Advertisement

ಕೆರೂರಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸಿ

03:04 PM Jul 22, 2022 | Team Udayavani |

ಕೆರೂರ: ಗಲಭೆ ನಡೆದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಅವುಗಳನ್ನು ಕೂಡಲೇ ಬದಲಾಯಿಸಿ, ಹೊಸದಾಗಿ ಕೂಡಲೇ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆಂಚಪ್ಪ ಅವರಿಗೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕಕುಮಾರ ಸೂಚಿಸಿದರು.

Advertisement

ಗುರುವಾರ ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಾಗರಿಕ ಮತ್ತು ಯುವ ಜನ ಸಮಿತಿ ಸಭೆ ಹಾಗೂ ಸಾರ್ವಜನಿಕ ಕುಂದು ಕೊರತೆ ಆಲಿಕೆಯ ವೇಳೆ ಅವರು ಮಾತನಾಡಿದರು.

ಪ್ರಮುಖ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೊಂದಿರುವ ಈ ಪಟ್ಟಣದಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚುತ್ತಿದ್ದು ನಿಯಂತ್ರಣಕ್ಕಾಗಿ ಸಿಸಿ ಕ್ಯಾಮೆರಾಗಳ ಅವಶ್ಯಕತೆ ಇದೆ ಎಂದರು.

ಕೆರೂರ ಠಾಣೆಯಲ್ಲಿ ಹೊಸದಾಗಿ ಮುಖಂಡರ, ಸಲಹೆಗಾರರ ಹಾಗೂ ಯುವ ಪಡೆಯ ಶಾಂತಿ ಸಮಿತಿ ರಚಿಸಬೇಕು. ಇದು ಅಪರಾಧ ಚಟುವಟಿಕೆ, ಗಲಾಟೆಗಳ ನಿಯಂತ್ರಣಕ್ಕೆ ಅವಶ್ಯಕವಾಗಿದೆ. ಎರಡೂ ಸಮಾಜಗಳಲ್ಲಿನ ಹಿರಿಯರು ಜವಾಬ್ದಾರಿ ಹೊತ್ತು ಹೊಣೆಗಾರಿಕೆ ಪ್ರದರ್ಶಿಸಬೇಕು. ಯುವಕರಿಗೆ ಸೂಕ್ತ ಬುದ್ಧಿವಾದ ಹೇಳಿ, ಸರಿದಾರಿಗೆ ತರಬೇಕು. ಇಲ್ಲದಿದ್ದರೆ ನಮ್ಮ ಪೊಲೀಸ್‌ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅದನ್ನು ಎದುರಿಸಲು ಕಿಡಿಗೇಡಿಗಳು ಸಜ್ಜಾಗುವಂತೆ ಎಡಿಜಿಪಿ ಅಲೋಕಕುಮಾರ ಎಚ್ಚರಿಕೆ ನೀಡಿದರು.

ಐಜಿಪಿ ಎನ್‌.ಸತೀಶಕುಮಾರ ಮಾತನಾಡಿ, ಗಲಾಟೆ ನಿರತ ಹುಡುಗರ ಮೇಲೆ ಸಮಾಜದ ಪ್ರಮುಖರ ನಿಯಂತ್ರಣವಿಲ್ಲದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ನಾಗರಿಕರು ಸಮಾಜದಲ್ಲಿ ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕು. ಪೊಲೀಸ್‌ ಇಲಾಖೆ ಗಲಭೆ ನಿರತ ತಪ್ಪಿತಸ್ಥರ ಮೇಲೆ ರೌಡಿಶೀಟರ್‌ ಕಾನೂನು ಜಾರಿಗೊಳಿಸುತ್ತಿದೆ. 30 ವರ್ಷಗಳ ಕಾಲ ರೌಡಿಶೀಟರ್‌ನಲ್ಲಿ ದಾಖಲಿಸುತ್ತೇವೆ. ಇದರಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಪೊಲಿಸ್‌, ಕಾನೂನು ಬಗೆಗೆ ಗೌರವದಿಂದ ನಡೆದುಕೊಳ್ಳದಿದ್ದರೆ ಕಠಿಣ ಕ್ರಮಗಳ ಮೂಲಕ ಶಾಂತಿ ಕದಡುವ ದುಷ್ಟರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next