ರಾಯಚೂರು: ಮಾವಿನಕೆರೆ ಸ್ಥಳವನ್ನು ನಗರಸಭೆ ಸದಸ್ಯರು, ಅಧಿಕಾರಿಗಳು ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೊಳ್ಳೆ ಹೊಡೆಯುತ್ತಿದ್ದಾರೆ. ನಕಲಿ ಇ-ಖಾತೆ ಸೃಷ್ಟಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ 599 ನಿವೇಶನಗಳಿದ್ದು, ಆರ್‌ಡಿಎ ಮತ್ತು ನಗರಸಭೆಯಿಂದ ನಿವೇಶನಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಆದರೆ, ಸುತ್ತಮುತ್ತಲಿನ ಮಾವಿನಕೆರೆ ಸರ್ಕಾರಿ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು, ಅಕ್ರಮ ನಿವೇಶನಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಹಿಂದೆ ನಗರಸಭೆ ಸಿಬ್ಬಂದಿ ಕೈವಾಡವಿದೆ ಎಂದರು.
ಮಾವಿನಕೆರೆ ಸುತ್ತಲೂ ಅನಧಿಕೃತವಾಗಿ ಟ್ಯಾಕ್ಸ್ ಡೂಪ್ಲಿಕೇಟ್, ಎಂಪಿಎಲ್ ನಂಬರ್, ಬಾರ್ ನಂಬರ್ ಸೃಷ್ಟಿ ಮಾಡಿಕೊಂಡು ಸರ್ಕಾರ ಮತ್ತು ನಗರ ಸಭೆ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಐಡಿಎಸ್‌ಎಂಟಿ ಲೇಔಟ್‌ನಲ್ಲಿ ಯಾವುದೇ ಬಾರ್ ನಂಬರ್ ಇಲ್ಲದ, ಸಂಬಂಧ ಇರಲಾರದ ಸಂಖ್ಯೆಗಳನ್ನು, ಆರ್‌ಡಿಎ ಅನುಮೋದಿತವಲ್ಲದ ನಿವೇಶನಗಳನ್ನು ಪತ್ತೆ ಹಚ್ಚಬೇಕಿದೆ. ಮಾವಿನ ಕೆರೆಗೆ ಮಣ್ಣು ಹಾಕುವುದು ಟ್ಯಾಕ್ಸ್ ಖಾತಾ ಪಡೆದು ನೋಂದಣಿ ಮಾಡಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಮಾರುವ ಮೂಲಕ ಮೋಸ ಮಾಡಲಾಗುತ್ತಿದೆ ಎಂದರು.
ಈ ಕೂಡಲೇ ಐಡಿಎಸ್‌ಎಂಟಿಯ ನಿಜವಾದ 599 ನಿವೇಶನಗಳನ್ನು ಪತ್ತೆ ಹಚ್ಚಬೇಕು. ಇನ್ನುಳಿದ ಅಕ್ರಮ ನಿವೇಶನಗಳ ಭೂಗಳ್ಳರು ಯಾರು, ಅಕ್ರಮವಾಗಿ ಮನೆ ಕಟ್ಟಿದವರು ಯಾರು, ಎಲ್ಲರ ಲಿಂಕ್ ದಾಖಲಾತಿ ಪರಿಶೀಲಿಸಿ ಅಕ್ರಮ ಇದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಎಂ.ವಸಂತಕುಮಾರ್, ರವಿಂದ್ರನಾಥ ಪಟ್ಟಿ, ಎಂ.ಈರಣ್ಣ, ಯಲ್ಲಪ್ಪ, ಅನಿಲ್ ಕುಮಾರ್, ಶರಣಬಸವ ಸೇರಿ ಅನೇಕರು ಇದ್ದರು.