Advertisement

ಜನಜೀವನ ಪ್ರತಿಬಿಂಬಿಸುವ ಕಾವ್ಯ ಸೃಷ್ಟಿಸಿ

10:06 PM Oct 02, 2019 | Lakshmi GovindaRaju |

ಮೈಸೂರು: ಕವಿಗಳು ತಮ್ಮ ಒಳಗಣ್ಣಿನಿಂದ ಸಮಾಜವನ್ನು ನೋಡುವ ಮೂಲಕ ಸಮಾಜ ಮುಖೀ ಹಾಗೂ ಸಾಮಾಜಿಕ ಕಾವ್ಯಗಳನ್ನು ಸೃಷ್ಟಿಸಬೇಕು ಎಂದು ಕವಿ ಡಾ. ದೊಡ್ಡರಂಗೇಗೌಡ ಹೇಳಿದರು. ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

Advertisement

ಕವಿಗಳಿಗೆ ಬರೆಯಲು ಸಾಕಷ್ಟು ವಸ್ತುವಿಷಯಗಳಿವೆ. ಪ್ರೀತಿ, ರಾಷ್ಟ್ರಪ್ರೇಮ, ತ್ಯಾಗ ಮೊದಲಾದ ವಿಚಾರಗಳಲ್ಲಿ ಸಾಕಷ್ಟು ಕವಿತೆ ಸೃಷ್ಟಿಯಾಗಿವೆ. ಮುಂದೆ ಕಾವ್ಯ ಸೃಷ್ಟಿಸುವವರು ಸಮಾಜದಲ್ಲಿರುವ ಅಸಮಾನತೆ, ಸಾಮಾಜಿಕ ಬದುಕು, ವ್ಯವಸ್ಥೆ, ಜನಜೀವನವನ್ನು ನೋಡಿ ಆ ಬಗ್ಗೆ ಸಮಾಜಮುಖೀಯಾದ ಸಾಮಾಜಿಕ ಕಾವ್ಯಗಳನ್ನು ಸೃಷ್ಟಿಸಬೇಕು. ಈ ಕೆಲಸವನ್ನು ಸರ್ವಜ್ಞ ಬಹಳ ಹಿಂದೆಯೇ ಮಾಡಿದ್ದ. ತನಗನ್ನಿಸಿದ್ದನ್ನು ನೇರವಾಗಿ ನಿಷೂuರದಿಂದಲೇ ಹೇಳುವ ಮೂಲಕ ಸಮಾಜದ ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ. ಆತ ನಿಮಗೆಲ್ಲ ಆದರ್ಶವಾಗಲಿ ಎಂದು ಹೇಳಿದರು.

ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಕೆನೆ ಮೈಸೂರು. ಕಲೆ, ಸಾಹಿತ್ಯ ಹಾಗೂ ಜಾನಪದದ ಆಗರ ಮೈಸೂರಾಗಿದೆ. ಇಂತಹ ನಾಡಿನ ದಸರಾದಲ್ಲಿ ಕವಿಗಳನ್ನು ಕರೆದು ಕವಿತೆ ವಾಚನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿ. ನಾವು ನೋಡುವ ದೃಷ್ಟಿಕೋನ ಬದಲಾದರೆ ಎಲ್ಲವೂ ಕವಿತೆಯಂತೆ ಕಾಣಲಿದೆ. ದೃಷ್ಟಿಯಂತೆ ಸೃಷ್ಟಿ. ಜಾನಪದ ಸಾಹಿತ್ಯ ಗ್ರಾಮೀಣ ಜನರ ಬದುಕನ್ನು ಹಾಗೂ ದೇವರು, ಧರ್ಮ, ವೃತ್ತಿಗಳನ್ನು ಅನಾವರಣ ಮಾಡಿರುವಷ್ಟು ಮತ್ಯಾರು ಮಾಡಿಲ್ಲ ಎಂದರು.

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ಕುವೆಂಪು ಮತ್ತು ಬೇಂದ್ರೆ ಮೊದಲಿಗರು. ಅವರು ತಮ್ಮ ಸಾಹಿತ್ಯದಲ್ಲಿ 30 ಸಾವಿರ ಪದಗಳನ್ನು ಬಳಸಿರುವುದು ವಿಶೇಷ. ಇಂತಹ ಮಹಾನಿಯರು ಸಿಗುವುದು ಅಪರೂಪ. ಇಂದು ನಮ್ಮ ಸಮಾಜ ದಾರಿ ತಪ್ಪುತ್ತಿದೆ. ಎಳೆಯ ಮಕ್ಕಳು ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಮೊಬೈಲನ್ನು ಒಳ್ಳೆಯದಕ್ಕೆ ಬಳಸಿಕೊಳ್ಳುವ ಬದಲಾಗಿ ಕೆಟ್ಟದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅದರಲ್ಲಿ ಕೆಟ್ಟದನ್ನು ಹುಡುಕುವ ಪ್ರವೃತ್ತಿ ಹೆಚ್ಚುತ್ತಿದೆ. ಯುವ ಜನಾಂಗದಲ್ಲಿ ಹಿಂಸೆಗೆ ಪ್ರೇರಣೆ ನೀಡುತ್ತಿದೆ. ಇಂತಹ ಹೊತ್ತಿನಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಕವಿಗಳಿಂದ ಮಾತ್ರ ಸಾಧ್ಯ.

ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಲು ಕವಿಗಳು ಲೇಖನಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಇಂದು ಸಮಾಜ ಅಭದ್ರವಾಗುತ್ತಿದೆ. ಅವಿಭಕ್ತ ಕುಟುಂಬದಿಂದ-ವಿಭಕ್ತ ಕುಟುಂಬಕ್ಕೆ ಪರಿವರ್ತನೆಯಾದ ಕುಟುಂಬ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಸ್ವಾರ್ಥ ಹೆಚ್ಚಾಗಿದೆ. ಎಲ್ಲರೂ ಹಣದ ಹಿಂದೆ ಓಡುತ್ತಿದ್ದಾರೆ. ಇಂದು ಪ್ರೀತಿಯೂ ವ್ಯವಹಾರವಾಗಿದೆ. ಕೆಲವು ದಿನಗಳ ಮಟ್ಟಿಗೆ ಲಿವಿಂಗ್‌ ಟ್ಯುಗೆದರ್‌ ಎಂಬ ಹೆಸರಿನಲ್ಲಿ ಸಮಾಜ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ನಂ.1 ಮಾಡಲಿದ್ದಾರೆ ಮೋದಿ: ಇಂದು ಅಮೆರಿಕ ತಾನೇ ದೊಡ್ಡ ರಾಷ್ಟ್ರ ಎಂದು ಬೀಗುತ್ತಿದೆ. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿಯೇ ನಂಬರ್‌ 1 ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶಾಸಕ ಎಲ್‌. ನಾಗೇಂದ್ರ, ಸಾಹಿತಿ ಜೋಗಿ ಸೇರಿದಂತೆ ಮತ್ತಿತರರು ಇದ್ದರು.

ಕವನ ವಾಚನ: ದಸರಾ ಕವಿಗೋಷ್ಠಿಯ ಉದ್ಘಾಟಕರು, ಕವಿಗಳು ಅತಿವೃಷ್ಟಿಯಿಂದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಪ್ರಕೃತಿ ಏಕೆ ಮುನಿಯಿತು ಎಂಬುದನ್ನು ತಮ್ಮ ಕವನದ ಮೂಲಕ ಕಟ್ಟಿಕೊಟ್ಟರು. ಮೊದಲ ದಿನ ವಿಸ್ಮಿತ ಕವಿಗೋಷ್ಠಿಯಲ್ಲಿ ವಿಭಿನ್ನ ಕ್ಷೇತ್ರ ಪ್ರತಿಭೆಗಳು, ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಪೊಲೀಸ್‌, ಅಧಿಕಾರಿಗಳು, ಪತ್ರಕರ್ತರು, ಕಿರುತೆರೆ ಕಲಾವಿದರು, ಐಟಿ-ಬಿಟಿ ಉದ್ಯೋಗಿಗಳು ಕವಿತೆ ವಾಚನ ಮಾಡಿ ತಮ್ಮ ಒತ್ತಡ ಜೀವನದಲ್ಲೂ ತಾವು ರಚಿಸಿದ ಕವಿತೆ ವಾಚಿಸಿ ಮೆಚ್ಚುಗಗೆ ಪಾತ್ರವಾದರು.

ಪೂರ್ವಗ್ರಹವಿಲ್ಲದೇ ಭೈರಪ್ಪ ಬರಹ ಓದಿ: ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಿದ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅದ್ವಿತಿಯವಾದದ್ದು. ಯಾವ ಪೂರ್ವಗ್ರಹ ಪೀಡಿತರಾಗದೇ ಭೈರಪ್ಪ ಅವರ ಬರಹವನ್ನು ಓದಿದರೆ ಅವರ ಕೊಡುಗೆ ಮತ್ತು ಪಾಂಡಿತ್ಯ ಅರಿವಾಗುತ್ತದೆ ಎಂದು ಕವಿ ಡಾ. ದೊಡ್ಡರಂಗೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next