ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿದ್ಧತೆಗಳನ್ನು ಚುರುಕುಗೊಳಿಸಿರುವ ಆಯೋಗ, 3 ವರ್ಷಗಳಿಂದ ಜಿಲ್ಲಾ
ಕೇಂದ್ರ ಹಾಗೂ ತವರು ಜಿಲ್ಲೆಯಲ್ಲೇ ಕೆಲಸ ಮಾಡುತ್ತಿರುವ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲು ಸೂಚನೆ ನೀಡಿದೆ.
ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮಾರ್ಗಸೂಚಿ ಸುತ್ತೋಲೆ ರವಾನಿಸಿರುವ ಆಯೋಗ, ಕಳೆದ ನಾಲ್ಕು ವರ್ಷಗಳಲ್ಲಿ 2018 ಮೇ 31 ಕ್ಕೆ ಮೂರು ವರ್ಷ ಪೂರೈಸಲಿರುವ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ, ಚುನಾವಣಾ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಎತ್ತಂಗಡಿ ಮಾಡಲು ನಿರ್ದೇಶನ ನೀಡಿದೆ.
ಈ ಹಿಂದಿನ ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ,ಮತಗಟ್ಟೆ ಅಧಿಕಾರಿಯಾಗಿ, ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಅದಕ್ಕೂ ಮೇಲ್ಪಟ್ಟ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರು ಮತ್ತೆ ಅಲ್ಲೇ ನಿಯೋಜನೆಯಾಗದಂತೆ ನೋಡಿಕೊಳ್ಳುವಂತೆಯೂ ತಿಳಿಸಲಾಗಿದೆ. ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ,ತಹಸೀಲ್ದಾರ್, ಪೊಲೀಸ್ ಐಜಿ, ಡಿಐಜಿ, ಎಸ್‌ಪಿ, ಡಿವೈಎಸ್‌ಪಿಗೂ ಇದು ಅನ್ವಯವಾಗಲಿದೆ. ಕ್ರಿಮಿನಲ್ ಪ್ರಕರಣಗಳ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವೈದ್ಯರು, ಇಂಜಿನಿಯರುಗಳು, ಶಿಕ್ಷಕರು, ಪ್ರಾಂಶುಪಾಲರಿಗೆ ಈ ವರ್ಗಾವಣೆ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಲಾಗಿದೆ. ಒಂದೊಮ್ಮೆ ಇವರ ಕರ್ತವ್ಯ ನಿರ್ವಹಣೆ ಬಗ್ಗೆ ಯಾರಾದರೂ ಅನುಮಾನಪಟ್ಟು ದೂರು ನೀಡಿದ್ದಲ್ಲಿ ಸೂಕ್ತ ವಿಚಾರಣೆ ನಡೆಸಿ, ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಲ್ಲದೆ ತಪ್ಪು ಮಾಡಿದ್ದರೆ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ವರ್ಗಾವಣೆ ಮಾರ್ಗಸೂಚಿಗಳು ಕೇವಲ ಜಿಲ್ಲಾ ಚುನಾವಣಾ ಅಧಿಕಾರಿಗಳು,ಉಪ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿಗೆ ಮಾತ್ರ ಅನ್ವಯವಾಗಲ್ಲ. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿಭಾಗ,ವಲಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಸಬ್‌ಇನ್ಸ್‌ಪೆಕ್ಟರ್‌ಗಳಿಗೂ ಅನ್ವಯವಾಗುತ್ತದೆ. ವರ್ಗಾವಣೆ ಮಾರ್ಗಸೂಚಿ ಜೊತೆಗೆ 2008ರಲ್ಲಿ ಹೊರಡಿಸಲಾಗಿದ್ದ ಸೂಚನೆಗಳನ್ನು ಸಹ ಅಡಕಗೊಳಿಸಲಾಗಿದ್ದು, ಅವು ಕಾರ್ಯಗತಗೊಳ್ಳುವುದನ್ನು ಖಾತರಿಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ಸಂಬಂಧ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.