Advertisement

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

01:43 AM Sep 19, 2020 | mahesh |

ಮಂಗಳೂರು/ಉಡುಪಿ: ಕಳೆದ ಒಂದು ವಾರದಿಂದ ನಿರಂತರವಾಗಿ ಪೊಲೀಸ್‌ ಕಾನ್‌ಸ್ಟೆಬಲ್‌ನಿಂದ ಹಿಡಿದು ಪೊಲೀಸ್‌ ವರಿಷ್ಠಾಧಿಕಾರಿಗಳ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ರಚಿಸಿ ಜನರಿಂದ ಆರ್ಥಿಕ ನೆರವು ಯಾಚಿಸಿ ವಂಚನೆ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಫೇಸ್‌ಬುಕ್‌/ಇನ್‌ಸ್ಟಾಗ್ರಾಂ ಖಾತೆ ಗಳಲ್ಲಿರುವ ಮೂಲ ಡಿಪಿ/ ಪೊಟೋವನ್ನು ನಕಲು ಮಾಡಿ ನಕಲಿ ಫೇಸ್‌ಬುಕ್‌/ಇನ್‌ಸ್ಟಾಗ್ರಾಂ ಖಾತೆ ತೆರೆದು ಅವರ ಸಂಪರ್ಕದಲ್ಲಿರುವ ಗೆಳೆಯರಿಗೆ ಫ್ರೆಂಡ್‌ ರಿಕ್ವೆಸ್ಟ್‌ , ಭಾವನಾತ್ಮಕ ಸಂದೇಶ ಕಳುಹಿಸಿ ಹಣ ವರ್ಗಾಯಿಸುವಂತೆ ಕೋರುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಸೈಬರ್‌ ವಂಚಕರ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು. ಖಾತರಿ ಮಾಡಿಕೊಳ್ಳದೆ ಹಣ ವರ್ಗಾವಣೆ ಮಾಡಬಾರದು ದ.ಕ. ಎಸ್‌ಪಿ ಲಕ್ಷ್ಮೀ ಪ್ರಸಾದ್‌ ಅವರು ತಿಳಿಸಿದ್ದಾರೆ.

ಪ್ರೊಫೈಲ್‌ ಚಿತ್ರವನ್ನು ಕಾಪಿ/ಡೌನ್‌ಲೋಡ್‌ ಮಾಡಲು ಆಗದಂತೆ ಲಾಕ್‌ ಮಾಡಿಟ್ಟುಕೊಳ್ಳಬೇಕು. ಫೇಸ್‌ಬುಕ್‌/ಇನ್‌ಸ್ಟಾಗ್ರಾಂನಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ದೊರಕದಂತೆ ಪ್ರೈವೆಸಿ ಸೆಟ್ಟಿಂಗ್‌ ಮುಖಾಂತರ ಹೈಡ್‌ ಮಾಡಿ ಖಾತೆ ಉಪಯೋಗಿಸಬೇಕು ಎಂದಿದ್ದಾರೆ.

ಠಾಣೆಗೆ ಮಾಹಿತಿ ನೀಡಿ
ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸಹಿತ ಸಾಮಾಜಿಕ ಜಾಲತಾಣಗಳಿಂದ ಆರ್ಥಿಕ ನೆರವು ಕೇಳಿ ಸಂದೇಶ ಬಂದರೆ ಅಥವಾ ಹಣ ವರ್ಗಾಯಿಸುವಂತೆ ಒತ್ತಾಯ ಬಂದರೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆ, ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಎಸ್‌ಪಿ ತಿಳಿಸಿದ್ದಾರೆ.

ಮೃತಪಟ್ಟವರ ಹೆಸರಿನಲ್ಲಿಯೂ ಖಾತೆ
ಇತ್ತೀಚೆಗೆ ಮೃತಪಟ್ಟ ಬಂದರು ಠಾಣೆಯ ಪೊಲೀಸ್‌ ದಿನೇಶ್‌ ಅವರ ಹೆಸರಿನಲ್ಲಿಯೂ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಗೆಳೆಯರಿಂದ ಹಣ ಕೇಳಲಾಗಿದೆ. ಹಿಂದಿಯಲ್ಲೇ ಸಂದೇಶಗಳನ್ನು ಕಳುಹಿಸಲಾಗಿದ್ದು ಇದರಿಂದ ಸಂಶಯಗೊಂಡ ಗೆಳೆಯರು ವಿಚಾರಿಸಿದಾಗ ವಂಚನೆಗೆ ಯತ್ನಿಸಿರುವುದು ಗೊತ್ತಾಗಿದೆ. ಇತರ ಕೆಲವು ಮಂದಿ ಪೊಲೀಸರ ಹೆಸರಿನಲ್ಲಿಯೂ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಸೈಬರ್‌ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಈ ರೀತಿಯಾದ ಹೆಚ್ಚಿನ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

ಉಡುಪಿಯಲ್ಲೂ ಪ್ರಕರಣ ಬೆಳಕಿಗೆ
ಉಡುಪಿ: ಉಡುಪಿಯಲ್ಲೂ ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಅಕೌಂಟ್‌ ಇರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕರಾವಳಿ ಕಾವಲು ಪಡೆ ಎಸ್ಪಿ ಅವರ ಫೋಟೋ ಬಳಸಿಕೊಂಡು ಕೋಸ್ಟಲ್‌ ಎಸ್ಪಿ ಎಸ್‌.ಪಿ.ಸಿಂಗ್‌ ಐಡಿಯಲ್ಲಿ ಖಾತೆಯನ್ನು ತೆರೆದಿದ್ದಾರೆ. ಸೆ. 18ರಂದು ಕರಾವಳಿ ಪೊಲೀಸ್‌ ಪಡೆ ಎಸ್ಪಿ ಚೇತನ್‌ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ ಸಿಂಗ್‌ ಎಂದು ಫೇಸ್‌ಬುಕ್‌ ಖಾತೆ ತೆರೆದು, ಅದರಲ್ಲಿ ಹುದ್ದೆ ಹಾಗೂ ಮಲ್ಪೆಯಲ್ಲಿ ವಾಸಿಸುತ್ತಿರುವ ಕುರಿತು ಮಾಹಿತಿಯನ್ನು ಹಾಕಲಾಗಿತ್ತು. ಈ ಖಾತೆ ತೆರೆದ ಅರ್ಧ ಗಂಟೆಯಲ್ಲಿಯೇ ಎಸ್ಪಿ ಚೇತನ್‌ ಕುಮಾರ್‌ಗೆ ಮಾಹಿತಿ ಲಭಿಸಿದ್ದು ಕೂಡಲೇ ಸ್ಥಳೀಯ ಮತ್ತು ಬೆಂಗಳೂರು ಸೈಬರ್‌ ಕ್ರೈಂಗೆ ದೂರು ನೀಡಿದರು. ಜತೆಗೆ ಫೇಸ್‌ ಬುಕ್‌ಗೂ ದೂರು ನೀಡಿದರು.

ನಿರಂತರ ವಂಚನೆ ಯತ್ನ
ವಿಶೇಷ ಎಂದರೆ ಕಳೆದ ಒಂದು ವಾರದಿಂದ ನಿರಂತರವಾಗಿ ಈ ರೀತಿಯಾಗಿ ವಂಚಿಸುವ ಯತ್ನ ನಡೆದಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರ ಹೆಸರನ್ನೇ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮಂಗಳೂರು ಸಂಚಾರ ವಿಭಾಗದ ಎಸಿಪಿ ನಟರಾಜ್‌, ಬಂಟ್ವಾಳ, ಬೆಳ್ತಂಗಡಿಯ ಪೊಲೀಸರು ಹಾಗೂ ಇತರ ಕೆಲವು ಅಧಿಕಾರಿ, ಸಿಬಂದಿಯ ಫೋಟೋ/ ಹೆಸರು ಬಳಕೆ ಮಾಡಿ ಮೆಸೆಂಜರ್‌ ಮೂಲಕ ಪರಿಚಯಸ್ಥರು, ಗೆಳೆಯರೊಂದಿಗೆ ಚಾಟ್‌ ಮಾಡಿ ಅನಂತರ ಹಣ ಕಳುಹಿಸಿಕೊಡಲು ಕೇಳಿಕೊಂಡಿರುವುದು ಗೊತ್ತಾಗಿದೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮೆಸೇಜ್‌ ಮಾಡಲಾಗಿದೆ. ಎಸಿಪಿ ನಟರಾಜ್‌ ಅವರ ಹೆಸರನ್ನು ಬಳಕೆ ಮಾಡಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಲಾಗಿದೆ. ಆ ನಕಲಿ ಖಾತೆಯಿಂದ ಹಲವರಿಗೆ ಸಂದೇಶ ಕಳುಹಿಸಲಾಗಿದೆ.

ನನ್ನ ಹೆಸರಲ್ಲಿ ಫೇಸ್‌ಬುಕ್‌ ಖಾತೆ ತೆರೆದಿರುವುದು ಗಮನಕ್ಕೆ ಬಂದ ತಕ್ಷಣವೇ ಬೆಂಗಳೂರು ಸೈಬರ್‌ ಸೆಲ…, ಸ್ಥಳೀಯ ಪೊಲಿಸರಿಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗ್ರತೆ ವಹಿಸಬೇಕು.
ಚೇತನ್‌ , ಎಸ್ಪಿ ಕರಾವಳಿ ಕಾವಲು ಪೊಲೀಸ್‌ ಪಡೆ.

Advertisement

Udayavani is now on Telegram. Click here to join our channel and stay updated with the latest news.

Next