ಬೆಂಗಳೂರು: ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರ 12 ಮಂದಿ ತಮಿಳುನಾಡಿನಲ್ಲಿ ಸಂಭವಿಸಿದ್ದ ಭೀಕರ ದುರಂತದಲ್ಲಿ ವಿಧಿವಶರಾಗಿದ್ದು, ದುರಂತದಲ್ಲಿ ಬದುಕುಳಿದ ಏಕೈಕ ಗಾಯಾಳು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗೋವಾ ವಿಧಾನಸಭಾ ಚುನಾವಣೆ 2022: ಡಿ.10ರಿಂದ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ
ತೀವ್ರ ಸುಟ್ಟ ಗಾಯದಿಂದ ಬಳಲುತ್ತಿರುವ ಪೈಲಟ್ ಕ್ಯಾ.ವರುಣ್ ಸಿಂಗ್ ಅವರನ್ನು ವೆಲ್ಲಿಂಗ್ಟನ್ ನ ಮಿಲಿಟರಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ನಲ್ಲಿ ಸೂಲೂರು ವಾಯುನೆಲೆಗೆ ತರಲಾಗಿದ್ದು, ಅಲ್ಲಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ವರುಣ್ ಸಿಂಗ್ ಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ವರದಿ ವಿವರಿಸಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಲೈಫ್ ಸಪೋರ್ಟ್ ನಲ್ಲಿದ್ದು, ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಲೋಕಸಭೆಗೆ ತಿಳಿಸಿದ್ದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಈ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸದ್ಯ ಅವರ ಆರೋಗ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜ.ಬಿಪಿನ್ ರಾವತ್ ಪಾರ್ಥಿವ ಶರೀರ ದೆಹಲಿಗೆ:
ಹೆಲಿಕಾಪ್ಟರ್ ದುರಂತದಲ್ಲಿ ವಿಧಿವಶರಾಗಿರುವ ಜ.ಬಿಪಿನ್ ರಾವತ್ ಪಾರ್ಥಿವ ಶರೀರವನ್ನು ಸೂಲೂರು ಏರ್ ಬೇಸ್ ನಿಂದ ದೆಹಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ವರದಿ ತಿಳಿಸಿದೆ. ರಾವತ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ವಾಯುನೆಲೆಯಲ್ಲಿ ಇರಿಸಿದ ನಂತರ ಪ್ರಧಾನಿ, ಸೇನಾಧಿಕಾರಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ ಎಂದು ವರದಿ ಹೇಳಿದೆ.