆಚ್ಚಿನ ದಂಪತಿ ಒಂದೇ ಮಗುವನ್ನು ಪಡೆಯಲಿಚ್ಛಿಸಿದರು. ನೀತಿಗೆ ವಿರುದ್ಧವಾಗಿ ಹೋದ ಮಹಿಳೆಯರಿಗೆ ಬಲವಂತವಾಗಿ ಗರ್ಭಪಾತ, ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿತ್ತು ಮಾತ್ರವಲ್ಲದೇ ದೇಶದಿಂದಲೇ ಹೊರಹಾಕಲಾಗುತ್ತಿತ್ತು.

ಈಗಿನ ಸ್ಥಿತಿ?
ದುಬಾರಿಯಾಗಿರುವ ಜೀವನ ವೆಚ್ಚ ನಿರ್ವಹಣೆಗಾಗಿ ಇಲ್ಲಿನ ಹೆಚ್ಚಿನ ಯುವಕ, ಯುವತಿಯರು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ವಿದ್ಯಾವಂತ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಜೀವನ ಮತ್ತು ಉದ್ಯೋಗ ಭವಿಷ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮದುವೆಯನ್ನು ಮುಂದೂಡುತ್ತಿದ್ದಾರೆ ಮತ್ತು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿದ್ದಾರೆ. ಕಚೇರಿಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಒಂದು ಮಗುವಿನ ಪಾಲನೆಯೇ ಕಷ್ಟವಾಗುತ್ತಿದೆ.

Advertisement

ಎಲ್ಲಿ?
ಚೀನ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಪ್ರಕಾರ 2022ರ ಶೂನ್ಯ ಕೋವಿಡ್‌ ನೀತಿಯು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. 2022ರಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಗುರಿ ಶೇ.5.5 ಆಗಿದ್ದರೂ ಕೇವಲ ಶೇ.3ರಷ್ಟಾಗಿದೆ. ಇದು ಮುಂದು ವರಿದು ದೇಶದ ಆರ್ಥಿಕ ಕುಸಿತ, ಉತ್ಪಾದನೆ ಯಲ್ಲಿ ಇಳಿಕೆ, ವಿಶ್ವವಿದ್ಯಾನಿಲಯ ಗಳ ದಿವಾಳಿತನಕ್ಕೆ ಕಾರಣವಾಗುತ್ತದೆ. ಮಾತ್ರ ವಲ್ಲದೇ ಯುಎಸ್‌ ಮತ್ತು ಯುರೋಪಿ ಯನ್‌ ಯೂನಿಯನ್‌ ದೇಶಗಳಲ್ಲಿ ಹಣದುಬ್ಬರವನ್ನು ಸೃಷ್ಟಿಸುತ್ತದೆ.

ಯಾವ ರೀತಿ?
ಚೀನ ಪ್ರಸ್ತುತ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಎದುರು ನೋಡುತ್ತಿದೆ. ಸ್ಪರ್ಧಾತ್ಮಕ ರೀತಿಯಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ವೆಚ್ಚವನ್ನು ನಿಭಾಯಿಸುವುದು ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಕಷ್ಟವಾಗಲಿದೆ. ಒಂದು ದೇಶದ ಜನಸಂಖ್ಯೆ ಕಡಿಮೆಯಾಗುತ್ತಲೇ ಅಲ್ಲಿ ಕೆಲವೊಂದು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಚೀನದಲ್ಲಿ ಇದು ಈಗಾಗಲೇ ಉದ್ಭವವಾಗಿದೆ. ದೇಶದಲ್ಲಿ ಹಿರಿಯರ ಪ್ರಮಾಣ ಅದರಲ್ಲೂ 65 ವರ್ಷ ಮೇಲ್ಪಟ್ಟವರೇ ಹೆಚ್ಚಾಗುತ್ತಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯುವ ಜನರ ಮೇಲೆ ಒತ್ತಡ ಹೆಚ್ಚುತ್ತಿದೆ. ಪ್ರಸ್ತುತ ಚೀನದ ಒಟ್ಟು ಜನಸಂಖ್ಯೆಯಲ್ಲಿ ಐದನೇ ಒಂದು ಭಾಗದಷ್ಟು ಹಿರಿಯ ನಾಗರಿಕರೇ ತುಂಬಿದ್ದಾರೆ.

ಹಿಂದೆ ಏನಾಗಿತ್ತು?
1960ರ ಬಳಿಕ ಮೊದಲ ಬಾರಿಗೆ ಇಲ್ಲಿ ಜನನ ಪ್ರಮಾಣ ಇಳಿಕೆಯಾಗುತ್ತಿರುವುದು ದಾಖಲಾಗಿದೆ. ದೇಶದಲ್ಲಿ 2022ರಲ್ಲಿ 1.411 ಬಿಲಿಯನ್‌ ಜನಸಂಖ್ಯೆ ದಾಖಲಾಗಿದ್ದು, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ 8,50,000 ದಷ್ಟು ಕಡಿಮೆಯಾಗಿದೆ. 1961ರಲ್ಲೊಮ್ಮೆ ಸಾಮೂಹಿಕ ಕೃಷಿ ನೀತಿ ಮತ್ತು ಕೈಗಾರಿಕೀಕರಣದ ವಿನಾಶಕಾರಿ ನಿರ್ಧಾರದಿಂದಾಗಿ ಚೀನದಲ್ಲಿ ಆಹಾರದ ಕೊರತೆ ಉಂಟಾಗಿ ಸುಮಾರು 10 ಮಿಲಿಯನ್‌ ಜನರು ಸಾವಿಗೀಡಾಗಿದ್ದರು. ಇಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ 20 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತದೆ.

ಈಗ ಏನಾಗಿದೆ?
ಕಾರ್ಮಿಕರ ಪೂರೈಕೆಯಲ್ಲಿ ಈಗಲೇ ವ್ಯತ್ಯಯ ಕಾಣಿಸಿಕೊಂಡಿದೆ. ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಉತ್ಪಾದನೆ ಹೆಚ್ಚಿಸುವುದು ಅನಿವಾರ್ಯವಾಗುತ್ತಿದೆ. ಚೀನದ ಅರ್ಥವ್ಯವಸ್ಥೆಯು 2022ರಲ್ಲಿ ಶೇ.3ರಷ್ಟು ವಿಸ್ತರಣೆ ಮಾಡಲು ಹೋಗಿ ಸಂಕಷ್ಟಕ್ಕೆ ತಲುಪಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅತ್ಯಂತ ಕಠಿನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದ ಆಸ್ತಿ ಮಾರುಕಟ್ಟೆ ಮೌಲ್ಯ ಐತಿಹಾಸಿಕ ಪ್ರಮಾಣದಲ್ಲಿ ಕುಸಿತವಾಗಿದ್ದು ಚೀನದ ಪಾಲಿಗೆ ವರದಾನವಾಯಿತಾದರೂ ಬಾಹ್ಯ ಪ್ರಯಾಣ ನಿರ್ಬಂಧ ಸಹಿತ ಹಲವು ಕಠಿನ ನಿಯಮಗಳಿಂದ ಕಾರ್ಯಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿದೆ. ಇದು ದೇಶದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಒತ್ತಡ ಸೃಷ್ಟಿಸುತ್ತಿದೆ. ಯಾಕೆಂದರೆ ಪಿಂಚಣಿ, ಆರೋಗ್ಯ ರಕ್ಷಣೆಯಂಥ ಕಾರ್ಯಗಳಿಗೆ ಧನಸಹಾಯ ಮಾಡುವ ಕಾರ್ಮಿಕರು ಕಡಿಮೆಯಾಗಿದ್ದಾರೆ. ವೃದ್ಧರನ್ನು ಸಲಹುವುದು ಕಷ್ಟವಾಗುತ್ತಿದೆ. ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ.

ಏನು ಕ್ರಮ?
2015ರಲ್ಲೇ ದೇಶದಲ್ಲಿ ಜನನ ಪ್ರಮಾಣ ಇಳಿಮುಖವಾಗುತ್ತಿರುವ ಸೂಚನೆ ಸಿಕ್ಕಿತ್ತು. ಅನಂತರ ದಂಪತಿಗೆ ಎರಡು ಮಕ್ಕಳನ್ನು ಹಾಗೂ 2021ರಿಂದ ಮೂರು ಮಕ್ಕಳನ್ನು ಹೊಂದುವ ಅವಕಾಶ ನೀಡಲಾಯಿತು. ಯೋಜನೆ ಬದಲಾಯಿಸಿ ಮತ್ತು ಸರಕಾರ ಆರ್ಥಿಕ ಪ್ರೋತ್ಸಾಹ ನೀಡಲು ಪ್ರಾರಂಭಿಸಿದರೂ ದುಬಾರಿ ಜೀವನ ಮತ್ತು ಶಿಕ್ಷಣ ವೆಚ್ಚ, ಗಗನಕ್ಕೇರುತ್ತಿರುವ ಆಸ್ತಿ ಬೆಲೆಗಳು, ನಗರಗಳಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನರು ನಿರ್ದಿಷ್ಟ ಆದಾಯ, ಉದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ.

ಮುಂದೇನು?
1750ರಲ್ಲಿ ಚೀನ ದೇಶ 225 ಮಿಲಿಯನ್‌ ಅಥವಾ ವಿಶ್ವದ ಶೇ.28ರಷ್ಟು ಜನಸಂಖ್ಯೆಯನ್ನು ಹೊಂದಿತ್ತು. 1950ರ ವರೆಗೂ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿತ್ತು. 1961ರ ವರೆಗೆ ಇಲ್ಲಿನ ಜನನ ಪ್ರಮಾಣದಲ್ಲಿ ಇಳಿಮುಖವಾಗಿರಲಿಲ್ಲ. ಆದರೆ ಅನಂತರ ಕ್ಷಿಪ್ರವಾಗಿ ಕಡಿಮೆಯಾಗುತ್ತಿದೆ. ಪ್ರತೀ ವರ್ಷ ಸುಮಾರು ಶೇ.1.1 ಪ್ರಮಾಣದಲ್ಲಿ ಅಂದರೆ ಸುಮಾರು 15 ಮಿಲಿಯನ್‌ ಇಲ್ಲಿನ ಜನಸಂಖ್ಯೆ ಕಡಿಮೆಯಾಗಿದೆ. 2022ರಲ್ಲಿ ಇದು ಶೇ.0.06 ರಷ್ಟಾಗಿದ್ದರೂ 2100ರ ವೇಳೆಗೆ ಅದು 1.41 ಬಿಲಿಯನ್‌ನಿಂದ 600 ಮಿಲಿಯನ್‌ಗೆ ಜನಸಂಖ್ಯೆಯನ್ನು ಇಳಿಸುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಯಾಕೆ?
ಕಟ್ಟುನಿಟ್ಟಿನ ನಿಯಮದಿಂದಾಗಿ ವಿವಾಹ ಮತ್ತು ಕುಟುಂಬವನ್ನು ಹೊಂದುವ ಕುರಿತು ಯುವಜನರಲ್ಲಿ ಬದಲಾದ ಮನೋಭಾವದಿಂದ ಲಿಂಗ ಅಸಮಾನತೆ ಸೃಷ್ಟಿಯಾಗಿತ್ತು. ಕೋವಿಡ್‌- 19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಪರಿಣಾಮದಿಂದ ಜೀವನ ನಿರ್ವಹಣೆ ವೆಚ್ಚ ದುಬಾರಿ ಯಾಯಿತು. ಅದರಲ್ಲೂ ಮಕ್ಕಳ ಪಾಲನೆಯಲ್ಲಿ ವಿಶ್ವದಲ್ಲೇ ಚೀನ ದೇಶವು ದುಬಾರಿ ಎಂದು ಗುರುತಿಸಲ್ಪಟ್ಟಿದೆ. 2019ರ ವರೆಗೆ 18 ವರ್ಷದೊಳಗಿನ ಮಕ್ಕಳ ಪಾಲನೆಯ ಸರಾಸರಿ ವೆಚ್ಚ ಇಲ್ಲಿ 76,629 ಡಾಲರ್‌ಗಳಷ್ಟಾಗಿದೆ. ಹೀಗಾಗಿ ಚೀನದ ರಾಜಧಾನಿ ಬೀಜಿಂಗ್‌ನಲ್ಲಿ ಹೆಚ್ಚಿನ ಜನರು ಮಕ್ಕಳನ್ನು ಪಡೆಯಬೇಕೋ ಬೇಡವೋ ಎಂದೇ ಯೋಚಿಸುತ್ತಾರೆ.

ಭವಿಷ್ಯದ್ದೇ ಚಿಂತೆ
2022ರಲ್ಲಿ ಕಾರ್ಮಿಕ ಕ್ಷೇತ್ರದಲ್ಲಿ 16- 59 ವಯಸ್ಸಿನ 875 ಮಿಲಿಯನ್‌ ಜನರು ಕೆಲಸ ಮಾಡುತ್ತಿದ್ದರು. 2010ಕ್ಕೆ ಹೋಲಿಸಿದರೆ ಇಲ್ಲಿ ಸುಮಾರು 75 ಮಿಲಿಯನ್‌ ಜನರು ಕಡಿಮೆಯಾಗಿದ್ದಾರೆ. ಈಗ ದೇಶದಲ್ಲಿ ಸುಮಾರು 280 ಮಿಲಿಯನ್‌ ಜನರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ವರ್ಷಕ್ಕೆ 30 ಮಿಲಿಯನ್‌ ಜನರು ಹೆಚ್ಚಾದರೆ 2050ರ ವೇಳೆಗೆ ದೇಶದಲ್ಲಿ ಶೇ.35ರಷ್ಟು ಅಂದರೆ ಸರಿಸುಮಾರು 487 ಮಿಲಿಯನ್‌ ಜನರು 60 ವರ್ಷ ಮೇಲ್ಪಟ್ಟವರಾಗುತ್ತಾರೆ. ಹೆಚ್ಚಿನ ವೇತನ, ಉದ್ಯೋಗ ಭದ್ರತೆಯ ಕಾರಣದಿಂದ ಹೆಚ್ಚಿನವರು ಏಷ್ಯಾದ ದಕ್ಷಿಣ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ. 2050ರ ವೇಳೆಗೆ ದೇಶದ ಜಿಡಿಪಿಯಲ್ಲಿ ಶೇ.26ರಷ್ಟನ್ನು ಹಿರಿಯ ನಾಗರಿಕರ ಆರೋಗ್ಯ ಸೇವೆಗೆ ಮೀಸಲಿಡಬೇಕಾಗುತ್ತದೆ. ಈಗಾಗಲೇ ಚೀನ, ಜಪಾನ್‌ ದೇಶದ ಹಾದಿಯಲ್ಲಿದ್ದು ಜಿಡಿಪಿ ಮತ್ತು ಕಾರ್ಯಕ್ಷೇತ್ರದಲ್ಲಿ ದುಡಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಜನನ ಪ್ರಮಾಣ ಇಳಿಕೆ ಮತ್ತು ಹಿರಿಯ ನಾಗರಿಕರ ಹೆಚ್ಚಳದಿಂದ ಚೀನ 2020ರ ಬಳಿಕ ಆರ್ಥಿಕ ಸ್ಥಿತಿ, ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಜಪಾನ್‌ನಲ್ಲಿ 1990ರಲ್ಲಿ ಸೃಷ್ಟಿಯಾಗಿತ್ತು.

-ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next