Advertisement

ನಕಲಿ ದಾಖಲೆಪತ್ರ ಸೃಷ್ಟಿಸಿ ವಂಚಿಸುವ ಜಾಲ ಪತ್ತೆ

10:42 AM Sep 24, 2017 | Team Udayavani |

ಮಂಗಳೂರು: ವಾಹನಗಳಿಗೆ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಆ ಸಂಸ್ಥೆಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ವಂಚಿಸುತ್ತಿದ್ದ ಹಾಗೂ ನಕಲಿ ನೋಂದಣಿ ನಂಬರ್‌ ಪ್ಲೇಟ್‌ ಅಳವಡಿಸಿ ವಾಹನಗಳನ್ನು ಉಪಯೋಗಿಸುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಈ ಬಗ್ಗೆ ಒಬ್ಬನನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ. 


ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್‌ ನೊರೋನ್ಹಾ(41)ನನ್ನು ಬಂಧಿಸಲಾಗಿದ್ದು, ಬೆಂದೂರಿನ ವಿನ್ಸೆಂಟ್‌ ಸಿಕ್ವೇರಾ (59) ಮತ್ತು ನೀರುಮಾರ್ಗದ ವಿಲ್ಫ್ರೆಡ್ ಮಸ್ಕರೇನ್ಹಸ್‌ (30) ಸಹಿತ ಇತರರ ಬಂಧನ ಬಾಕಿಯಿದೆ. 

Advertisement

ಅವರಲ್ಲಿ ವಿನ್ಸೆಂಟ್‌ ಮತ್ತು ವಿಲ್ಫ್ರೆಡ್ ಅನಾರೋಗ್ಯಕ್ಕೀಡಾದ ಕಾರಣ ಇನ್ನಷ್ಟೇ ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ 81,9000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ವಿವರ: ಮಂಗಳೂರು ಮೂಡು ಶೆಡ್ಡೆ  ಮಧ್ಯೆ ಸಂಚರಿಸುವ 3ಬಿ 3ಬಿ (ಕೆಎ-19- ಬಿ-4866) ಬಸ್ಸಿಗೆ ನಕಲಿ ನೋಂದಣಿ ಸಂಖ್ಯೆ ಅಳವಡಿಸಿ ಸಂಚಾರ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಯನ್ವಯ ಆ ಬಸ್ಸನ್ನು ಮೂಡುಶೆಡ್ಡೆ ಬಳಿ ಪರಿಶೀಲಿಸಿದಾಗ  ಆ ಬಸ್ಸಿಗೆ ಬೇರೆ ಬಸ್ಸಿನ ಚಾಸಿಸ್‌ ನಂಬ್ರ ಹಾಗೂ ನೋಂದಣಿ ಸಂಖ್ಯೆ ಅಳವಡಿಸಿ ಓಡಾಟ ನಡೆಸುತ್ತಿರುವುದು ಪತ್ತೆಯಾಯಿತು. ಈ ರೀತಿಯಾಗಿ ವಾಹನದ ನಂಬ್ರವನ್ನು ಬದಲಾವಣೆ ಮಾಡಿದ ಆರೋಪಿ ನವೀನ್‌ ನೊರೋನ್ಹಾನನ್ನು ವಶಕ್ಕೆ ಪಡೆಯಲಾಯಿತು. ಆತನನ್ನು ವಿಚಾರಿಸಿದಾಗ ಆತ ಈ ಬಸ್ಸನ್ನು ವ್ಯಕ್ತಿಯೊಬ್ಬರಿಂದ ಖರೀದಿಸಿ ಅದಕ್ಕೆ ತನ್ನ ಮಾಲಕತ್ವದ ಬಸ್ಸಿನ ಚಾಸಿಸ್‌ ನಂಬ್ರವನ್ನು ವಿನ್ಸೆಂಟ್‌ ಸಿಕ್ವೇರಾ ಮಾಲಕತ್ವದ ನಗರದ ಪಂಪ್‌ವೆಲ್ ನ್ಯಾಶನಲ್‌ ಎಂಜಿನಿಯರಿಂಗ್‌ ವರ್ಕ್‌ನಲ್ಲಿ ಅಳವಡಿಸಲಾಗಿವುದು ಬೆಳಕಿಗೆ ಬಂತು. ಇದೇ ರೀತಿ ನವೀನ್‌ ನೊರೋನ್ಹಾ ನೀಡಿದ ಮಾಹಿತಿಯಂತೆ ನೀರುಮಾರ್ಗ ವಿಲ್ಫ್ರೆಡ್ ಮಸ್ಕರೇನ್ಹಸ್‌ ಮಾಲ ಕತ್ವದ 2 ಟ್ರಕ್‌, 1 ಜೆಸಿಬಿ, ನಕಲಿ ಚಾಸಿಸ್‌ ನಂಬ್ರ ಸೃಷ್ಟಿ ಮಾಡಲು ಉಪಯೋಗಿಸಿದ ಉಪಕರಣ ವಶಪಡಿಸಿಕೊಳ್ಳಲಾಗಿದೆ. 

ಸಮಗ್ರ ತನಿಖೆಗೆ ನಿರ್ಧಾರ:  ಈ ರೀತಿ ಸರಕಾರಕ್ಕೆ ತೆರಿಗೆ ಹಣ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಮರುಪಾವತಿಸದೆ ವಂಚನೆ ಮಾಡುವ ವ್ಯವಸ್ಥಿತ ಜಾಲ ನಗರದಲ್ಲಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸರು ಬಲೆ ಬೀಸಿದ್ದಾರೆ.ಈಗ ಪತ್ತೆಯಾದ ಪ್ರಕರಣದಲ್ಲಿ ಮೇಲ್ನೋಟಕ್ಕೆ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, 10ಕ್ಕೂ ಅಧಿಕ ಮಂದಿ ಈ ಜಾಲದ ಹಿಂದೆ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. 

ಆರ್‌ಟಿಒ ನಕಲಿ ಸಹಿ, ಮೊಹರು: ಆರೋಪಿಗಳು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಲಾಭಗಳಿಸುವ ಉದ್ದೇಶದಿಂದ ಒಟ್ಟು ಸೇರಿ ಒಳಸಂಚು ನಡೆಸಿ ಲಾರಿ ಮತ್ತು ಜೆಸಿಬಿಯನ್ನು ಕಳವು ಮಾಡಿಕೊಂಡು ಅವುಗಳಲ್ಲಿ ಬಸ್ಸು ಮತ್ತು ಲಾರಿಗಳ ಚಾಸಿಸ್‌ ನಂಬ್ರಗಳನ್ನು ಅದಲು ಬದಲಾಯಿಸಿ ಹಾಗೂ ಎಂಜಿನ್‌ ನಂಬ್ರಗಳನ್ನು ತಿರುಚಿ ಅನಂತರ ಬೇರೆ ನೋಂದಣಿ ನಂಬ್ರಗಳನ್ನು ನೀಡಿ ಅವು ನೈಜವೆಂಬುದಾಗಿ ನಕಲಿ ದಾಖಲೆ ಪತ್ರ ಸೃಷ್ಟಿಸಿ  ಆರ್‌ಟಿಒ ಇಲಾಖೆಯ ನಕಲಿ ಸಹಿ ಮೊಹರು  ಸೃಷ್ಟಿಸಿ ಸಂಬಂಧಪಟ್ಟ ಇಲಾಖೆಗೆ  ಹಾಗೂ ಹಣಕಾಸು ಸಂಸ್ಥೆಗಳಿಗೆ ಮೋಸ ಮತ್ತು ವಂಚನೆ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next