ಉಳಿತಾಯದ ಹಣಕ್ಕೆ ಹೆಚ್ಚು ಬಡ್ಡಿ ಬರುವಲ್ಲಿ ಠೇವಣಿ ಇರಿಸುವುದನ್ನು ಎಲ್ಲ ಹೂಡಿಕೆದಾರರು ಇಷ್ಟಪಡುತ್ತಾರೆ. ಹಾಗೆಂದು ಹೆಚ್ಚು ಬಡ್ಡಿಯ ಆಸೆಗಾಗಿ ರಿಸ್ಕ್ ಇರುವೆಡೆ ಠೇವಣಿ ಇಡುವುದು ಸರಿಯಲ್ಲ.
ಅನೇಕರು ಆಕರ್ಷಕ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಎಫ್ ಡಿ ಇಡುತ್ತಾರೆ; ಆದರೆ ಆ ಹಣಕಾಸು ಸಂಸ್ಥೆಗಳು ಎಷ್ಟು ಸುಭದ್ರ ಮತ್ತು ಸುರಕ್ಷಿತವಾಗಿವೆ ?ಅಲ್ಲಿ ನಾವಿಡುವ ಠೇವಣಿ ಎಷ್ಟು ಭದ್ರವಾಗಿರುತ್ತದೆ ? ಎಂಬುದನ್ನು ಕೂಡ ನಾವು ತಿಳಿದುಕೊಂಡಿರುವುದು ಅಗತ್ಯ.
ಈಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ಮತ್ತು ರಿವರ್ಸ್ ರಿಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಿದೆ. ರಿಪೋ ದರ ಮತ್ತು ರಿವರ್ಸ್ ರಿಪೋ ದರ ಎಂದರೆ ಬ್ಯಾಂಕುಗಳು ಆರ್ಬಿಐ ನಲ್ಲಿ ಇರಿಸುವ ಹಣದ ಮೇಲೆ ಕೊಡಲಾಗುವ ಬಡ್ಡಿ ಮತ್ತು ಬ್ಯಾಂಕುಗಳು ಆರ್ಬಿಐ ನಿಂದ ಪಡೆಯುವ ಸಾಲದ ಮೇಲೆ ವಿಧಿಸಲಾಗುವ ಬಡ್ಡಿ ದರ. ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ RBI ಶೇ.0.25ರಷ್ಟು ಹೆಚ್ಚಿಸುವ ಮೂಲಕ ರಿಪೋ ಬಡ್ಡಿಯನ್ನು ಶೇ.6 ಮತ್ತು ರಿವರ್ಸ್ ರಿಪೋ ಬಡ್ಡಿ ದರವನ್ನು ಶೇ.6.25ಕ್ಕೆ ನಿಗದಿಸಿದೆ.
ಇದರ ಪರಿಣಾವಾಗಿ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುತ್ತವೆ. ಅದೇ ರೀತಿ ಗ್ರಾಹಕರಿಂದ ಪಡೆದುಕೊಳ್ಳುವ ಠೇವಣಿ ಮೇಲಿನ ಬಡ್ಡಿ ದರವನ್ನು ಕೂಡ ಸ್ವಲ್ಪ ಮಟ್ಟಿಗೆ ಏರಿಸುತ್ತದೆ. ಈಚೆಗೆ ನಾವು ಮೊದಲನೇ ಬದಲಾವಣೆಯನ್ನು ಕಂಡಿದ್ದೇವೆ; ಎರಡನೇ ಬದಲಾವಣೆ, ಎಂದರೆ ಬ್ಯಾಂಕ್ ಠೇವಣಿ ಬಡ್ಡಿ ದರ ಏರಿಕೆಯನ್ನು ಸದ್ಯದಲ್ಲೇ ಕಾಣಲಿಕ್ಕಿದ್ದೇವೆ ! ಸಾಮಾನ್ಯ ಗ್ರಾಹಕರ ಠೇವಣಿಯ ಮೇಲಿರುವ ಬಡ್ಡಿಗಿಂತ ಶೇ.0.50 ಹೆಚ್ಚು ಬಡ್ಡಿಯನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ ಎನ್ನುವುದು ಗಮನಾರ್ಹ.
ಬ್ಯಾಂಕುಗಳಿಗಿಂತ ಇನ್ನೂ ಸ್ವಲ್ಪ ಹೆಚ್ಚಿನ ಬಡ್ಡಿಯನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿ ಎಫ್ ಸಿ = ನಾನ್ ಬ್ಯಾಂಕಿಂಗ್ ಫಿನಾನ್ಸ್ ಕಂಪೆನಿಗಳು) ಎಫ್ ಡಿ ಮೇಲೆ ನೀಡುತ್ತವೆ ಎನ್ನುವುದು ಗಮನಾರ್ಹ. ಆದರೆ ಅವುಗಳ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಠೇವಣಿ ಮೇಲೆ ಹೆಚ್ಚು ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಮುನ್ನುಗ್ಗುವುದು ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ.
ಆದುದರಿಂದ ಅಂತಹ ಎನ್ ಬಿ ಎಫ್ ಸಿ ಕಂಪೆನಿಗಳ ಠೇವಣಿಗಳಿಗೆ ಇರುವ ರೇಟಿಂಗ್ ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಎನ್ ಬಿ ಎಫ್ ಸಿ ಗಳ ಕ್ಷಮತೆ, ಸಾಮರ್ಥ್ಯ , ಹಣಕಾಸು ಸ್ವಾಸ್ಥ್ಯ ಇತ್ಯಾದಿಗಳನ್ನು ಅಧ್ಯಯನ ಮಾಡಿಕೊಂಡು ರೇಟಿಂಗ್ ನೀಡುವ ಸಂಸ್ಥೆಗಳೇ ಇರುತ್ತವೆ. ಅವುಗಳಲ್ಲಿ ಕೇರ್, ಕ್ರೈಸಿಲ್, ಐಕ್ರಾ ಇತ್ಯಾದಿಗಳು ಪ್ರಮುಖವಾಗಿವೆ.
ಠೇವಣಿಗಳ ಮೇಲೆ ಉತ್ತಮ ಬಡ್ಡಿ ನೀಡುವ ಕೆಲವೊಂದು ಸದೃಢ ಎನ್ ಬಿ ಎಫ್ ಸಿ ಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ :
ಒಂದು ವರ್ಷದ ಮಟ್ಟಿಗೆ ಉಳಿತಾಯದ ಹಣವನ್ನು ಸದೃಢ ಎನ್ ಬಿ ಎಫ್ ಸಿ ಕಂಪೆನಿಯಲ್ಲಿ ಠೇವಣಿ ಇಡುವುದಾದರೆ ದಿವಾನ್ ಹೌಸಿಂಗ್ ಫಿನಾನ್ಸ್ ಲಿಮಿಟೆಡ್ ಸಂಸ್ಥೆ ಒಂದು ಉತ್ತಮ ಆಯ್ಕೆಯಾಗಬಹುದು. ಈ ಕಂಪೆನಿಯ ಎಫ್ ಡಿ ಗಳಿಗೆ ಕೇರ್ ಸಂಸ್ಥೆ AAA ಗ್ರೇಡ್ ನೀಡಿದೆ; ಹಾಗೆಯೇ Brick-works ಎಂಬ ಇನ್ನೊಂದು ಸಂಸ್ಥೆ FAAA ರೇಟಿಂಗ್ ನೀಡಿದೆ.
ಈ ರೇಟಿಂಗ್ ನ ಅರ್ಥ ಈ ಕಂಪೆನಿಯಲ್ಲಿನ ಹೂಡಿಕೆದಾರರ ಠೇವಣಿಗಳು ಹೆಚ್ಚು ಸುಭದ್ರ ಮತ್ತು ಸುರಕ್ಷಿತ; ಹಾಗೆಯೇ ಅವಧಿ ತೀರಿದ ತತ್‌ಕ್ಷಣ ಅವುಗಳ ಮರುಪಾವತಿ ಖಚಿತ ಮತ್ತು ನಿರಾತಂಕ ಎಂಬುದಾಗಿದೆ. ಇಲ್ಲಿನ ಠೇವಣಿಗಳಿಗೆ ಶೇ.7.4 ಬಡ್ಡಿ ಸಿಗುತ್ತದೆ; ಹಿರಿಯ ನಾಗರಿಕರಿಗೆ ಶೇ.0.4 ಹೆಚ್ಚು ಬಡ್ಡಿ ಇದೆ, ಎಂದರೆ ಅದು ಶೇ.8.1 ಆಗುತ್ತದೆ. ಬಡ್ಡಿ ಲೆಕ್ಕಾಚಾರ ಕಾಂಪೌಂಡಿಗ್ ನೆಲೆಯಲ್ಲಿ ಆಗುತ್ತದೆ. ಆದರೆ ಕನಿಷ್ಠ ಠೇವಣಿ ಮೊತ್ತ 25,000 ರೂ.
ದಿವಾನ್ ಹೌಸಿಂಗ್ ಫಿನಾನ್ಸ್ ಲಿಮಿಟೆಡ್ ಸಂಸ್ಥೆಯ 18 ತಿಂಗಳ ಅವಧಿಯ ಸ್ವಯಂ ಸಿದ್ಧ ಯೋಜನೆಯಲ್ಲಿ ಠೇವಣಿ ಇಡುವುದಾದರೆ ಶೇ.7.8ರ ಬಡ್ಡಿ ಇದೆ; ಸೀನಿಯರ್ ಸಿಟಿಜನ್ ಗಳಿಗೆ ಶೇ.0.4 ಹೆಚ್ಚು; ಎಂದರೆ ಅದು ಶೇ.8.2.
ಇದೇ ರೀತಿ ಮಹೀಂದ್ರ ಆ್ಯಂಡ್ ಮಹೀಂದ್ರ ಫಿನಾನ್ಸಿಯಲ್ ಸರ್ವಿಸಸ್ (ಎಂಎಂಎಫ್ಎಸ್) ಕಂಪೆನಿಯಲ್ಲೂ ನಿರಖು ಠೇವಣಿಗೆ ಆಕರ್ಷಕ ಬಡ್ಡಿ ಇದೆ. ಕ್ರೈಸಿಲ್ ಕ್ರಮಾಂಕ ಸಂಸ್ಥೆ ಎಂಎಂಎಫ್ಎಸ್ ಠೇವಣಿ ಯೋಜನೆಗೆ FAAA ಕ್ರಮಾಂಕ ನೀಡಿದೆ. ಎಂಎಂಎಫ್ಎಸ್ ಗೆ ದೇಶಾದ್ಯಂತ 1,000ಕ್ಕೂ ಅಧಿಕ ಶಾಖೆಗಳಿದ್ದು ಇವು ಸಂಪೂರ್ಣವಾಗಿ ಗ್ರಾಮ ಮುಖೀ ಸೇವೆಗೆ ಹೆಸರಾಗಿವೆ.
ಬಜಾಜ್ ಫಿನಾನ್ಸ್ ಕಂಪೆನಿಯ ನಿರಖು ಠೇವಣಿ ಯೋಜನೆ ಕೂಡ ಆಕರ್ಷಕ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಇಲ್ಲಿ ಶೇ.8.5ರ ಬಡ್ಡಿ ಸಿಗುತ್ತದೆ. ಆದರೆ ಕನಿಷ್ಠ ಠೇವಣಿ ಮೊತ್ತ 25,000 ರೂ. ಇದೆ. ಈ ಕಂಪೆನಿಯ ಠೇವಣಿಗಳಿಗೆ ಕ್ರೈಸಿಲ್ ನವರು FAAA ಕ್ರಮಾಂಕ ನೀಡಿದ್ದಾರೆ; ಐಕ್ರಾ ದವರು ಎಂ ಎಎಎ ಕ್ರಮಾಂಕ ನೀಡಿದ್ದಾರೆ. ಈ ಕಂಪೆನಿಯಲ್ಲಿ ಠೇವಣಿಗಳ ಮೇಲಿನ ಮೂಲ ಬಡ್ಡಿ ದರ ಶೇ.7.9 ಇದೆ. ಹಿರಿಯ ನಾಗರಿಕರಿಗೆ ಶೇ.0.25 ಹೆಚ್ಚು ಬಡ್ಡಿ ಇದೆ. ಎಂದರೆ ಇದು ಶೇ.8.15ರ ಬಡ್ಡಿಯನ್ನು ನೀಡುತ್ತದೆ.
ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಇಡಬಯಸುವವರಿಗೆ ಬಜಾಜ್ ಫಿನಾನ್ಸ್ ಒಂದು ಉತ್ತಮ ಆಯ್ಕೆಯಾಗಬಹುದು. ಏಕೆಂದರೆ ಬಜಾಜ್ ಫಿನಾನ್ಸ್ ಕಂಪೆನಿಯ ಬಡ್ಡಿ ದರ ಆಫರ್ ಆಕರ್ಷಕವಾಗಿದೆ; ಠೇವಣಿಗೆ ಸುರಕ್ಷತೆ, ಭದ್ರತೆ ಇದೆ. ಬಜಾಜ್ ಫಿನಾನ್ಸ್ ಕಂಪೆನಿಯಲ್ಲಿ 36ರಿಂದ 60 ತಿಂಗಳ ಅವಧಿಗೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಚಕ್ರಬಡ್ಡಿ ರೂಪದಲ್ಲಿ ಶೇ.8.75ರ ಇಳುವರಿ ಸಿಗುತ್ತದೆ. ಈ ಕಂಪೆನಿ ಹಿರಿಯ ನಾಗರಿಕರಿಗೆ ನೀಡುವ ಶೇ.8.30 ಬಡ್ಡಿಯು ಅಂಚೆ ಇಲಾಖೆಯಲ್ಲಿ ಈ ವರ್ಗದವರಿಗೆ ಸಿಗುವ ಬಡ್ಡಿಗೆ ಸಮವಾಗಿರುವುದು ಗಮನಾರ್ಹವಾಗಿದೆ.
ಚೆನ್ನೈ ಮೂಲದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫಿನಾನ್ಸ್ ಮತ್ತು ಶ್ರೀರಾಮ್ ಸಿಟಿ ಫಿನಾನ್ಸ್ ಕಂಪೆನಿ ಐದು ವರ್ಷಗಳ ಮೇಲಿನ ಠೇವಣಿಗೆ ಶೇ.8.5 ಬಡ್ಡಿ ನೀಡುತ್ತದೆ. ಇದಕ್ಕೂ ಕ್ರೈಸಿಲ್ ಮತ್ತು ಐಕ್ರಾ ರೇಟಿಂಗ್ ಇರುವುದರಿಂದ ಇಲ್ಲಿಡಲಾಗುವ ಠೇವಣಿಗಳು ಸುಭದ್ರ ಮತ್ತು ಸುರಕ್ಷಿತ ಎನ್ನಬಹುದಾಗಿದೆ.
ಆದರೂ ಗಮನಿಸಬೇಕಾದ ಸಂಗತಿ ಎಂದರೆ ಎನ್ ಬಿ ಎಫ್ ಸಿ ಕಂಪೆನಿಗಳಿಗೆ ಎಷ್ಟೇ ಉತ್ತಮ ರೇಟಿಂಗ್ ಇದ್ದರೂ ಅಲ್ಲಿನ ಠೇವಣಿಗಳಿಗೆ ವಿಮೆ ಇರುವುದಿಲ್ಲ. ಆದರೆ ಬ್ಯಾಂಕ್ ಠೇವಣಿಗಳಿಗೆ ಒಂದು ಲಕ್ಷ ರೂ. ವರೆಗಿನ ಮೊತ್ತಕ್ಕೆ ವಿಮೆ ಇದೆ.