Advertisement

ಆಶಾ-ಆರೋಗ್ಯ ಸಿಬ್ಬಂದಿಯ ತಂಡ ರಚಿಸಿ

01:09 PM Apr 23, 2020 | Team Udayavani |

ಧಾರವಾಡ: ಜಿಲ್ಲೆಯ ಸರ್ಕಾರದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಆರೋಗ್ಯ ಸೇವೆ ಪಡೆಯುತ್ತಿರುವವರ ದಾಖಲೆಗಳು ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ತೀವ್ರ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಮತ್ತು ಜ್ವರಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವೈದ್ಯಕೀಯ ಸಲಹೆ ಪಡೆದವರ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನು ರಚಿಸಬೇಕು ಎಂದು ಡಿಸಿ ದೀಪಾ ಚೋಳನ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾದ 1750 ಆಸ್ಪತ್ರೆ-ಕ್ಲಿನಿಕ್‌ಗಳಿವೆ. ಅವುಗಳಲ್ಲಿ ಸುಮಾರು 1500 ರಷ್ಟು ಕಾರ್ಯ ನಿರ್ವಹಿಸುತ್ತಿವೆ ಎಂಬ ಮಾಹಿತಿ ಇದೆ. ಪ್ರಸಕ್ತ ಲಾಕ್‌ಡೌನ್‌ ಸಂದರ್ಭದಲ್ಲಿ ಈ ಖಾಸಗಿ ಆಸ್ಪತ್ರೆಗಳಲ್ಲಿ ವಾಸ್ತವವಾಗಿ ಎಷ್ಟು ಸಾರ್ವಜನಿಕರು ಚಿಕಿತ್ಸೆ ಪಡೆದಿದ್ದಾರೆಂಬ ಮಾಹಿತಿ ಸಂಗ್ರಹಣೆ ಅಧಿಕೃತವಾಗಿ ನಡೆಯಬೇಕು. ಈ ಆಸ್ಪತ್ರೆಗಳಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ ತೀವ್ರ ಉಸಿರಾಟದ ತೊಂದರೆ, ಐಎಲ್‌ಐ ಸಂಬಂ ಧಿತ ಕೆಮ್ಮು, ನೆಗಡಿ, ಜ್ವರಕ್ಕೆ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ ವೈದ್ಯರು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದ್ದರೆ ಆ ಕುರಿತ ವಿವರಗಳನ್ನು ಸಂಗ್ರಹಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಷಯ, ಕುಷ್ಠರೋಗ, ಮತ್ತಿತರ ಖಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ಗುಂಪಿನ ಸುಮಾರು 1,06,000 ಜನರಿದ್ದಾರೆ. ಆಶಾ ಕಾರ್ಯಕರ್ತೆಯರು ಅವರೆಲ್ಲರನ್ನೂ ಖುದ್ದಾಗಿ ಭೇಟಿ ಮಾಡಿ ಅಗತ್ಯ ಔಷಧ, ಸಲಹೆ ದೊರೆತಿದೆಯೇ ಎಂಬುದರ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರಿಗೆ ಈ ಕುರಿತು ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕು. ಸಮೀಕ್ಷೆಯ ಮಾಹಿತಿ ಸಂಗ್ರಹಣೆಗೆ ಸಮರ್ಪಕವಾದ ನಮೂನೆ ಸಿದ್ಧಪಡಿಸಿ ಕೊಡಬೇಕು. ಇದರಲ್ಲಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಮಾಹಿತಿ ದಾಖಲಿಸಿ ಮೇಲಧಿಕಾರಿಗಳಿಗೆ ಕೂಡಲೇ ತಿಳಿಸಲು ಸೂಚನೆ ನೀಡಬೇಕು ಎಂದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಔಷಧ ವ್ಯಾಪಾರಿಗಳು ಔಷಧ ನಿಯಂತ್ರಣ ನಿಯಮ ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಯಬೇಕು. ಜ್ವರ-ಕೆಮ್ಮು ಇರುವವರಿಗೆ ವೈದ್ಯರ ಸಲಹೆ ಮೇರೆಗೆ ಔಷಧ ವಿತರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಡಿ ಫಾರ್ಮಾ, ಬಿ ಫಾರ್ಮಾ ಪದವಿ ಪಡೆದ ಅರ್ಹರು ಫಾರ್ಮಸಿ ಅಂಗಡಿಗಳನ್ನು ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ|ಎಸ್‌.ಎಂ. ಹೊನಕೇರಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯರಿರುತ್ತಾರೆ. ಒಟ್ಟು 1025 ಆಶಾ ಕಾರ್ಯಕರ್ತೆಯರು ಸೇವೆ ನೀಡುತ್ತಿದ್ದಾರೆ. ನವಜಾತ ಶಿಶುಗಳಿಗೆ-ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಎಲ್ಲ ಲಸಿಕೆ-ಚುಚ್ಚುಮದ್ದುಗಳನ್ನು ಪ್ರತಿ ಗುರುವಾರ ಯಥಾ ರೀತಿ ಮುಂದುವರಿಸಲಾಗುವುದು. ಮಕ್ಕಳ ಆರೋಗ್ಯ ಆಧರಿಸಿ ಲಸಿಕೆ ನೀಡಲಾಗುವುದು ಎಂದರು.

Advertisement

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|ಸುಜಾತಾ ಹಸವಿಮಠ, ಡಾ|ಶಶಿ ಪಾಟೀಲ, ಡಾ|ಸಂಪತ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next